

ಭಿಕ್ಷಾಟನೆಯಲ್ಲಿ ತೊಡಗುವ ಹಾಗೂ ಬೀದಿ ಬದಿ ಆಟಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡುವ ಮಕ್ಕಳನ್ನು ಪತ್ತೆ ಹಚ್ಚಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಂಬಂಧ ಸೂಕ್ತ ಶಿಫಾರಸುಗಳನ್ನು ನೀಡಲು ಪೊಲೀಸ್, ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ 12 ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ ಎಂದು ರಾಜ್ಯ ಸರ್ಕಾರವು ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಮಕ್ಕಳು ಬೀದಿ ಬದಿ ಆಟಿಕೆ ಮತ್ತಿತರ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
“ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸಮಸ್ಯೆ ನಿವಾರಣೆ ಸಂಬಂಧ ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಿಸುವ ಸಂಬಂಧ ಜನವರಿ 22ರಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಸರ್ಕಾರ ಆ ನಿಟ್ಟಿನಲ್ಲಿಏನು ಕ್ರಮ ಕೈಗೊಂಡಿದೆ” ಎಂದು ಪ್ರಶ್ನಿಸಿತು.
ಅದಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಅವರು “ಆ ನಿರ್ದೇಶನ ಪಾಲನೆ ಮಾಡಿಲ್ಲ, ಕಾರಣ ಆ ಮಧ್ಯಂತರ ಆದೇಶ ಹೈಕೋರ್ಟ್ ವೆಬ್‌ಸೈಟ್‌ನಲ್ಲಿಅಪ್‌ಲೋಡ್ ಆಗಿಯೇ ಇಲ್ಲ” ಎಂದು ಉತ್ತರಿಸಿದರು. ಆಗ ಪೀಠವು ಜನವರಿ 22ರ ಆದೇಶ ಏಕೆ ವೆಬ್‌ಸೈಟ್‌ನಲ್ಲಿಅಪ್ ಲೋಡ್ ಆಗಿಲ್ಲ” ಎಂಬ ಬಗ್ಗೆ ವಿವರಣೆ ನೀಡುವಂತೆ ಹೈಕೋರ್ಟ್ ರಿಜಿಸ್ಟ್ರಿಗೆ ನಿರ್ದೇಶಿಸಿತು.
ಅಲ್ಲದೇ, “ಮೊದಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಆನಂತರ ಇಲಾಖೆಗಳ ನಡುವೆ ಸಮನ್ವಯ ಸುಲಭವಾಗುತ್ತದೆ. ನ್ಯಾಯಾಲಯದ ನಿರ್ದೇಶನಗಳನ್ನೂ ಸಹ ಸರ್ಮಪಕವಾಗಿ ಪಾಲನೆ ಮಾಡಬಹುದು” ಎಂದು ನ್ಯಾಯಾಲಯ ಹೇಳಿತು.
ಆಗ ಪ್ರತಿಮಾ ಅವರು “ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಸಮಸ್ಯೆ ನಿವಾರಣೆಗೆ ಸರ್ಕಾರ ಮಾರ್ಚ್ 9ರಂದು 12 ಸದಸ್ಯರ ಸಮಿತಿ ರಚನೆ ಮಾಡಿದೆ. ಆ ಸಮಿತಿ ಮಾರ್ಚ್ 18ರಂದು ಮೊದಲ ಸಭೆ ನಡೆಸಿ ಹಲವು ವಿಚಾರಗಳನ್ನು ಚರ್ಚಿಸಿದೆ. ಸಮಿತಿಯಲ್ಲಿ ನಿಮ್ಹಾನ್ಸ್‌ನ ತಜ್ಞ ವೈದ್ಯರು, ಪೊಲೀಸ್, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದಾರೆ. ಸಮಿತಿ ರಚನೆ ಕುರಿತ ಆದೇಶ ಕನ್ನಡ ಭಾಷೆಯಲ್ಲಿದ್ದು, ಅದನ್ನು ಅನುವಾದಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಸ್ವಲ್ಪ ಸಮಯಾವಕಾಶ ನೀಡಬೇಕು” ಎಂದು ಕೋರಿದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ಅವರು “ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ನೆರವಾಗಲು ಕ್ರಿಯಾ ಯೋಜನೆ ಸಲ್ಲಿಸುವಂತೆ ಕಳೆದ ಬಾರಿ ನ್ಯಾಯಾಲಯ ಆದೇಶ ನೀಡಿತ್ತು. ಆ ಆದೇಶವನ್ನು ಸರ್ಕಾರ ಪಾಲನೆ ಮಾಡಿಲ್ಲ” ಎಂದರು.
ಇದಕ್ಕೆ ಪ್ರತಿಮಾ ಅವರು “ಸಂಗ್ರಹ ಮಾಡಿದ ಭಿಕ್ಷುಕರ ಸೆಸ್ ಅನ್ನು ಪ್ರತ್ಯೇಕ ಖಾತೆಯಲ್ಲಿ ಇಡಲಾಗುತ್ತಿದ್ದು, ಅದು ನೇರವಾಗಿ ಮಕ್ಕಳ ಕಲ್ಯಾಣ ಇಲಾಖೆಗೆ ಹೋಗುತ್ತದೆ” ಎಂದರು. ಅದಕ್ಕೆ ಆಕ್ಷೇಪಿಸಿದ ಪುತ್ತಿಗೆ ರಮೇಶ್ ಅವರು “ಒಟ್ಟು 7 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ. ಆದರೆ ಕೇವಲ ಮೂರು ಕೋಟಿ ರೂಪಾಯಿಗಳನ್ನು ಮಾತ್ರ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಲಾಗಿದೆ” ಎಂದರು. ಆಗ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆಗೆ ಎಷ್ಟು ಭಿಕ್ಷುಕರ ಸೆಸ್ ಸಂಗ್ರಹ ಮಾಡಲಾಗಿದೆ ಎಂಬ ಸಮಗ್ರ ವಿವರಗಳನ್ನು ಒದಗಿಸುವಂತೆಯೂ ನಿರ್ದೇಶನ ನೀಡಿ ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿತು.