ವಿಕಲಚೇತನ ಮಕ್ಕಳ ರಕ್ಷಣೆಗಾಗಿ ಕಟ್ಟುನಿಟ್ಟಿನ ಕಾನೂನು ಜಾರಿ ಅಗತ್ಯವಿದೆ: ನ್ಯಾ. ಬಿ ವಿ ನಾಗರತ್ನ

ನವದೆಹಲಿಯಲ್ಲಿ ಶನಿವಾರ ನಡೆದ ಮಕ್ಕಳ ರಕ್ಷಣೆ ಕುರಿತ ರಾಷ್ಟ್ರೀಯ ವಾರ್ಷಿಕ ಪಾಲುದಾರರ ಸಮಾಲೋಚನಾ ಸಮಾವೇಶದಲ್ಲಿ ಅವರು ಮಾತನಾಡಿದರು.
Justice BV Nagarathna
Justice BV Nagarathna
Published on

ಭಾರತದಲ್ಲಿ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಕರೆ ನೀಡಿದರು.

ನವದೆಹಲಿಯಲ್ಲಿ ಶನಿವಾರ ನಡೆದ ಮಕ್ಕಳ ರಕ್ಷಣೆ ಕುರಿತ ರಾಷ್ಟ್ರೀಯ ವಾರ್ಷಿಕ ಪಾಲುದಾರರ ಸಮಾಲೋಚನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಅಂತಹ ಮಕ್ಕಳಿಗೆ ಇನ್ನಷ್ಟು ಆರೈಕೆಯ ಅಗತ್ಯವಿದ್ದು ಕೆಲವೊಮ್ಮೆ ಅವರನ್ನು ಪರಿತ್ಯಜಿಸಿ ಬಿಡುವ ಅಪಾಯ ಇರುವುದರಿಂದ ಇದು ಮುಖ್ಯ ಎಂದು ಅವರು ಹೇಳಿದರು.

ನ್ಯಾ. ನಾಗರತ್ನ ಅವರ ಭಾಷಣದ ಪ್ರಮುಖಾಂಶಗಳು

  • ವಿಕಲಚೇತನ ಮಕ್ಕಳ ಜೀವನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಗಂಭೀರವಾಗಿ ಜಾರಿಗೆ ತರಬೇಕು. ಇಲ್ಲದಿದ್ದರೆ, ಆರೈಕೆ ಮಾಡುವಲ್ಲಿ ಉಂಟಾಗುವ ಹೆಚ್ಚುವರಿ ಒತ್ತಡದಿಂದಾಗಿ ಪೋಷಕರು, ಪಾಲಕರು ಮತ್ತು ಸಮುದಾಯದ ಸದಸ್ಯರು ವಿಕಲಚೇತನ ಮಕ್ಕಳನ್ನು ಪರಿತ್ಯಕ್ತಗೊಳಿಸುವ, ಶರಣಾಗಿಸುವ ಅಥವಾ ಮದುವೆ ಮಾಡಿಬಿಡುವ ಸಾಧ್ಯತೆಗಳಿರುತ್ತವೆ.

  • ಋಣಾತ್ಮಕ ವರ್ತನೆಗಳು ಮತ್ತು ನಂಬಿಕೆಗಳ ಜೊತೆಗೆ ವಿಕಲಾಂಗ ಮಕ್ಕಳು ಎದುರಿಸುವಕಳಂಕ ಅವರನ್ನು ಹಿಂಸೆ, ನಿರ್ಲಕ್ಷ್ಯ, ನಿಂದನೆ ಮತ್ತು ಶೋಷಣೆಗೆ ಈಡುಮಾಡುತ್ತದೆ.

  • ಅಂಗವೈಕಲ್ಯದ ಬಗ್ಗೆ ಚಾಲ್ತಿಯಲ್ಲಿರುವ ಧೋರಣೆಗಳು ಶಿಸ್ತಿನ ಹಿಂಸಾತ್ಮಕ ರೂಪಗಳಿಗೂ ಕಾರಣವಾಗಬಹುದು.

  • ಆರ್ಟಿಇ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿಕಲಾಂಗ ಮಕ್ಕಳ ಸಂಖ್ಯೆ ಎಷ್ಟು ಎಂಬುದನ್ನು ಪರಿಶೀಲಿಸಬೇಕಿದೆ.

  • ವಿಕಲಾಂಗ ವ್ಯಕ್ತಿಗಳು ಸಾಮಾನ್ಯವಾಗಿ ಎದುರಿಸುವ ಆಂತರಿಕ ಅಡೆತಡೆಗಳನ್ನು ನಿಭಾಯಿಸುವುದು ಮುಖ್ಯ. ಯೋಜನೆಗಳು ಮತ್ತು ಸೇವೆಗಳನ್ನು ಸೂಕ್ತವಾಗಿ ಒದಗಿಸುವ ಮೂಲಕ ಇದನ್ನು ಸಾಧ್ಯವಾಗಿಸಬಹುದು. 

  • ವಿಕಲಚೇತನರಿಗೆ ದೊರೆಯದ ಸಾಮಾಜಿಕ ಸೇವೆ ಮತ್ತು ವ್ಯವಸ್ಥೆ, ಸಹಾಯಕ್ಕೆ ಒದಗುವ ತಂತ್ರಜ್ಞಾನ ಪಡೆಯುವಲ್ಲಿನ ಸಮಸ್ಯೆ, ಸಂವಹನ ಸ್ವರೂಪಗಳ ಕೊರತೆ ಹಾಗೂ ಇಲ್ಲವೇ ಆರೈಕೆದಾರರಿಗೆ ಸಿಗುವ ಸೀಮಿತ ಬೆಂಬಲದಂತಹ ಅಡೆತಡೆಗಳನ್ನು ನಿವಾರಿಸಬೇಕು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಕೂಡ ಸಮಾರಂಭದಲ್ಲಿ ಮಾತನಾಡಿದರು. ವಿಕಲಚೇತನ ಮಕ್ಕಳು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತಹ ನಿರಂತರ ತರಬೇತಿ ಮತ್ತು ಸಂವೇದನೆಯ ಅಗತ್ಯವಿದೆ ಎಂದು ಅವರು ತಿಳಿಸಿದರು.

Kannada Bar & Bench
kannada.barandbench.com