ಛಾವಲಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಮೂವರು ಅಪರಾಧಿಗಳನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ದೆಹಲಿ ಸರ್ಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಯ ವಿಚಾರಣೆಗೆ ತ್ರಿಸದಸ್ಯ ಪೀಠ ರಚಿಸಲು ಸುಪ್ರೀಂ ಕೋರ್ಟ್ ಬುಧವಾರ ಒಪ್ಪಿಕೊಂಡಿದೆ [ದೆಹಲಿ ಸರ್ಕಾರ, ಗೃಹ ಸಚಿವಾಲಯ ಮತ್ತು ರಾಹುಲ್ ಇನ್ನಿತರರ ನಡುವಣ ಪ್ರಕರಣ].
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬುಧವಾರ ಬೆಳಗ್ಗೆ ಪ್ರಕರಣ ಪ್ರಸ್ತಾಪಿಸಿದರು.
ಹದಿನೆಂಟು ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಆಕೆಯ ಅಂಗಚ್ಛೇದನ ಮಾಡಿದಲ್ಲದೆ ಆಕೆಯ ಖಾಸಗಿ ಅಂಗಗಳಿಗೆ ಸ್ಕ್ರೂಡ್ರೈವರ್‌ನಿಂದ ಚಿತ್ರ ಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಈಗ ಖುಲಾಸೆಗೊಂಡಿರುವ ಪ್ರಕರಣದ ಆರೋಪಿಯೊಬ್ಬ ಆಟೊ ಚಾಲಕರೊಬ್ಬರ ಕತ್ತು ಸೀಳಿ ಕೊಂದಿದ್ದಾನೆ. ಮುಕ್ತ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಬೇಕೆಂದು ನಾವು ಮನವಿ ಮಾಡುತ್ತಿದ್ದೇವೆ. ಈ ಮೊದಲು ಸಿಜೆಐ ನೇತೃತ್ವದ ಪೀಠವೇ ವಿಚಾರಣೆ ನಡೆಸಿದ್ದಾರೆ ಸಿಜೆಐ ಅವರೇ ವಿಚಾರಣೆಯ ನೇತೃತ್ವವಹಿಸಬೇಕು ಎಂಬುದಾಗಿ ಮೆಹ್ತಾ ಕೋರಿದರು.
ಆಗ ಸಿಜೆಐ ಅವರು ತನ್ನನ್ನೂ ಒಳಗೊಂಡಂತೆ, ನ್ಯಾ. ರವೀಂದ್ರ ಭಟ್ ಹಾಗೂ ಬೇಲಾ ತ್ರಿವೇದಿ ಅವರಿರುವ ತ್ರಿಸದಸ್ಯ ಪೀಠ ರಚಿಸುವುದಾಗಿ ಭರವಸೆ ನೀಡಿದರು. ʼಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಕೋರಿಕೆಯನ್ನು ಪರಿಗಣಿಸಲಾಗುವುದು ಎಂದು ನ್ಯಾ. ಬೇಲಾ ಅವರು ತಿಳಿಸಿದರು.
ಪ್ರಕರಣದಲ್ಲಿ ಖುಲಾಸೆಗೊಂಡ ಮರಣದಂಡನೆಗೆ ಗುರಿಯಾಗಿದ್ದ ಆರೋಪಿಗಳಲ್ಲಿ ಒಬ್ಬನಾದ ವಿನೋದ್ ಎಂಬಾತ ಕಳೆದ ತಿಂಗಳು ಆಟೊ ಚಾಲಕನೊಬ್ಬನನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ತುರ್ತಾಗಿ ಆಲಿಸಲು ಮರುಪರಿಶೀಲನಾ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಬೇಕೆಂದು ಅರ್ಜಿ ಕೋರಿದೆ.
ದೆಹಲಿಯ ಛಾವಲಾದಲ್ಲಿ 2012ರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೊಳಗಾಗಿದ್ದ ಮೂವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ನಲ್ಲಿ ಖುಲಾಸೆಗೊಳಿಸಿತ್ತು. ಆರೋಪಿಗಳನ್ನು ನೈತಿಕತೆಯ ಆಧಾರದ ಮೇಲೆ ನ್ಯಾಯಾಲಯಗಳು ಶಿಕ್ಷಿಸಲು ಸಾಧ್ಯವಿಲ್ಲ ಎಂದು ಅದು ಆಗ ಹೇಳಿತ್ತು.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಅನುಮೋದನೆ ನೀಡಿದ್ದರು. ಡಿಸೆಂಬರ್ 2022ರಲ್ಲಿ, ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ಈಗ ಪ್ರಕರಣದ ಆರೋಪಿ ಮತ್ತೊಂದು ಕೊಲೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲಾಯಿತು.