
“ಭೂ ಸ್ವಾಧೀನ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ದೇಶದ ನಾಗರಿಕರು ಸಲ್ಲಿಸುವ ಆಕ್ಷೇಪಣೆಯ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ವಶಪಡಿಸಿಕೊಂಡಿದ್ದ ಜಮೀನನ್ನು ಅರ್ಜಿದಾರರಿಗೆ ಮರಳಿಸುವಂತೆ ಈಚೆಗೆ ನಿರ್ದೇಶಿಸಿದೆ.
ಮಂಗಳೂರಿನ ಕಂಕನಾಡಿ ಗೋರಿಗುಡ್ಡದ ಎಸ್ ಎನ್ ಡಿ ಸಂಪತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಪ್ರಕರಣದಲ್ಲಿ ಜಮೀನುಗಳ ಮಾಲೀಕರ ಹೆಸರಿನ ದಾಖಲೆಗಳನ್ನು ಪರಿಶೀಲಿಸದೆ ರಾಷ್ಟ್ರೀಯ ಹೆದ್ದಾರಿ ಕಾಯಿದೆ–1956ರ ಸೆಕ್ಷನ್ 3 (ಎ) ಮತ್ತು 3 (ಡಿ) ಅಡಿಯಲ್ಲಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ, ಸೆಕ್ಷನ್ 3(ಎ) ಮತ್ತು 3(ಡಿ) ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಗಳು ಅರ್ಜಿದಾರರ ಭೂಮಿಗೆ ಅನ್ವಯಿಸುವುದಿಲ್ಲ ಮತ್ತು ಅವರು ಹೇಳಿದ ಭೂಮಿಯನ್ನು ಬಳಸಲು ಸ್ವತಂತ್ರರು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಒಂದು ವೇಳೆ ಎನ್‌ಎಚ್‌ಎಐ ವಶಪಡಿಸಿಕೊಂಡಿರುವ ಜಮೀನನ್ನು ಬಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಕಟ್ಟಡ ನಿರ್ಮಿಸಿದ್ದರೆ ಅದನ್ನು ತೆಗೆದು ಹಾಕಿ ಅರ್ಜಿದಾರರಿಗೆ ಮುಕ್ತಗೊಳಿಸಬೇಕು" ಎಂದು ಪೀಠ ಘೋಷಿಸಿದೆ.
ಮಂಗಳೂರು ಸಮೀಪದ ಕಂಕನಾಡಿ ಬಿ. ಹಳ್ಳಿಯ ಗೋರಿಗುಡ್ಡದಲ್ಲಿರುವ ಜಮೀನಿನ ಕೆಲವು ಭಾಗಗಳನ್ನು ಎನ್‌ಎಚ್‌ಎಐ ಸ್ವಾಧೀನಪಡಿಸಿಕೊಂಡಿದ್ದನ್ನು ಪ್ರಶ್ನಿಸಿ ಅರ್ಜಿದಾರರು 2016ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
“ರಾಷ್ಟ್ರೀಯ ಹೆದ್ದಾರಿ ಕಾಯಿದೆ ಸೆಕ್ಷನ್ 3(ಎ) ಅಡಿಯಲ್ಲಿ ಎನ್‌ಎಚ್‌ಎಐ ಹೊರಡಿಸಿದ ಪ್ರಾಥಮಿಕ ಅಧಿಸೂಚನೆಯಲ್ಲಿ ಆಸ್ತಿಯ ವಿವರಗಳು ಅಥವಾ ಹೆಸರನ್ನು ಪ್ರಕಟಿಸಲಾಗಿಲ್ಲ. ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಅಥವಾ ವಿಚಾರಣೆಯ ಅವಕಾಶವನ್ನೂ ಒದಗಿಸಿಲ್ಲ” ಎಂದು ಅವರು ಆಕ್ಷೇಪಿಸಿದ್ದರು. ಅರ್ಜಿದಾರರ ಪರ ಎಸ್ ನೋವಾ ಬೆಥನಿಯಾ ವಾದ ಮಂಡಿಸಿದ್ದರು.