ಚೀನಿ ನಾಗರಿಕರಿಗೆ ವೀಸಾ ನೀಡಿರುವ ಪ್ರಕರಣದಲ್ಲಿ ಲೋಕಸಭಾ ಸದಸ್ಯ ಕಾರ್ತಿ ಚಿದಂಬರಂ ಅವರನ್ನು ಬಂಧಿಸುವ ಅಗತ್ಯ ನಿರ್ಮಾಣವಾದಲ್ಲಿ ಮೂರು ದಿನ ಮುಂಚಿತವಾಗಿ ಅವರಿಗೆ ಈ ಕುರಿತು ಲಿಖಿತ ನೋಟಿಸ್ ನೀಡುವಂತೆ ಕೇಂದ್ರೀಯ ತನಿಖಾ ದಳಕ್ಕೆ ಶುಕ್ರವಾರ ದೆಹಲಿಯ ವಿಶೇಷ ನ್ಯಾಯಾಲಯ ನಿರ್ದೇಶಿಸಿದೆ.
ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸಿದ ಸಿಬಿಐ ಪ್ರಕರಣಗಳನ್ನು ಆಲಿಸುವ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್ ಅವರು ಈ ಆದೇಶ ಮಾಡಿದ್ದಾರೆ. ಕಾರ್ತಿ ಆಪ್ತ ಎಸ್ ಭಾಸ್ಕರರಾಮನ್ ಅವರನ್ನು ಸಿಬಿಐ ವಶಕ್ಕೆ ಪಡೆಯುತ್ತಿದ್ದಂತೆ ಕಾರ್ತಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಮೇ 14ರಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ನಿವಾಸದಲ್ಲಿ ಸಿಬಿಐ ಶೋಧ ನಡೆಸಿತ್ತು. ₹50 ಲಕ್ಷ ಲಂಚ ಪಡೆದು ಕಾರ್ತಿ ಚಿದಂಬರಂ ಅವರು ಚೀನಾದ 250 ನಾಗರಿಕರಿಗೆ ವೀಸಾ ಕೊಡಿಸಲು ಸಹಾಯಕ್ಕೆ ಮುಂದಾಗಿದ್ದರು ಎಂದು ಆರೋಪಿಸಲಾಗಿದೆ.