ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ: ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿ 6 ದಿನ ಪೊಲೀಸ್‌ ಕಸ್ಟಡಿಗೆ

ಪ್ರಕರಣದ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ವಿಶ್ವನಾಥ್‌ ಚನ್ನಬಸಪ್ಪ ಗೌಡರ್‌ ಅವರು ಆರೋಪಿಗಳನ್ನು ಜೂನ್‌ 16ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ: ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ ಸೇರಿ 13 ಮಂದಿ 6 ದಿನ ಪೊಲೀಸ್‌ ಕಸ್ಟಡಿಗೆ

ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್‌, ಅವರ ಗೆಳತಿ ಪವಿತ್ರ ಗೌಡ ಸೇರಿ 13 ಮಂದಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಮಂಗಳವಾರ ಆರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿದೆ.

ದರ್ಶನ್‌ ಸೇರಿ ಎಲ್ಲಾ ಆರೋಪಿಗಳನ್ನು ಕಾಮಾಕ್ಷಿ ಪಾಳ್ಯ ಠಾಣೆಯ ಪೊಲೀಸರು ಬೆಂಗಳೂರಿನ 24ನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಉಸ್ತುವಾರಿಯಾಗಿರುವ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವನಾಥ್‌ ಚನ್ನಬಸಪ್ಪ ಗೌಡರ್‌ ಅವರ ಮುಂದೆ ಹಾಜರುಪಡಿಸಿದರು.

ಪ್ರಕರಣದ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಆರೋಪಿಗಳನ್ನು ಜೂನ್‌ 16ರವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿದ್ದಾರೆ.

ಪ್ರಕರಣದಲ್ಲಿ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದು, ದರ್ಶನ್‌ ತೂಗುದೀಪ ಎರಡನೇ ಆರೋಪಿಯಾಗಿದ್ದಾರೆ. ಉಳಿದಂತೆ ಕೆ ಪವನ್‌, ನಂದೀಶ್‌, ಕಾರ್ತಿಕ್‌, ಕೇಶವಮೂರ್ತಿ, ನಿಖಿಲ್‌ ನಾಯ್ಕ್‌, ಎಂ ಲಕ್ಷ್ಮಣ, ದರ್ಶನ್‌ ಅಭಿಮಾನಿ ಸಂಘದ ಚಿತ್ರದುರ್ಗ ಘಟಕದ ಅಧ್ಯಕ್ಷ ರಾಘವೇಂದ್ರ ಅಲಿಯಾಸ್‌ ರಾಘು, ಆರ್‌ ನಾಗರಾಜು, ಎಂ ದೀಪಕ್‌ ಕುಮಾರ್ ಇತರೆ ಆರೋಪಿಗಳಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ದರ್ಶನ್‌ ಗೆಳತಿ ಪವಿತ್ರಾ ಗೌಡಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಆರೋಪದ ಮೇಲೆ ಚಿತ್ರದುರ್ಗದ ರೇಣುಕಾಸ್ವಾಮಿ ಅವರನ್ನು ಜೂನ್‌ 8ರಂದು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆಯ ನಿರ್ಜನ ಪ್ರದೇಶದಲ್ಲಿ ಅವರ ಮೇಲೆ ಹಲ್ಲೆ ಮಾಡಿ ಕೊಲೆಗೈಯ್ಯಲಾಗಿದೆ. ಆನಂತರ ಶವವನ್ನು ತಡರಾತ್ರಿ ಕಾಮಾಕ್ಷಿ ಪಾಳ್ಯ ಸಮೀಪದ ರಾಜಕಾಲುವೆಯಲ್ಲಿ ಎಸೆಯಲಾಗಿತ್ತು ಎಂದು ಆರೋಪಿಲಾಗಿದೆ.

ಸ್ಥಳೀಯರಿಂದ ಅನಾಥ ಶವದ ಬಗ್ಗೆ ಕಾಮಾಕ್ಷಿ ಪಾಳ್ಯ ಪೊಲೀಸರಿಗೆ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ಭೇದಿಸಿ, ಇಂದು ಬೆಳಿಗ್ಗೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿದ್ದ ದರ್ಶನ್‌ ಅವರನ್ನು ಬಂಧಿಸಿದ್ದರು. ಮಧ್ಯಾಹ್ನದ ವೇಳೆಗೆ ಪವಿತ್ರಾ ಗೌಡರನ್ನು ಬಂಧಿಸಿದ್ದರು. ಸಂಜೆ ವೇಳೆಗೆ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್‌ಗಳಾದ 302 (ಕೊಲೆ), 120ಬಿ (ಪಿತೂರಿ) ಮತ್ತು 34ರ ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com