ವಿವಾದ ಬಗೆಹರಿಸಿಕೊಂಡ ಸಿನಿ1 ಮತ್ತು ಟಿ-ಸೀರೀಸ್: 'ಅನಿಮಲ್‌ʼ ಒಟಿಟಿ ಬಿಡುಗಡೆ ಹಾದಿ ಸುಗಮ

ಒಪ್ಪಂದ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಟಿ-ಸೀರೀಸ್ ವಿರುದ್ಧ ಮೊಕದ್ದಮೆ ಹೂಡಿದ್ದ ಸಿನಿ1 ಒಟಿಟಿ ವೇದಿಕೆಗಳಲ್ಲಿ ಚಿತ್ರ ಬಿಡುಗಡೆಗೆ ತಡೆ ಕೋರಿತ್ತು.
 ಅನಿಮಲ್ ಚಲನಚಿತ್ರದ ಪೋಸ್ಟರ್‌
ಅನಿಮಲ್ ಚಲನಚಿತ್ರದ ಪೋಸ್ಟರ್‌

ಅನಿಮಲ್‌ ಚಲನಚಿತ್ರದ ಒಪ್ಪಂದ ಉಲ್ಲಂಘನೆಗೆ ಸಂಬಂಧಿಸಿದ ವಿವಾದವನ್ನು ಬಗೆಹರಿಸಿಕೊಂಡಿರುವುದಾಗಿ ಸಿನಿ1 ಪ್ರೈವೇಟ್ ಲಿಮಿಟೆಡ್ ಮತ್ತು ಸೂಪರ್ ಕ್ಯಾಸೆಟ್ಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (ಟಿ-ಸೀರಿಸ್) ದೆಹಲಿ ಹೈಕೋರ್ಟ್‌ಗೆ ಸೋಮವಾರ ತಿಳಿಸಿವೆ. ಆ ಮೂಲಕ ರಣಬೀರ್‌ ಕಪೂರ್‌ ಅಭಿನಯದ ಚಿತ್ರ ಓವರ್-ದಿ-ಟಾಪ್‌ (ಒಟಿಟಿ) ವೇದಿಕೆಯಲ್ಲಿ ಬಿಡುಗಡೆಯಾಗುವ ಕುರಿತು ಇದ್ದ ಅನುಮಾನಗಳು ದೂರವಾಗಿವೆ.

ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಅದನ್ನು ನ್ಯಾಯಾಲಯಕ್ಕೆ ದಾಖಲೆಯಲ್ಲಿ ಸಲ್ಲಿಸಲಾಗುವುದು ಎಂದು ಸಿನಿ1 ಮತ್ತು ಟಿ-ಸೀರೀಸ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ವಾದ ಆಲಿಸಿದ ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಒಪ್ಪಂದ ಪತ್ರಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಸೂಚಿಸಿದರು. ಜನವರಿ 24 ರಂದು ವಿಲೇವಾರಿಗಾಗಿ ಪ್ರಕರಣವನ್ನು ನ್ಯಾಯಾಲಯ ಪರಿಗಣಿಸಲಿದೆ.

ನ್ಯಾಯಮೂರ್ತಿ ಸಂಜೀವ್ ನರುಲಾ
ನ್ಯಾಯಮೂರ್ತಿ ಸಂಜೀವ್ ನರುಲಾ

ಟಿ ಸೀರಿಸ್‌ ಜೊತೆಗೂಡಿ ಚಿತ್ರ ನಿರ್ಮಾಣಕ್ಕೆ ಒಪ್ಪಂದವನ್ನು ತಾನು ಮಾಡಿಕೊಂಡಿದ್ದಾಗಿ ಸಿನಿ1 ಹೇಳಿತ್ತು. ಸಿನಿಮಾದಲ್ಲಿ ಶೇ 35 ರಷ್ಟು ಲಾಭಾಂಶದ ಪಾಲು ತನ್ನದಾಗಿದ್ದು ಶೇ 35ರಷ್ಟು ಬೌದ್ಧಿಕ ಆಸ್ತಿಗೂ ಅರ್ಹವಾಗಿದ್ದೇನೆ. ತನ್ನ ಅನುಮೋದನೆ ಇಲ್ಲದೆ ಟಿ-ಸೀರೀಸ್ ಚಲನಚಿತ್ರವನ್ನು ತಯಾರಿಸಿದ್ದು / ಪ್ರಚುರಪಡಿಸಿದ್ದು / ಬಿಡುಗಡೆ ಮಾಡಿದೆ. ಯಾವುದೇ ವಿವರ ಹಂಚಿಕೊಳ್ಳದೆ ಗಲ್ಲಾ ಪೆಟ್ಟಿಗೆ ಮಾರಾಟದಲ್ಲಿ ಬಂದ ಆದಾಯವನ್ನೆಲ್ಲಾ ತಾನೇ ಪಡೆದಿದೆ. ಲಾಭ-ಹಂಚಿಕೆ ಒಪ್ಪಂದದ ಹೊರತಾಗಿಯೂ ತನಗೆ ಯಾವುದೇ ಹಣ ಪಾವತಿಸಿಲ್ಲ ಎಂದು ಸಿನಿ1 ದಾವೆಯಲ್ಲಿ ತಿಳಿಸಿತ್ತು.

ಆದರೆ ಸಿನಿ1 ಚಿತ್ರದಲ್ಲಿ ಒಂದು ರೂಪಾಯಿಯನ್ನೂ ಹೂಡಿಕೆ ಮಾಡಿಲ್ಲ. ಜೊತೆಗೆ ಚಿತ್ರದಲ್ಲಿನ ತನ್ನೆಲ್ಲಾ ಬೌದ್ಧಿಕ ಆಸ್ತಿ ಮತ್ತು ಉಪಉತ್ಪನ್ನಗಳ ಹಕ್ಕುಗಳನ್ನು 2.6 ಕೋಟಿ ರೂಪಾಯಿಗೆ ಬಿಟ್ಟುಕೊಟ್ಟಿದೆ. ಈ ಅಂಶವನ್ನು ಮೊಕದ್ದಮೆಯಲ್ಲಿ ಮರೆಮಾಚಲಾಗಿದೆ ಎಂದು ಜನವರಿ 15 ರಂದು ನಡೆದ ವಿಚಾರಣೆ ವೇಳೆ ಟಿ- ಸೀರಿಸ್‌ ವಾದಿಸಿತ್ತು.

Related Stories

No stories found.
Kannada Bar & Bench
kannada.barandbench.com