ಪೌರತ್ವ ಕಾಯಿದೆಯ ಸೆಕ್ಷನ್ 6 ಎ ಪ್ರಶ್ನಿಸಿದ್ದ ಅರ್ಜಿ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳನಿಧಾನಗತಿಯ ಭೂಸ್ವಾಧೀನ ನೀತಿ ಹೊಂದಿದ್ದು, ಇದು ಭಾರತ-ಬಾಂಗ್ಲಾದೇಶ ಗಡಿಗೆ ತಡೆ ಬೇಲಿ ಹಾಕುವ ಯತ್ನಗಳಿಗೆ ಅಡ್ಡಿಯಾಗಿದೆ ಎಂದು ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೇಳಿದರು.
ಸುಪ್ರೀಂ ಕೋರ್ಟ್, ಅಸ್ಸಾಂ
ಸುಪ್ರೀಂ ಕೋರ್ಟ್, ಅಸ್ಸಾಂ
Published on

1955ರ ಪೌರತ್ವ ಕಾಯಿದೆಯ ಸೆಕ್ಷನ್ 6 ಎ ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಕಾಯ್ದಿರಿಸಿದೆ .

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ವಕೀಲರ ವಾದಗಳನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ ಎಂ ಸುಂದರೇಶ್,  ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಆಲಿಸಿತು.

ಮಂಗಳವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ, ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಅವರು ಪಶ್ಚಿಮ ಬಂಗಾಳ ನಿಧಾನಗತಿಯ ಭೂಸ್ವಾಧೀನ ನೀತಿ ಹೊಂದಿದ್ದು, ಇದು ಭಾರತ-ಬಾಂಗ್ಲಾದೇಶ ಗಡಿಗೆ ತಡೆ ಬೇಲಿ ಹಾಕುವ ಯತ್ನಗಳಿಗೆ ಅಡ್ಡಿಯಾಗಿದೆ ಎಂದು ಹೇಳಿದರು.

ತಡೆ ಬೇಲಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಯಾರು ಪರಿಹಾರ ನೀಡುತ್ತಾರೆ ಎಂದು ನ್ಯಾ. ಕಾಂತ್ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಜಿ "ಗಡಿ ಪ್ರದೇಶಗಳ ವಿಚಾರ ಕೇಂದ್ರಕ್ಕೆ ಸಂಬಂಧಿಸಿದ್ದು. ಇದನ್ನು ತುರ್ತು ನಿಯಮಗಳಿಗೆ ಅನ್ವಯಿಸದೆ ಮತ್ತಾವುದಕ್ಕೆ ಅನ್ವಯಿಸಲು ಸಾಧ್ಯ? (ರಾಜ್ಯ ಸರ್ಕಾರದ) ನೇರ ಭೂಮಿ ಖರೀದಿ ನೀತಿ ಕೈಗಾರಿಕೆಗಳಿಗಾಗಿ ಇದೆಯೇ ವಿನಾ ರಾಷ್ಟ್ರೀಯ ಭದ್ರತಾ ಕಾಳಜಿಗಾಗಿ ಅಲ್ಲ" ಎಂದು ಆಕ್ಷೇಪಿಸಿದರು.

ಪೌರತ್ವ ಕಾಯ್ದೆಯ ಸೆಕ್ಷನ್ 6 ಎ ಅಸ್ಸಾಂ ಒಪ್ಪಂದದ ವ್ಯಾಪ್ತಿಗೆ ಬರುವ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದೆ. ಈ ಸೆಕ್ಷನ್‌ ಪ್ರಕಾರ ಜನವರಿ 1, 1966 ಮತ್ತು ಮಾರ್ಚ್ 25, 1971ರ ನಡುವೆ ಭಾರತ ಪ್ರವೇಶಿಸಿ ಅಸ್ಸಾಂನಲ್ಲಿ ವಾಸಿಸುತ್ತಿರುವ ಜನರು ತಮ್ಮನ್ನು ಭಾರತದ ನಾಗರಿಕರು ಎಂದು ನೋಂದಾಯಿಸಿಕೊಳ್ಳಲು ಅವಕಾಶ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪಟ್ಟಿ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಲಿದೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ನಂತರ ಪೂರ್ವ ಬಂಗಾಳದ ಜನರ ಮೇಲೆ ನಡೆದ ದೌರ್ಜನ್ಯಗಳಿಗೆ ಪರಿಹಾರ ನೀಡುವುದಕ್ಕಾಗಿ ಈ ನಿಯಮಾವಳಿಯನ್ನು ಭಾಗಶಃ ಜಾರಿಗೆ ತರಲಾಗಿದೆ ಎಂಬ ವಿಚಾರವನ್ನು ಡಿಸೆಂಬರ್‌ನಲ್ಲಿ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಆದ್ದರಿಂದ, ಇದನ್ನು ಸಾಮಾನ್ಯವಾಗಿ ಅಕ್ರಮ ವಲಸಿಗರಿಗೆ ಕ್ಷಮಾದಾನ ನೀಡುವ ಯೋಜನೆಗೆ ಹೋಲಿಸಲಾಗುವುದಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿತ್ತು ಸೆಕ್ಷನ್ ಜಾರಿಗೆ ಬಂದ ನಂತರ ಉದ್ಭವಿಸಿದ ರಾಜಕೀಯ ಬೆಳವಣಿಗೆಗಳಿಂದ ಅದರ ಸಿಂಧುತ್ವವನ್ನು ನಿರ್ಧರಿಸಲಾಗುವುದಿಲ್ಲ ಎಂದು ಸಿಜೆಐ ಹೇಳಿದ್ದರು.

ಇಂತಹ ವಲಸೆಗಳು ರಹಸ್ಯವಾಗಿ ನಡೆಯುವುದರಿಂದ ಭಾರತಕ್ಕೆ ವಿದೇಶಿಯರ ಅಕ್ರಮ ವಲಸೆಯ ಪ್ರಮಾಣದ ಬಗ್ಗೆ ನಿಖರವಾದ ಮಾಹಿತಿ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

2017 ಮತ್ತು 2022ರ ನಡುವೆ 14,346 ವಿದೇಶಿ ಪ್ರಜೆಗಳನ್ನು ದೇಶದಿಂದ ಗಡೀಪಾರು ಮಾಡಲಾಗಿದ್ದು ಜನವರಿ 1966 ಮತ್ತು ಮಾರ್ಚ್ 1971ರ ನಡುವೆ ಅಸ್ಸಾಂ ಪ್ರವೇಶಿಸಿದ 17,861 ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಮಂಗಳವಾರ ಪ್ರಕರಣದ ವಿಚಾರಣೆ ವೇಳೆ ಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಅರ್ಜಿದಾರರೊಬ್ಬರ ಪರ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರು ಅರ್ಜಿಗಳನ್ನು ವಿರೋಧಿಸಿದರು. ಪೌರತ್ವವು ದೂರಗಾಮಿ ಪರಿಣಾಮಗಳನ್ನು ಹೊಂದಿದೆ ಎಂದು ಅವರು ಹೇಳಿದರು.

ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿದ್ದ ಮತ್ತೊಬ್ಬ ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಸಿ ಯು ಸಿಂಗ್ , ಸೆಕ್ಷನ್ 6 ಎ ಅರ್ಜಿದಾರರಿಗೆ ಸಂವಿಧಾನದ 14ನೇ ವಿಧಿಯಡಿ ಒದಗಿಸಲಾದ ಹಕ್ಕಿನ ಉಲ್ಲಂಘನೆಯಾಗದು. ಇದು ಅಸ್ಸಾಂನಲ್ಲಿ ನಿರಂತರ ವಾಸವಿರುವಿಕೆಯನ್ನು ಆಧರಿಸಿರುವುದರಿಂದ ಅದನ್ನು ಸ್ವಾಭಾವಿಕತೆಯ ಮೂಲಕ ಪೌರತ್ವ ಎಂದು ಪರಿಗಣಿಸಬಹುದು ಎಂದು ವಾದಿಸಿದರು.

ಅಸ್ಸಾಂ ಜಮಿಯತ್- ಉಲೇಮಾ- ಎ- ಹಿಂದ್ ಪರವಾಗಿ ಹಾಜರಾದ ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ , ಈ ನಿಬಂಧನೆಯು ಆ ಸಮಯದಲ್ಲಿ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದ ಪರಿಸ್ಥಿತಿಯಂತೆ ಅಸ್ಸಾಂ ರಾಜ್ಯಕ್ಕೆ ಅಗತ್ಯವಾದ ಪ್ರತ್ಯೇಕ ಪರಿಹಾರವನ್ನು ಒದಗಿಸುತ್ತದೆ ಎಂದು ವಾದಿಸಿದರು.

ನ್ಯಾಯವಾದಿ ಶಾದನ್ ಫರಾಸತ್ ವಾದ ಮಂಡಿಸಿ, ಒಂದು ಪ್ರದೇಶದ ಸಂಸ್ಕೃತಿಯ ರಕ್ಷಣೆಯನ್ನು ಇತರರಿಗೆ ರಾಷ್ಟ್ರೀಯತೆಯನ್ನು ನಿರಾಕರಿಸುವ ಮಟ್ಟಕ್ಕೆ ಏರಿಸಲು ಸಾಧ್ಯವಿಲ್ಲ, ಏಕೆಂದರೆ ಆಗ ಪ್ರಜೆಗಳು ನಾಗರಿಕ ರಾಷ್ಟ್ರೀಯತೆಯಿಂದ ಸಾಂಸ್ಕೃತಿಕ ರಾಷ್ಟ್ರೀಯತೆಗೆ ಬದಲಾಗುತ್ತಾರೆ ಎಂದರು.

ಸೆಕ್ಷನ್ 6 ಎ ಅಡಿಯಲ್ಲಿ ಅರ್ಜಿಗಳನ್ನು ಇಂದಿಗೂ ಸಲ್ಲಿಸಬಹುದು ಮತ್ತು ಅಸ್ಸಾಂನ ಸಾಮಾನ್ಯ ನಿವಾಸಿಗಳಿಗೆ ಹಾನಿಯಾಗುವಂತೆ ಅನುಮೋದಿಸಲಾಗುತ್ತದೆ ಎಂದು ಈ ನಿಬಂಧನೆಯನ್ನು ರದ್ದುಗೊಳಿಸುವಂತೆ ಕೋರಿದ ಪ್ರಮುಖ ಅರ್ಜಿದಾರರ ವಕೀಲ ಶ್ಯಾಮ್ ದಿವಾನ್ ವಾದಿಸಿದರು. ಬಳಿಕ ಪೀಠ ತೀರ್ಪನ್ನು ಕಾಯ್ದಿರಿಸಿತು.

Kannada Bar & Bench
kannada.barandbench.com