ಗ್ರೇಟರ್‌ ಬೆಂಗಳೂರು ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ ಚಿತ್ರ ನಿರ್ದೇಶಕ ನಾಗಾಭರಣ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯು ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದ್ದು, ಇದನ್ನು ಸಂವಿಧಾನ ಬಾಹಿರ ಎಂದು ಘೋಷಿಸುವ ಮೂಲಕ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಕೋರಿಕೆ.
BBMP and Karnataka HC
BBMP and Karnataka HC
Published on

“ಗ್ರೇಟರ್ ಬೆಂಗಳೂರು ಆಡಳಿತ (ಜಿಬಿಜಿ) ಕಾಯಿದೆ-2025 ಅನ್ನು ಸಂವಿಧಾನ ಬಾಹಿರ” ಎಂದು ಘೋಷಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಾಜ್ಯ ಚುನಾವಣಾ ಆಯೋಗದ ಆಯುಕ್ತರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಸಿನಿಮಾ ನಿರ್ದೇಶಕ ಟಿ ಎಸ್ ನಾಗಭರಣ, ಜಿ ಮಂಜುನಾಥ ರಾಜು ಮತ್ತು ಜಿ ಎಸ್‌ ರೇಣುಕ ಪ್ರಸಾದ್ ಸಲ್ಲಿಸಿರುವ ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

“ಬೆಂಗಳೂರಿನ ಆಡಳಿತ ಮತ್ತು ನಿರ್ವಹಣೆಯನ್ನು ನೇರವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳುವ ಹುನ್ನಾರದಿಂದ ಸರ್ಕಾರ ಈ ಪ್ರಾಧಿಕಾರ ರಚನೆ ಮಾಡಿದೆ. ಇದರಿಂದ, ಚುನಾಯಿತರಲ್ಲದ ವ್ಯಕ್ತಿಗಳಿಗೆ ಹೆಚ್ಚಿನ ಅಧಿಕಾರ ಸಿಗಲಿದೆ. ಇದು ಅಧಿಕಾರ ವಿಕೇಂದ್ರೀಕರಣ ಮತ್ತು ಸ್ಥಳೀಯ ಸರ್ಕಾರಗಳ ಬಲವರ್ಧನೆಯ ತತ್ವಕ್ಕೆ ಪೆಟ್ಟುಕೊಡಲಿದೆ” ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

“ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯು ಸಂವಿಧಾನದ 74ನೇ ತಿದ್ದುಪಡಿಗೆ ವಿರುದ್ಧವಾಗಿದ್ದು, ಇದನ್ನು ಸಂವಿಧಾನ ಬಾಹಿರ ಎಂದು ಘೋಷಿಸುವ ಮೂಲಕ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು” ಎಂದು ಅರ್ಜಿದಾರರು ಕೋರಿದ್ದಾರೆ. ಹೈಕೋರ್ಟ್‌ ವಕೀಲ ಎಸ್‌ ವಿವೇಕಾನಂದ ಅರ್ಜಿದಾರರ ಪರ ವಕಾಲತ್ತು ವಹಿಸಿದ್ದಾರೆ.

Kannada Bar & Bench
kannada.barandbench.com