ಮೂತ್ರ ನೆಕ್ಕಿಸಿದ ಪ್ರಕರಣ: ಆರೋಪಿ ಪಿಎಸ್ಐ ಅರ್ಜುನ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಚಿಕ್ಕಮಗಳೂರು ನ್ಯಾಯಾಲಯ

ಆರೋಪದ ಸ್ವರೂಪ ಅತ್ಯಂತ ಘೋರವಾಗಿದ್ದು ಸಂತ್ರಸ್ತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿಸಿರುವುದಷ್ಟೇ ಅಲ್ಲದೆ ನೆಲದಲ್ಲಿ ಬಿದ್ದಿದ್ದ ಮೂತ್ರ ನೆಕ್ಕುವಂತೆ ಹೇಳಲಾಗಿದೆ. ಇಂತಹ ದೌರ್ಜನ್ಯ ವೈಯಕ್ತಿಕ ಘನತೆಗೆ ಧಕ್ಕೆ ತರುತ್ತದೆ ಎಂದ ನ್ಯಾಯಾಲಯ.
Suspended PSI Arjun K Horakeri
Suspended PSI Arjun K Horakeri

ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಅಮಾನವೀಯವಾಗಿ ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಆರೋಪಿಯಾಗಿ ಅಮಾನತುಗೊಂಡಿರುವ ಸಬ್‌ ಇನ್ಸ್‌ಪೆಕ್ಟರ್‌ ಕೆ. ಅರ್ಜುನ್‌ ಹೊರಕೇರಿ ಅವರಿಗೆ ಚಿಕ್ಕಮಗಳೂರಿನ ಮೊದಲನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.

ಪ್ರಕರಣವೊಂದರ ವಿಚಾರಣೆ ನೆಪದಲ್ಲಿ ಗೋಣಿಬೀಡು ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ತನ್ನ ಬಾಯಿಗೆ ಮೂತ್ರ ಹುಯ್ಯಿಸಿ, ನೆಲದಲ್ಲಿ ಬಿದ್ದಿದ್ದ ಮೂತ್ರದ ಹನಿ ನೆಕ್ಕಿಸಿದ್ದಾರೆ ಎಂದು ಕಿರಗುಂದ ಗ್ರಾಮದ ಯುವಕ ಕೆ ಎಲ್‌ ಪುನೀತ್‌ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಅರ್ಜುನ್‌ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.

ಜಾಮೀನು ನಿರಾಕರಣೆಗೆ ಕಾರಣವಾದ ವಿವಿಧ ಅಂಶಗಳನ್ನು ಪ್ರಥಮ ಹೆಚ್ಚುವರಿ ಸೆಷನ್ಸ್‌ ಮತ್ತು ವಿಶೇಷ ನ್ಯಾಯಾಧೀಶ ಕೆ ಎಲ್‌ ಅಶೋಕ್‌ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

ಪೊಲೀಸರು ವ್ಯಕ್ತಿಗಳನ್ನು ಅಕ್ರಮ ಬಂಧನದಲ್ಲಿರಿಸುವುದು ಮತ್ತು ಚಿತ್ರಹಿಂಸೆ ನೀಡುವುದು ಅವರ ಕರ್ತವ್ಯದ ಭಾಗವಲ್ಲ ಹೀಗಾಗಿ ಸಿಆರ್‌ಪಿಸಿ ಸೆಕ್ಷನ್‌ 197 ರ ಅಡಿಯಲ್ಲಿ ರಕ್ಷಣೆ ಪಡೆಯಲಾಗದು ಎಂದು ನ್ಯಾಯಾಧೀಶರು ಹೇಳಿದ್ದು ʼಎಸ್‌ ಶಿವಕುಮಾರ್‌ ಇನ್ನಿತರರು ಮತ್ತು ಚಿಕ್ಕಮಗಳೂರು ಗ್ರಾಮಂತರ ಪೊಲೀಸರ ನಡುವಣ ಪ್ರಕರಣʼದಲ್ಲಿ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪನ್ನು ಉಲ್ಲೇಖಿಸಿದ್ದಾರೆ.

ದೂರು ನೀಡಲು ವಿಳಂಬವಾಗಿದೆ ಎಂಬ ಅರ್ಜಿದಾರ ಆರೋಪಿ ಪರ ವಕೀಲರಾದ ಎಚ್‌ ಎಂ ಸುಧಾಕರ್‌ ಅವರ ವಾದವನ್ನು ಒಪ್ಪದ ನ್ಯಾಯಾಲಯ ಸಂತ್ರಸ್ತ (ಪುನೀತ್‌) ಗ್ರಾಮೀಣ ಪ್ರದೇಶದವರಾಗಿದ್ದು ಅದರಲ್ಲೂ ದುರ್ಬಲ ಸಮುದಾಯಕ್ಕೆ ಸೇರಿದ್ದಾರೆ. ಆತ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಅದರ ಉಸ್ತುವಾರಿ ಹೊತ್ತ ಅಧಿಕಾರಿ ವಿರುದ್ಧ ದೂರು ನೀಡಲು ಸಾಧ್ಯವಿಲ್ಲ. ಅಲ್ಲದೆ ಉನ್ನತ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಕೆಳಹಂತದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಲು ಸಾಧ್ಯವಿಲ್ಲ. ಹಾಗಾಗಿ ವಿಳಂಬವಾಗಿರಬಹುದು ಎಂದು ಅಭಿಪ್ರಾಯಪಟ್ಟಿದೆ.

ಆರೋಪದ ಸ್ವರೂಪ ಅತ್ಯಂತ ಘೋರವಾಗಿದ್ದು ಸಂತ್ರಸ್ತ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವುದಷ್ಟೇ ಅಲ್ಲದೆ ನೆಲದಲ್ಲಿ ಬಿದ್ದಿದ್ದ ಮೂತ್ರ ನೆಕ್ಕುವಂತೆ ಹೇಳಲಾಗಿದೆ. ಇಂತಹ ದೌರ್ಜನ್ಯ ವೈಯಕ್ತಿಕ ಘನತೆಗೆ ಧಕ್ಕೆ ತರುತ್ತದೆ. ಯಾವುದೇ ವ್ಯಕ್ತಿಯ ವೈಯಕ್ತಿಕ ಘನತೆಯು ಆಂತರಿಕ ಭಾವನೆಗಳು ಮತ್ತು ಸ್ವ-ಪ್ರೀತಿ, ಸ್ವ-ಕಾಳಜಿ, ಸ್ವಾಭಿಮಾನ ಮತ್ತು ಸ್ವ-ಮೆಚ್ಚುಗೆಯ ವರ್ತನೆಗಳಾಗಿರುತ್ತವೆ. ಇದು ವ್ಯಕ್ತಿಯೊಬ್ಬರು ತನ್ನ ಬಗ್ಗೆ ಯೋಚಿಸುವ ಭಾವಿಸುವ ರೀತಿಯಾಗಿದೆ. ಈ ಬಗೆಯ ದೌರ್ಜನ್ಯ ಅನುಭವಿಸಿದ ವ್ಯಕ್ತಿ ತೀವ್ರ ಆಘಾತಕ್ಕೊಳಗಾಗಿದ್ದು ಖಂಡಿತವಾಗಿ ಸಾಮಾನ್ಯ ರೀತಿಯಂತೆ ಯಾರ ಬಳಿಯಾದರೂ ಘಟನೆಯನ್ನು ಹೇಳಿಕೊಳ್ಳುವ, ಪರಿಹಾರ ಪಡೆಯುವ ಸ್ಥಿತಿಯಲ್ಲಿ ಇರುವುದಿಲ್ಲ. ಹಾಗೆ ಹೇಳಿಕೊಳ್ಳಲು ಸಮಯ ತೆಗೆದಕೊಳ್ಳುತ್ತಾರೆ. ಆತ ತನ್ನ ಹತ್ತಿರದವರು ಮತ್ತು ಆತ್ಮೀಯರೊಂದಿಗೆ ಘಟನೆಯನ್ನು ಹೇಳಿಕೊಳ್ಳಲು ಧೈರ್ಯ ಒಗ್ಗೂಡಿಸಿಕೊಳ್ಳಬೇಕು. ಇದು ಸುಲಭವಲ್ಲ ಹಾಗೂ ಸ್ವಲ್ಪ ಸಮಯ ಹಿಡಿಯುತ್ತದೆ. ಆದ್ದರಿಂದ ದೂರು ಸಲ್ಲಿಕೆಯನ್ನು ವಿಳಂಬ ಎಂದು ಹೇಳಲಾಗದು ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸಂತ್ರಸ್ತ ದೂರು ನೀಡಿದ ಬಳಿಕ ಮಹಿಳೆ ಆತನ ವಿರುದ್ಧ ದೂರು ದಾಖಲಿಸಿರುವುದು ಆಕೆಯ ದೂರಿನ ಹಿಂದೆ ಕಾಣದ ಕೈಗಳು ಇವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ…
ನ್ಯಾ. ಕೆ ಎಲ್‌ ಅಶೋಕ್ , ಪ್ರಥಮ ಹೆಚ್ಚುವರಿ ಸೆಷನ್ಸ್‌ ಮತ್ತು ವಿಶೇಷ ನ್ಯಾಯಾಧೀಶರು, ಚಿಕ್ಕಮಗಳೂರು

ಪುನೀತ್‌ ವಿರುದ್ಧ ಮಹಿಳೆ ದೂರು ದಾಖಲಿಸಿರುವ ವಿಚಾರವನ್ನು ಪ್ರಸ್ತಾಪಿಸಿದ ನ್ಯಾಯಾಲಯ “ಸಂತ್ರಸ್ತ ದೂರು ನೀಡಿದ ಬಳಿಕ ಮಹಿಳೆ ಆತನ ವಿರುದ್ಧ ದೂರು ದಾಖಲಿಸಿರುವುದು ಆಕೆಯ ದೂರಿನ ಹಿಂದೆ ಕಾಣದ ಕೈಗಳು ಇವೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ… ಆರೋಪಿ ಅರ್ಜಿದಾರನನ್ನು ರಕ್ಷಿಸುವ ಸಲುವಾಗಿ ಮಹಿಳೆ ದೂರು ನೀಡಿರುವಂತಿದೆ… ತನ್ನೊಡನೆ ಘನತೆಯಿಂದ ಇತರರು ನಡೆದುಕೊಳ್ಳುವ ಹಕ್ಕನ್ನು ಆರೋಪಿಯು ಹೊಂದಿರುತ್ತಾನೆ. ಆರೋಪಿಯ ಮೇಲೆ ಪ್ರಕರಣವೊಂದು ದಾಖಲಾಗಿದೆ ಎಂದ ಮಾತ್ರಕ್ಕೆ ಆತ/ಆಕೆ ಹಿಂಸಿಸಲು ಅರ್ಹವಾದ ಬೇಟೆ ಎಂದು ಅರ್ಥವಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ.

Also Read
[ಮೂತ್ರ ಕುಡಿಸಿದ ಪ್ರಕರಣ] ಆರೋಪಿ ಪಿಎಸ್ಐ ಅರ್ಜುನ್ ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದ ಪಬ್ಲಿಕ್ ಪ್ರಾಸಿಕ್ಯೂಟರ್

ಘಟನೆಯ ಕುರಿತು ಸಮುದಾಯದ ನಾಯಕನೊಂದಿಗೆ ಚರ್ಚಿಸಿರುವುದಾಗಿ ದೂರುದಾರ (ಪುನೀತ್‌) ದೂರಿನಲ್ಲಿ ತಿಳಿಸಿದ್ದು ಘಟನೆಯನ್ನು ತಿರುಚಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದರೆ ಅದು ಹಾಗಲ್ಲ. ಅಂತಹ ಆಘಾತಕ್ಕೆ ತುತ್ತಾದ ಸಂತ್ರಸ್ತ ಅದನ್ನು ಮುಚ್ಚಿಟ್ಟುಕೊಳ್ಳಲಾಗದು. ಸಹಜವಾಗಿಯೇ ಆತ ಸಮುದಾಯದ ನಾಯಕರಿಗೆ ಈ ವಿಚಾರ ತಿಳಿಸಿದ್ದಾರೆ. ಘಟನೆಯನ್ನು ಚರ್ಚಿಸಲಾಗಿದೆ ಎಂದ ಮಾತ್ರಕ್ಕೆ ಅದನ್ನು ತಿರುಚಲಾಗಿದೆ ಎಂದು ಹೇಳಲಾಗದು. ದೌರ್ಜನ್ಯಕ್ಕೊಳಗಾದ ವ್ಯಕ್ತಿ ಸಾಮಾನ್ಯವಾಗಿ ಹಾಗೆ ಮಾಡುತ್ತಾನೆ. ಆದ್ದರಿಂದ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ಹೇಳಿತು.

ಅರ್ಜಿದಾರರನ್ನು ಅಮಾನತುಗೊಳಿಸುವಂತೆ ಸಂತ್ರಸ್ತ ಕೋರಿರುವುದರಿಂದ ದೂರು ಪ್ರಾಮಾಣಿಕವಲ್ಲ ಎಂದು ಪೊಲೀಸ್‌ ಅಧಿಕಾರಿ ಅರ್ಜುನ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ನ್ಯಾಯಾಲಯ “ದೂರು ಹೀಗೇ ಇರಬೇಕು ಎಂಬುದಕ್ಕೆ ಯಾವುದೇ ನಿಯಮವಿಲ್ಲ. ದೌರ್ಜನ್ಯ ಅನುಭವಿಸಿದ ಸಂತ್ರಸ್ತ ಪರಿಹಾರ ಕೋರಿದ್ದಾರೆ. ಅದು ಅವರ ಪ್ರಕಾರ ಪ್ರಾಮಾಣಿಕತೆ. ದೌರ್ಜನ್ಯ ಮಾಡಿದ ವ್ಯಕ್ತಿಯಿಂದ ರಕ್ಷಣೆ ಪಡೆಯುವುದು ಸಂತ್ರಸ್ತನ ಪ್ರಥಮ ಆದ್ಯತೆಯಾಗಿರುತ್ತದೆ. ಹಾಗಾಗಿ ಅಮಾನತುಗೊಳಿಸುವಂತೆ ಕೋರುವುದು ಸಹಜವೇ ಆಗಿರುತ್ತದೆ ಎಂದು ವಿವರಿಸಿತು.

ಆರೋಪಿ ಅರ್ಜುನ್‌ಗೆ ನಿರೀಕ್ಷಣಾ ಜಾಮೀನು ನೀಡದಂತೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಭಾವನಾ ಮೇ 28ರಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

ಆದೇಶವನ್ನು ಇಲ್ಲಿ ಓದಿ:

Attachment
PDF
display_pdf (1) (2).pdf
Preview

Related Stories

No stories found.
Kannada Bar & Bench
kannada.barandbench.com