ಪ್ರಮುಖ ವಿಷಯಗಳನ್ನು ಚರ್ಚಿಸಲು ಸಂಸತ್ತಿಗೆ ನೇರವಾಗಿ ಮನವಿ ಮಾಡುವ ಮೂಲಭೂತ ಹಕ್ಕನ್ನು ನಾಗರಿಕರು ಹೊಂದಿದ್ದಾರೆ ಎಂದು ಘೋಷಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ಸಂಸತ್‌ನಲ್ಲಿ ಧ್ವನಿ ಎತ್ತುವ ಹಕ್ಕನ್ನು ನಾಗರಿಕರು ಕೋರಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ.
“ಸಂಸತ್‌ನ ಹೊರಗೆ ಮಾತನಾಡಿ. ಸ್ಥಳೀಯ ಸಂಸದರನ್ನು ಕಂಡು ಅವರಿಗೆ ಮನವಿ ನೀಡಿ. ಆದರೆ, ಸಂಸತ್‌ನಲ್ಲಿ ದನಿ ಎತ್ತುವ ಹಕ್ಕನ್ನು ನಾಗರಿಕರು ಕೇಳಲಾಗದು. ಕ್ಷಮಿಸಿ” ಎಂದು ಪೀಠ ಹೇಳಿತು.
ಪಿಐಎಲ್ ಮೂಲಕ ಕೋರಿರುವ ಪರಿಹಾರಗಳು ಸಂಸತ್ ಮತ್ತು ವಿಧಾನ ಸಭೆಗಳ ವ್ಯಾಪ್ತಿಗೊಳಪಡುವುದರಿಂದ ನ್ಯಾಯಾಲಯ ನಿರ್ದೇಶನ ನೀಡಲಾಗದು ಎಂದು ಪೀಠ ಹೇಳಿತು. ಮುಂದುವರೆದು, “ನಾವು ಈ ವಿಚಾರವಾಗಿ ರೇಖೆ ಹಾಕಿಕೊಳ್ಳಬೇಕಿದ್ದು, ಏನು ಮಾಡಬೇಕು ಎಂದು ನಾವು ಸಂಸತ್‌ಗೆ ಹೇಳಲಾಗದು” ಎಂದು ವಿವರಿಸಿತು.