ಬಾಕಿ ಪ್ರಕರಣಗಳ ಇತ್ಯರ್ಥದಲ್ಲಿ ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆ ಪ್ರಮುಖ ಪಾತ್ರವಹಿಸಲಿದೆ: ಸಿಜೆ ವರಾಳೆ

ಧಾರವಾಡ ಮತ್ತು ಕಲಬುರ್ಗಿ ಪೀಠ ಸೇರಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಆ. 8ರ ಅಂತ್ಯಕ್ಕೆ 2,72,041 ಪ್ರಕರಣ ಬಾಕಿ ಇವೆ. ರಾಜ್ಯದಲ್ಲಿ 2,28,079 ಸಿವಿಲ್‌ ಪ್ರಕರಣಗಳು ಮತ್ತು 43,962 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ ಎಂದು ವಿವರಿಸಿದ ಸಿಜೆ.
Chief Justice P B Varale delivered speech
Chief Justice P B Varale delivered speech
Published on

“ಪರ್ಯಾಯ ವಿವಾದ ಪರಿಹಾರ ವ್ಯವಸ್ಥೆಯು ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ನ್ಯಾಯದಾನ ಪಡೆಯಲು ಮುಂದಾಗುವವರ ಸಂಖ್ಯೆ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಲಿದೆ” ಎಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅಭಿಪ್ರಾಯಪಟ್ಟರು.

ಹೈಕೋರ್ಟ್‌ ಆವರಣದಲ್ಲಿ 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

“ಬಾಕಿ ಪ್ರಕರಣಗಳ ಇತ್ಯರ್ಥವು ಕಳವಳಕಾರಿ ವಿಚಾರವಾಗಿದ್ದು, ಇದನ್ನು ಬಗೆಹರಿಸಲು ಎರಡು ಪಟ್ಟು ಪ್ರಯತ್ನ ಹಾಕುವ ಮೂಲಕ ಬಾಧಿತರಿಗೆ ತುರ್ತಾಗಿ ನ್ಯಾಯದಾನ ದೊರೆಯುವಂತೆ ಮಾಡಬೇಕಿದೆ. ಧಾರವಾಡ ಮತ್ತು ಕಲಬುರ್ಗಿ ಪೀಠ ಸೇರಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ಆಗಸ್ಟ್‌ 8ರ ಅಂತ್ಯಕ್ಕೆ 2,72,041 ಪ್ರಕರಣ ಬಾಕಿ ಇವೆ. ರಾಜ್ಯದಲ್ಲಿ 2,28,079 ಸಿವಿಲ್‌ ಪ್ರಕರಣಗಳು ಮತ್ತು 43,962 ಕ್ರಿಮಿನಲ್‌ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಇತ್ಯರ್ಥಪಡಿಸಲು ಪರ್ಯಾಯ ವಿವಾದ ಪರಿಹಾರ ವಿಧಾನವು ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ನ್ಯಾಯದಾನ ಪಡೆಯಲು ಮುಂದಾಗುವವರ ಸಂಖ್ಯೆ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಲಿದೆ” ಎಂದರು.

“ಕರ್ನಾಟಕದಲ್ಲಿ ನ್ಯಾಯಾಂಗವನ್ನು ಮತ್ತಷ್ಟು ಬಲಪಡಿಸಲು ಆಧುನಿಕ ನ್ಯಾಯಾಂಗ ವ್ಯವಸ್ಥೆಗೆ ಹೂಡಿಕೆ ಮಾಡಬೇಕಿದೆ. ಈ ಮೂಲಕ ಅಗತ್ಯ ಸಂಪನ್ಮೂಲ ಲಭ್ಯ ಇರುವಂತೆ ಮಾಡಬೇಕು. ಅಗತ್ಯಕ್ಕೆ ತಕ್ಕಂತೆ ನ್ಯಾಯಮೂರ್ತಿಗಳ ನೇಮಕಾತಿ, ನಿರಂತರ ತರಬೇತಿ, ಸಾಮರ್ಥ್ಯ ಹೆಚ್ಚಳ, ನ್ಯಾಯಾಲಯಗಳನ್ನು ಸಮರ್ಥ ಮತ್ತು ಪರಿಣಾಮಕಾರಿಯನ್ನಾಗಿಸುವುದು ತೀರ ಅಗತ್ಯ. ನಮ್ಮ ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸಲು ಆದ್ಯತೆಯ ಮೇರೆಗೆ ಬೆಂಬಲಿಸಲು ಸರ್ಕಾರ ಮತ್ತು ಸಂಬಂಧಿತ ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ಹೇಳಿದರು.

“ತಾಂತ್ರಿಕ ಸುಧಾರಣೆಯ ಇಂದಿನ ಕಾಲಮಾನದಲ್ಲಿ ನ್ಯಾಯದಾನ ವ್ಯವಸ್ಥೆಗೆ ತಂತ್ರಜ್ಞಾನ ಅಳವಡಿಸುವುದು ಅಗತ್ಯ. ತಂತ್ರಜ್ಞಾನ ಅಳವಡಿಸಿಕೊಳ್ಳುವುದರಿಂದ ನ್ಯಾಯಾಲಯದ ಪ್ರಕ್ರಿಯೆಯನ್ನು ಸರಾಗಗೊಳಿಸಬಹುದು. ಪ್ರಕರಣಗಳ ಇತ್ಯರ್ಥವನ್ನು ತುರ್ತಾಗಿ ನಡೆಸುವುದು, ಪಾರದರ್ಶಕತೆ ಹೆಚ್ಚಿಸಲು ಇದು ಸಹಕಾರಿ. ಅದಾಗ್ಯೂ, ಆಧುನಿಕತೆ ಮತ್ತು ನ್ಯಾಯಾಲಯದ ಕೊಠಡಿಯ ಘನತೆಯನ್ನು ಕಾಯ್ದುಕೊಳ್ಳಲು ಮತ್ತು ನ್ಯಾಯದಾನ ಮಾಡುವಾಗ ಮಾನವೀಯ ಸ್ಪರ್ಶ ಕಾಪಾಡಿಕೊಳ್ಳಲು ಮತ್ತು ಸಮನ್ವಯ ಸಾಧಿಸಲು ತುಸು ಎಚ್ಚರಿಕೆಯಿಂದ ಇರಬೇಕಾಗುತ್ತದೆ” ಎಂದು ಹೇಳಿದರು.

“ಸಶಕ್ತ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ನ್ಯಾಯಾಂಗ ಮುಖ್ಯ. ನ್ಯಾಯಾಂಗವು ಯಾವುದೇ ಅಳುಕ, ಆತಂಕವಿಲ್ಲದೆ, ಪಕ್ಷಪಾತರಹಿತವಾಗಿ ಕೆಲಸ ಮಾಡುವುದು ಅತ್ಯಗತ್ಯ. ಯಾವುದೇ ತೆರನಾದ ಪ್ರಭಾವ ಅಥವಾ ಒತ್ತಡಕ್ಕೆ ಒಳಗಾಗದೇ ಸ್ವಾತಂತ್ರ್ಯ ಎತ್ತಿ ಹಿಡಿಯಲು ಕರ್ನಾಟಕದ ನ್ಯಾಯಾಂಗ ಬದ್ಧವಾಗಿದೆ. ಸ್ವತಂತ್ರ ನ್ಯಾಯಾಂಗವು ಜನರ ಸ್ವಾತಂತ್ರ್ಯ ಮತ್ತು ಹಕ್ಕುಗಳು ಹಾಗೂ ಪ್ರಜಾಪ್ರಭುತ್ವದ ಮೂರು ಅಂಗಗಳ ನಡುವೆ ಸಮನ್ವಯ ಸಾಧಿಸಲು ಅಗತ್ಯ” ಎಂದರು.

“ಜನರ ಸೇವೆ ಮಾಡುವುದಕ್ಕೆ ಹೊಣೆಗಾರಿಕೆ ಹೊಂದಿರುವ ನಮ್ಮ ಜವಾಬ್ದಾರಿಯ ಬಗ್ಗೆ ನಮಗೆ ಅರಿವಿದೆ. ಸಾರ್ವಜನಿಕರ ನಂಬಿಕೆ ಉಳಿಸಿಕೊಳ್ಳುವುದು ವಿಶೇಷ ಹಕ್ಕಲ್ಲ. ಪ್ರತಿದಿನವು ಅದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಇದೆ” ಎಂದರು.

“ಸಮ ಸಮಾಜ ನಿರ್ಮಿಸುವುದು ಸವಾಲುಗಳಲ್ಲಿದ ಹಾದಿಯಲ್ಲ. ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ಎಲ್ಲರಿಗೂ ನ್ಯಾಯದಾನ ನೀಡುವ ನಿಟ್ಟಿನಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಬೇಕಿದೆ. ವಿಶೇಷವಾಗಿ ಅಸಕ್ತರು ಮತ್ತು ಕೆಳವರ್ಗದವರು ಸೇರಿ ಎಲ್ಲರಿಗೂ ನ್ಯಾಯದಾನ ಲಭ್ಯವಾಗುವಂತೆ ಮಾಡಬೇಕಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾನೂನು ಅರಿವು ಹೆಚ್ಚಿಸಬೇಕಿದೆ. ಯಾವುದೇ ವ್ಯಕ್ತಿಯ ಸಾಮಾಜಿಕ-ಆರ್ಥಿಕ ಹಿನ್ನೆಲೆ ನೋಡದೆ ನ್ಯಾಯದಾನದ ಬಾಗಿಲು ಎಲ್ಲರಿಗೂ ತೆರೆದಿರುತ್ತದೆ ಎಂಬುದನ್ನು ಖಾತರಿಪಡಿಸಬೇಕು” ಎಂದು ಹೇಳಿದರು.

Kannada Bar & Bench
kannada.barandbench.com