
ಕ್ರೈಸ್ತ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಪರಿಶಿಷ್ಟ ಸಮುದಾಯದ ವ್ಯಕ್ತಿ ಆ ಧರ್ಮಕ್ಕೆ ಮತಾಂತರಗೊಂಡ ಬಳಿಕ ಆತನಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕಾಯಿದೆಯಡಿ ರಕ್ಷಣೆ ದೊರೆಯದು ಎಂದು ಆಂಧ್ರಪ್ರದೇಶ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಅಕ್ಕಲ ರಾಮ್ ರೆಡ್ಡಿ ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣ].
ವ್ಯಕ್ತಿಯೊಬ್ಬ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ನಂತರ, ಆತ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯನಾಗಿ ಉಳಿಯುವುದಿಲ್ಲ. ಪರಿಶಿಷ್ಟ ಜಾತಿ ಪ್ರಮಾಣಪತ್ರ ಹೊಂದಿರುವ ವ್ಯಕ್ತಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೆ, ಅವರಿಗೆ ಕಾಯಿದೆಯಡಿ ರಕ್ಷಣೆ ಇರುವುದಿಲ್ಲ ಎಂದು ನ್ಯಾ. ಎನ್ ಹರಿನಾಥ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ವ್ಯಕ್ತಿಗೆ ಮಾತ್ರ ಕಾಯಿದೆಯನ್ನು ಅನ್ವಯಿಸಬಹುದಾಗಿದೆ. ಪಾದ್ರಿ ಸ್ವಯಂಪ್ರೇರಣೆಯಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು ಕಳೆದ 10 ವರ್ಷಗಳಿಂದ ಚರ್ಚ್‌ನಲ್ಲಿ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಾಗಿ ಎಸ್‌ಸಿ ಎಸ್‌ಟಿ ಕಾಯಿದೆಯಡಿ ಅವರಿಗೆ ರಕ್ಷಣೆ ನೀಡಲು ಅನುಮತಿಸಲಾಗದು ಎಂದು ನ್ಯಾಯಾಲಯ ಏಪ್ರಿಲ್ 30ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ಆ ಮೂಲಕ ದಶಕಗಳ ಹಿಂದೆಯೇ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿದ್ದ ವ್ಯಕ್ತಿಯೊಬ್ಬರ ವಿರುದ್ಧ ಜಾತಿ ನಿಂದನೆ ಪದ ಬಳಸಿದ ಮತ್ತು ಹಲ್ಲೆ ನಡೆಸಿದ ಗುಂಪಿನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ನ್ಯಾಯಾಲಯ ರದ್ದುಗೊಳಿಸಿತು.
ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಎಸ್‌ಸಿ ಎಸ್‌ಟಿ ಕಾಯಿದೆ ಹಾಗೂ ಐಪಿಸಿ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿದ್ದರು. ಆದರೆ ಪಾದ್ರಿ ಕ್ರೈಸ್ತ ಧರ್ಮೀಯರಾಗಿರುವುದರಿಂದ ಎಸ್‌ಸಿ ಎಸ್‌ಟಿ ಕಾಯಿದೆಯಡಿ ಪ್ರಕರಣ ದಾಖಲಿಸುವುದು ಕಾನೂನುಬಾಹಿರ ಎಂದು ಆರೋಪಿಗಳು ವಾದಿಸಿದ್ದರು.
ವಾದ ಪುರಸ್ಕರಿಸಿದ ನ್ಯಾಯಾಲಯ ಐಪಿಸಿಯಡಿಯ ಅಪರಾಧಗಳು ಕೂಡ ಸಾಬೀತಾಗಿಲ್ಲ . ಸುಳ್ಳು ದೂರು ದಾಖಲಿಸಲಾಗಿದ್ದು ಪ್ರಕರಣದ ಅರ್ಜಿದಾರರನ್ನು ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುವಂತೆ ಹೇಳಿದರೆ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.
[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]