ಪೋರ್ನ್‌, ಸ್ವಿಗ್ಗಿ, ಜೊಮ್ಯಾಟೋ ಬಗ್ಗೆ ಕೇರಳ ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿದ್ದೇನು?

ಕುತೂಹಲದ ಸಂಗತಿ ಎಂದರೆ ಪೀಠ ಅಶ್ಲೀಲತೆಗೆ ಸಂಬಂಧಿಸಿದ ತೀರ್ಪು ನೀಡುವ ವೇಳೆ ಆಹಾರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಬದಲು ತಾಯಂದಿರೇ ರುಚಿಕರವಾಗಿ ಮಕ್ಕಳಿಗೆ ಅಡುಗೆ ತಯಾರಿಸಿಕೊಡಲಿ ಎಂದಿದೆ.
Zomato, Swiggy
Zomato, Swiggy

ಒಂಟಿಯಾಗಿ ಅಶ್ಲೀಲ ಚಿತ್ರ ವೀಕ್ಷಿಸುವುದು ಅಪರಾಧವಲ್ಲ ಎಂದು ಈಚೆಗೆ ತೀರ್ಪು ನೀಡುವ ವೇಳೆ ಕೇರಳ ಹೈಕೋರ್ಟ್‌ ಡಿಜಿಟಲ್‌ ಯುಗದಲ್ಲಿನ ಲೈಂಗಿಕತೆ, ಅಶ್ಲೀಲತೆ ಹಾಗೂ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಊಟ ಒದಗಿಸುವುದರ ಮಹತ್ವದಂತಹ ವಿಚಾರಗಳ ಬಗ್ಗೆ ಕೆಲ ಆಸಕ್ತಿಕರ ಅವಲೋಕನಗಳನ್ನು ಮಾಡಿದೆ [ಅನೀಶ್‌ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ].

ಸ್ವಿಗ್ಗಿ ಮತ್ತು ಜೊಮಾಟೊ ರೀತಿಯ ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಆಹಾರ ತರಿಸುವ ಬದಲು ಮಕ್ಕಳಿಗೆ ತಾಯಂದಿರೇ ರುಚಿಕಟ್ಟಾದ ಆಹಾರ ಸೇವಿಸಲು ಪ್ರೋತ್ಸಾಹಿಸುವಂತೆ ಮತ್ತು ಅವರನ್ನು ಮೈದಾನದಲ್ಲಿ ಆಡಲು ಹುರಿದುಂಬಿಸುವಂತೆ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ ಪೋಷಕರಿಗೆ ಸಲಹೆ ನೀಡಿತು.  ಪೀಠ ವಿವರಿಸಿದ ಸಂಗತಿಗಳ ಪ್ರಮುಖಾಂಶಗಳು ಇಲ್ಲಿವೆ:

  • ಸ್ವಿಗ್ಗಿ ಮತ್ತು ಜೊಮಾಟೊ ರೀತಿಯ ಮೊಬೈಲ್‌ ಅಪ್ಲಿಕೇಷನ್‌ಗಳ ಮೂಲಕ ಆಹಾರ ತರಿಸುವ ಬದಲು ತಾಯಿ ಉಣಬಡಿಸುವ ಊಟದ ಘಮ ಮಕ್ಕಳನ್ನು ಮನೆಯತ್ತ ಸೆಳೆಯಲಿ. ಇದನ್ನು ಪೋಷಕರ ವಿವೇಚನೆಗೆ ಬಿಡುತ್ತೇನೆ.

  • ಮಕ್ಕಳು ಬಿಡುವಿನ ವೇಳೆ ಕ್ರಿಕೆಟ್ ಅಥವಾ ಫುಟ್ಬಾಲ್ ಅಥವಾ ಅವರು ಇಷ್ಟಪಡುವ ಆಟ ಆಡಲು ಅವಕಾಶ ಮಾಡಿಕೊಡಿ.

  • ಭವಿಷ್ಯದಲ್ಲಿ ನಮ್ಮ ದೇಶದ ಭರವಸೆಯ ದಾರಿದೀಪವಾಗಲಿರುವ ಆರೋಗ್ಯವಂತ ಯುವ ಪೀಳಿಗೆಗೆ ಕ್ರೀಡೆ ಅವಶ್ಯಕ.

  • ಲೈಂಗಿಕತೆ ಕೇವಲ ಕಾಮಕ್ಕಾಗಿ ಇರದೆ ಪ್ರೀತಿಯ ಅಭಿವ್ಯಕ್ತಿಯಾಗಿದ್ದು ಸಂತಾನಾಭಿವೃದ್ಧಿ ಕೂಡ ಇದರ ಗುರಿಯಾಗಿದೆ.

  • ಸಮ್ಮತಿಯ ಲೈಂಗಿಕತೆ ಅಥವಾ ಖಾಸಗಿಯಾಗಿ ಅಶ್ಲೀಲ ವೀಡಿಯೊ ವೀಕ್ಷಿಸುವುದನ್ನು ಕಾನೂನಿನ ಮೂಸೆಯಲ್ಲಿ ಪರಿಗಣಿಸುವ ಅಗತ್ಯವಿಲ್ಲ. ಏಕೆಂದರೆ ಇದು ಸಮಾಜದ ಇಚ್ಛೆ ಮತ್ತು ಶಾಸಕಾಂಗ ಕೈಗೊಳ್ಳಬೇಕಾದ ನಿರ್ಧಾರದ ವ್ಯಾಪ್ತಿಗೊಳಪಟ್ಟಿದೆ.

  • ಖಾಸಗಿಯಾಗಿ ಅಶ್ಲೀಲ ಚಿತ್ರ ವೀಕ್ಷಿಸುವುದು ಶಿಕ್ಷಾರ್ಹ ಅಪರಾಧವಲ್ಲ, ಆದರೆ ಅಪ್ರಾಪ್ತ ಮಕ್ಕಳಿಗೆ ತಮ್ಮ ಮೊಬೈಲ್ ಫೋನ್‌ಗಳ ಮೂಲಕ ಪೋಷಕರು ಮನಸೋಇಚ್ಛೆಯಾಗಿ ಅಂತರ್ಜಾಲ ಬಳಸಲು ಅವಕಾಶ ಕೊಟ್ಟರೆ ದೊಡ್ಡ ಗಂಡಾಂತರ ಕಾದಿದೆ. ದೂರಗಾಮಿ ಪರಿಣಾಮಗಳು ಉಂಟಾಗುತ್ತವೆ.

  • ಅಶ್ಲೀಲ ಸಾಹಿತ್ಯ ಎಂಬುದು ಶತಮಾನಗಳಿಂದಲೂ ಬಳಕೆಯಲ್ಲಿದೆ. ಡಿಜಿಟಲ್ ಯುಗ ಇದನ್ನು ಹಿಂದೆಂದಿಗಿಂತಲೂ ಹೆಚ್ಚು ಬಳಸುವಂತೆ ಮಾಡಿದ್ದು ಮಕ್ಕಳು ಮತ್ತು ವಯಸ್ಕರ ಬೆರಳ ತುದಿಯಲ್ಲಿ ಅದೆಲ್ಲಾ ನಿಲುಕುವಂತಿದೆ.

  • ತಮ್ಮ ಮೊಬೈಲ್‌ಗಳಿಂದಲೇ ಮಾಹಿತಿಯುಕ್ತ ಸುದ್ದಿ ಮತ್ತು ವೀಡಿಯೊಗಳನ್ನು ವೀಕ್ಷಿಸಲು ಮಕ್ಕಳಿಗೆ ಪೋಷಕರು ಅವಕಾಶ ಮಾಡಿಕೊಡಬೇಕು.  

  • ಅಪ್ರಾಪ್ತ ಮಕ್ಕಳಿಗೆ ಮೊಬೈಲ್ ಫೋನ್‌ಗಳನ್ನು ಎಂದಿಗೂ ನೀಡಬಾರದು. ಹೀಗಾದರೆ ನಿತ್ಯ ಮಾಡಬೇಕಾದ ಕೆಲಸಗಳನ್ನು ಮಾಡುವುದರಿಂದ ಅವರು ವಿಮುಖರಾಗುತ್ತಾರೆ.

ಅಶ್ಲೀಲ ಪುಸ್ತಕಗಳು ಮತ್ತು ವಸ್ತುಗಳ ಮಾರಾಟ, ವಿತರಣೆ ಮತ್ತು ಪ್ರದರ್ಶನಕ್ಕೆ ದಂಡ ವಿಧಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292 ರ ಅಡಿಯಲ್ಲಿ ಆರೋಪ ಹೊತ್ತ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರಗಳನ್ನು ತಿಳಿಸಿದೆ.

ಇದೇ ವೇಳೆ, ರಸ್ತೆ ಬದಿ ನಿಂತು ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೊ ನೋಡುತ್ತಿದ್ದ ವ್ಯಕ್ತಿ ಖಾಸಗಿಯಾಗಿ ಅದನ್ನು ವೀಕ್ಷಿಸಿದ್ದು ಬೇರೆಯವರಿಗೆ ಅದನ್ನು ತೋರಿಸಿಲ್ಲ ಎಂಬ ವಾದವನ್ನು ಒಪ್ಪಿದ ನ್ಯಾಯಾಲಯ ಆತನ ವಿರುದ್ಧದ ಎಲ್ಲಾ ವಿಚಾರಣೆಗಳನ್ನು ಅದು ರದ್ದುಗೊಳಿಸಿತು.

Related Stories

No stories found.
Kannada Bar & Bench
kannada.barandbench.com