ಚೀನಾ ವೀಸಾ ಹಗರಣದಲ್ಲಿ ಆರೋಪಿಯಾಗಿರುವ ಸಂಸದ ಕಾರ್ತಿ ಚಿದಂಬರಂ ಅವರನ್ನು ಜುಲೈ 12ರ ವರೆಗೆ (ಪ್ರಕರಣದ ಮುಂದಿನ ವಿಚಾರಣಾ ದಿನಾಂಕ) ಬಂಧಿಸುವುದಿಲ್ಲ ಎಂದು ಜಾರಿ ನಿರ್ದೇಶನಾಲಯವು (ಇ ಡಿ) ದೆಹಲಿ ಹೈಕೋರ್ಟ್‌ಗೆ ಭರವಸೆ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮುಂದೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ನ್ಯಾಯಾಲಯವು ಪ್ರಕರಣವನ್ನು ಇಂದು ನಿರ್ವಹಿಸಲು ಆಗುವುದಿಲ್ಲ ಎಂದು ತಿಳಿಸಿದ ನಂತರ ಈ ಭರವಸೆಯನ್ನು ನೀಡಿದರು. ನ್ಯಾ. ಜಸ್ಮೀತ್ ಸಿಂಗ್ ಅವರು ಪ್ರಕರಣದ ಸಂಬಂಧ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಇ ಡಿಗೆ ಸೂಚಿಸಿದರು. ಪ್ರಕರಣದ ವಿಚಾರಣೆ ಜುಲೈ 12ರಂದು ನಡೆಯಲಿದೆ.
ಚೀನಾ ವೀಸಾ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸುತ್ತಿರುವ ಕಾರ್ತಿ ಚಿದಂಬರಂ ಅವರು ಕೋರಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಈ ಮೊದಲು ವಿಚಾರಣಾ ನ್ಯಾಯಾಲಯವು ಜೂ.3ರಂದು ನಿರಾಕರಿಸಿತ್ತು. ಪ್ರಕರಣದ ಕ್ರಿಮಿನಲ್ ಹಿನ್ನೆಲೆಯನ್ನು ಗಮನಿಸಿ ವಿಶೇಷ ನ್ಯಾಯಾಧೀಶ ಎಮ್ ಕೆ ನಾಗಪಾಲ್ ಅವರು ಕಾರ್ತಿ ಅವರ ಮನವಿಯನ್ನು ತಿರಸ್ಕರಿಸಿದ್ದರು.
ಆದೇಶದಲ್ಲಿ ಅವರು, "ಅಪರಾಧದ ಸ್ವರೂಪ ಮತ್ತು ಗುರುತ್ವ, ತನಿಖೆಯು ಇನ್ನೂ ಆರಂಭಿಕ ಹಂತದಲ್ಲಿರುವುದು ಹಾಗೂ ಆರೋಪಿಗಳಾದ ಕಾರ್ತಿ ಪಿ ಚಿದಂಬರಂ ಹಾಗೂ ಎಸ್ ಭಾಸ್ಕರನ್ ಅವರ ಈ ಹಿಂದಿನ ಕ್ರಿಮಿನಲ್ ಹಿನ್ನೆಲೆ ಈ ಪ್ರಕರಣವನ್ನು ನಿರೀಕ್ಷಣಾ ಜಾಮೀನಿಗೆ ಅಥವಾ ಯಾವುದೇ ಮಧ್ಯಂತರ ರಕ್ಷಣೆಗೆ ಅರ್ಹವಾಗಿಸುವುದಿಲ್ಲ. ಹಾಗೆ ಮಾಡುವುದು, ತನಿಖೆಯ ಪ್ರಗತಿಗೆ ಗಂಭೀರವಾಗಿ ಅಡ್ಡಿಯಾಗಲಿದೆ" ಎಂದಿದ್ದರು.