ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕಾನೂನು ಅಕಾಡೆಮಿ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ರಾಜ್ಯಮಟ್ಟದ ವರ್ಚುವಲ್ ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಂಗಳೂರಿನ ಕ್ರೈಸ್ಟ್ (ಡೀಮ್ಡ್ ವಿಶ್ವವಿದ್ಯಾಲಯ) ಕಾನೂನು ಶಾಲೆ ವಿಜಯಿಯಾಗಿದೆ. ಇದೇ ವೇಳೆ ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜು ದ್ವಿತೀಯ ಸ್ಥಾನ ಪಡೆಯಿತು. ಮೆಮೋರಿಯಲ್ ಸಲ್ಲಿಕೆಗಳ ವಿಭಾಗದಲ್ಲಿ ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯ ಪ್ರಥಮ ಹಾಗೂ ಮೈಸೂರಿನ ಜೆಎಸ್‌ಎಸ್ ಕಾನೂನು ಕಾಲೇಜು ದ್ವಿತೀಯ ಸ್ಥಾನ ಗಳಿಸಿದವು.
ರಾಷ್ಟ್ರೀಯ ಕಾನೂನು ಸೇವೆಗಳ ದಿನದಂದು ಅಂದರೆ ನವೆಂಬರ್ 9ರಂದು ಸ್ಪರ್ಧೆಯ ಅಂತಿಮ ಸುತ್ತನ್ನು ಆಯೋಜಿಸಲಾಗಿತ್ತು. ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಸ್ ಸುಜಾತಾ, ಬಿ.ವೀರಪ್ಪ, ಪಿ.ಎಸ್.ದಿನೇಶ್ ಕುಮಾರ್, ಕೆ.ಸೋಮಶೇಖರ್, ವಿ ಶ್ರೀಶಾನಂದ ಸ್ಪರ್ಧೆಯ ಅಂತಿಮ ಸುತ್ತಿನ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯದ ವಿವಿಧ ಕಾನೂನು ಕಾಲೇಜುಗಳ ಒಟ್ಟು ಹನ್ನೆರಡು ತಂಡಗಳು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದವು. ನ್ಯಾಯಾಂಗ ಅಧಿಕಾರಿಗಳು ಮತ್ತು ಖ್ಯಾತ ವಕೀಲರು ಸ್ಪರ್ಧೆಯ ಆರಂಭಿಕ ಮತ್ತು ಸೆಮಿಫೈನಲ್ ಸುತ್ತುಗಳ ತೀರ್ಪುಗಾರರಾಗಿದ್ದರು. ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾದ ರಾಮಚಂದ್ರ ಡಿ.ಹುದ್ದಾರ್ ಮತ್ತು ಕರ್ನಾಟಕ ಮಾನ್ಯ ಹೈಕೋರ್ಟ್‌ನ ನಿಯೋಜಿತ ಹಿರಿಯ ವಕೀಲರಾದ ಶಶಿಕಿರಣ್ ಶೆಟ್ಟಿ ಸೆಮಿಫೈನಲ್ ಸುತ್ತಿನ ಅಧ್ಯಕ್ಷತೆ ವಹಿಸಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಎನ್‌ಎಲ್ ಎಸ್‌ಎ ಅಖಿಲ ಭಾರತ ಕಾನೂನು ಜಾಗೃತಿ ಮತ್ತು ಅಭಿಯಾನದ ಭಾಗವಾಗಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕ್ರೈಸ್ಟ್ (ಡೀಮ್ಡ್ ವಿಶ್ವವಿದ್ಯಾಲಯ) ಕಾನೂನು ಶಾಲೆ ಕಾರ್ಯಕ್ರಮಕ್ಕೆ ತಾಂತ್ರಿಕ ನೆರವು ನೀಡಿತ್ತು. ಕರ್ನಾಟಕ ಸಂತ್ರಸ್ತರ ಪರಿಹಾರ ಯೋಜನೆಗೆ ಸಂಬಂಧಿಸಿದ ಕಾಲ್ಪನಿಕ ವಿಷಯವನ್ನು ಸ್ಪರ್ಧೆಗೆ ನೀಡಲಾಗಿತ್ತು. ವಿಜೇತ ತಂಡಗಳನ್ನು ಕೆಎಸ್ಎಲ್ಎಸ್ಎ ಅಧ್ಯಕ್ಷರೂ ಆಗಿರುವ ನ್ಯಾ. ಬಿ ವೀರಪ್ಪ ಅಭಿನಂದಿಸಿದರು.