ಇವಿಎಂ ಕುರಿತಾದ ಆರ್‌ಟಿಐ ಅರ್ಜಿಗೆ ವರ್ಷದಿಂದ ದೊರೆಯದ ಉತ್ತರ: ಚುನಾವಣಾ ಆಯೋಗಕ್ಕೆ ಸಿಐಸಿ ತರಾಟೆ

ಚುನಾವಣಾ ಆಯೋಗದ ಕ್ರಮಗಳು ಮಾಹಿತಿ ಹಕ್ಕು ಕಾಯಿದೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಮುಖ್ಯ ಮಾಹಿತಿ ಆಯುಕ್ತ ಹೀರಾಲಾಲ್ ಸಮರಿಯಾ ಹೇಳಿದ್ದಾರೆ.
ಇವಿಎಂ ಕುರಿತಾದ ಆರ್‌ಟಿಐ ಅರ್ಜಿಗೆ ವರ್ಷದಿಂದ ದೊರೆಯದ ಉತ್ತರ: ಚುನಾವಣಾ ಆಯೋಗಕ್ಕೆ ಸಿಐಸಿ ತರಾಟೆ

ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತಂತೆ ಮಾಹಿತಿ ಹಕ್ಕು ಕಾಯಿದೆಯಡಿ ಕೇಳಲಾಗಿದ್ದ ಪ್ರಶ್ನೆಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಉತ್ತರಿಸದೇ ಇರುವ ಭಾರತೀಯ ಚುನಾವಣಾ ಆಯೋಗವನ್ನು ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಈಚೆಗೆ ತರಾಟೆಗೆ ತೆಗೆದುಕೊಂಡಿದೆ [ಎಂ ಜಿ ದೇವಸಹಾಯಂ ಮತ್ತು ಭಾರತ ಚುನಾವಣಾ ಆಯೋಗದ ಪಿಐಒ ನಡುವಣ ಪ್ರಕರಣ].

ಚುನಾವಣಾ ಆಯೋಗದ ಕ್ರಮಗಳು ಮಾಹಿತಿ ಹಕ್ಕು ಕಾಯಿದೆಯ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ತೀರ್ಪು ನೀಡಿರುವ ಮುಖ್ಯ ಮಾಹಿತಿ ಆಯುಕ್ತ ಹೀರಾಲಾಲ್ ಸಮರಿಯಾ ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ಲಿಖಿತ ವಿವರಣೆ ಕೇಳಿದ್ದಾರೆ.

ಆರ್‌ಟಿಐ ಕಾಯಿದೆಯಡಿ ನಿಗದಿತ ಗಡುವಿನೊಳಗೆ ಆರ್‌ಟಿಐ ಅರ್ಜಿಗೆ ಉತ್ತರಿಸದ ಆಗಿನ ಮಾಹಿತಿ ಅಧಿಕಾರಿ ಅವರ ನಡೆ ಬಗ್ಗೆ ತನಗೆ ತೀವ್ರ ಅಸಮಾಧಾನ ಇದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಲಿಖಿತ ವಿವರಣೆ ನೀಡಬೇಕು ಎಂದು ಆಯೋಗ ತಾಕೀತು ಮಾಡಿದೆ.

ನವೆಂಬರ್ 2022ರಲ್ಲಿ ನಿವೃತ್ತ ನಾಗರಿಕ ಸೇವಾ ಅಧಿಕಾರಿ ಎಂಜಿ ದೇವಸಹಾಯಂ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಯ ಎರಡನೇ ಮೇಲ್ಮನವಿಯ ವಿಚಾರಣೆ  ವೇಳೆ ಈ ತೀರ್ಪು ನೀಡಲಾಗಿದೆ.

ತಮ್ಮ ಅರ್ಜಿಗೆ 30 ದಿನಗಳೊಳಗೆ ಉತ್ತರ ಬಾರದಿರುವುದು ಮತ್ತು ಮೊದಲ ಮನವಿಗೆ ಪ್ರತಿಕ್ರಿಯೆ ನೀಡದೆ ಇರುವುದನ್ನು ಕಂಡು ದೇವಸಹಾಯಂ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ಸಿಐಸಿ ಕದ ತಟ್ಟಿದ್ದರು.

 ಮತದಾನದ ಸಮಯದಲ್ಲಿ ಇವಿಎಂಗಳು ಮತ್ತು ವೋಟರ್-ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳ ವಿಶ್ವಾಸಾರ್ಹತೆ ಮತ್ತು ಪ್ರಜಾಸತ್ತೆಯ ತತ್ವಗಳಿಗೆ ಅನುಗುಣವಾಗಿ ಇವಿಎಂಗಳು ಇವೆಯೇ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿಯನ್ನು ಪುರಸ್ಕರಿಸಿದ ಸಿಐಸಿ, ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದು 30 ದಿನಗಳೊಳಗೆ ಚುನಾವಣಾ ಆಯೋಗದ ಸಾರ್ವಜನಿಕ ಮಾಹಿತಿ ಅಧಿಕಾರಿ (PIO) ಮತ್ತು ಇತರ ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡುವಂತೆ ನಿರ್ದೇಶಿಸಿದೆ.

ಆರ್‌ಟಿಐ ಕಾರ್ಯಕರ್ತೆ ಅಮೃತಾ ಜೋಹ್ರಿ ಅವರು ಅರ್ಜಿದಾರರ ಪರವಾಗಿ ವಾದ ಮಂಡಿಸಿದರು.

ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಮತ್ತು ಸಹಾಯಕ ವಿಭಾಗಾಧಿಕಾರಿ ಸತೀಶ್ ಕುಮಾರ್ ಅವರು ಚುನಾವಣಾ ಆಯೋಗದ ಪರವಾಗಿ ಹಾಜರಿದ್ದರು.

Kannada Bar & Bench
kannada.barandbench.com