ಪೌರತ್ವ ತಿದ್ದುಪಡಿ ಕಾಯಿದೆ ಅಸಾಂವಿಧಾನಿಕ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ

“…ಧರ್ಮದ ಆಧಾರದಲ್ಲಿ ಪೌರತ್ವ ಕಲ್ಪಿಸುವ ಪೌರತ್ವ ತಿದ್ದುಪಡಿ ಕಾಯಿದೆಯು ನನ್ನ ಪ್ರಕಾರ ಮತ್ತು ಎಸ್‌ ಆರ್‌ ಬೊಮ್ಮಾಯಿ ಪ್ರಕರಣದ ಅನ್ವಯ ಅಸಾಂವಿಧಾನಿಕ” ಎಂದು ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಹೇಳಿದ್ದಾರೆ.
Justice (Retd.) Gopala Gowda
Justice (Retd.) Gopala Gowda

ಧರ್ಮದ ಆಧಾರದಲ್ಲಿ ಪೌರತ್ವ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಪೌರತ್ವ (ತಿದ್ದುಪಡಿ) ಕಾಯಿದೆಯು (ಸಿಎಎ) ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಧರ್ಮದ ಆಧಾರದಲ್ಲಿ ಪೌರತ್ವ ಕಲ್ಪಿಸುವ ಕಲ್ಪನೆಯನ್ನು ಸಂವಿಧಾನದ ನಿರ್ಮಾತೃಗಳು ತಿರಸ್ಕರಿಸಿದ್ದರು ಎಂದರು. “ಆದರೆ, ಪೌರತ್ವ ತಿದ್ದುಪಡಿ ಕಾಯಿದೆ 2019ರ ಅಡಿ ಅದನ್ನು ಮಾಡಲಾಗಿದೆ” ಎಂದು ಹೇಳಿದ್ದಾರೆ.

ಸಂವಿಧಾನ ನಿಬಂಧನೆಗಳ ಕರಡಿಗೆ ತಿದ್ದುಪಡಿ ಮಾಡುವ ಮೂಲಕ ಎಲ್ಲಾ ಹಿಂದೂಗಳು ಮತ್ತು ಸಿಖ್ಖರಿಗೆ ಪೌರತ್ವ ನೀಡಬೇಕು ಎಂದು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದ ಪಿ ಎಸ್‌ ದೇಶ್‌ಮುಖ್‌ ಪ್ರಸ್ತಾಪ ಮಂಡಿಸಿದ್ದರು ಎಂದು ಗೌಡರು ನೆನಪಿಸಿಕೊಂಡಿದ್ದಾರೆ.

“ಜಾತ್ಯತೀತವಾದಕ್ಕೆ ಸಂಬಂಧಿಸಿದಂತೆ ಸಂವಿಧಾನ ರಚನಾ ಸಭೆಯು ಬಹಳ ದೂರ ಸಾಗುತ್ತಿದೆ ಎನ್ನುವುದು ಅವರ (ದೇಶ್‌ಮುಖ್‌) ಅಭಿಪ್ರಾಯವಾಗಿತ್ತು. 'ಜಾತ್ಯತೀತತೆಯನ್ನು ಸಾಬೀತುಪಡಿಸಲು ನಾವು ನಮ್ಮ ಜನರನ್ನು ಅಳಿಸಿ ಹಾಕಬೇಕೆ? ಜಾತ್ಯತೀತತೆಯನ್ನು ನಿರೂಪಿಸಲು ಅವರನ್ನು ನಾವು ಅಳಿಸಿ ಹಾಕಬೇಕೆ? ಜಾತ್ಯತೀತವಾದದ ಹೆಸರಿನಲ್ಲಿ ಎಲ್ಲಾ ಹಿಂದೂಗಳು ಮತ್ತು ಸಿಖ್ಖರನ್ನು ಅಳಿಸಿ ಹಾಕಬೇಕೆ? ನಾವು ಜಾತ್ಯತೀತವಾದಿಗಳು ಎಂಬುದನ್ನು ಸಾಬೀತುಪಡಿಸಲು ಭಾರತೀಯರಿಗೆ ಪವಿತ್ರವಾದ ಮತ್ತು ಆತ್ಮೀಯವಾದ ಎಲ್ಲವನ್ನೂ ಮರೆಮಾಚಬೇಕೆ?'ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು" ಎಂದರು.

ಸಂವಿಧಾನ ರಚನಾ ಸಭೆಯ ಮತ್ತೊಬ್ಬ ಪ್ರಮುಖ ಸದಸ್ಯರಾದ ಶಿಬ್ಬಾನ್‌ ಲಾಲ್‌ ಸೆಕ್ಸೇನಾ ಅವರು ದೇಶ್‌ಮುಖ್‌ ಮಾತುಗಳಿಗೆ ಬೆಂಬಲ ಸೂಚಿಸುತ್ತಾ, “ಭಾರತವನ್ನು ಬಿಟ್ಟು ಹಿಂದೂಗಳು ಮತ್ತು ಸಿಖ್ಖ‌ರಿಗೆ ಬೇರಾವುದೇ ತಾಯ್ನಾಡು ಇಲ್ಲ. ವಾಸ್ತವ, ಸತ್ಯವನ್ನು ಎದುರಿಸುವಾಗ ‘ಜಾತ್ಯತೀತ’ ಎಂಬ ನುಡಿಗಟ್ಟು ನಮ್ಮನ್ನು ಹೆದರಿಸಬಾರದು ಎಂದಿದ್ದರು” ಎಂದು ಗೋಪಾಲಗೌಡರು ಹೇಳಿದರು.

ಮುಂದುವರೆದು, "ಈ ಪ್ರಸ್ತಾವಕ್ಕೆ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಅಲ್ಲಾಡಿ ಕೃಷ್ಣ ಐಯ್ಯರ್‌ ಅವರು ವಿರೋಧ ವ್ಯಕ್ತಪಡಿಸಿದ್ದರು. 'ಪೌರತ್ವಕ್ಕೆ ಸಂಬಂಧಿಸಿದಂತೆ ಜಾತ್ಯತೀತ ವಿಧಾನ ಅನುಸರಿಸುವುದು ಉದಾರತೆಯಲ್ಲ, ಇದನ್ನು ಬಹುತೇಕ ಎಲ್ಲಾ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಎಲ್ಲೋ ಕೆಲವು ತಪ್ಪು ಮಾರ್ಗದರ್ಶನದಡಿ ನಡೆಯುತ್ತಿರುವ ರಾಷ್ಡ್ರಗಳು ಮತ್ತು ಹಿಂದುಳಿದ ದೇಶಗಳಷ್ಟೇ ಇದಕ್ಕೆ ಹೊರತಾಗಿವೆ' ಎಂದು ಈ ಭವ್ಯ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್‌ ನೆಹರೂ ಅವರು ಮಧ್ಯಪ್ರವೇಶಿಸಿ ಹೇಳಿದ್ದರು. ನೆಹರೂ ಅವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌ ಅವರು 'ಪೌರತ್ವ ನೀಡುವಿಕೆಗೆ ಸಂಬಂಧಿಸಿದಂತೆ ನಾವು ಮತ್ತೊಂದು ದೇಶವನ್ನು ತಮ್ಮ ಮನೆಯಾಗಿ ಆಯ್ಕೆ ಮಾಡಿಕೊಂಡಿರುವ ಜನರು ಮತ್ತು ಈ ದೇಶದೊಂದಿಗೆ ತಮ್ಮ ಸಂಪರ್ಕವನ್ನು ಉಳಿಸಿಕೊಳ್ಳಲು ಬಯಸುವವರ ನಡುವೆ ವ್ಯತ್ಯಾಸವನ್ನು ತೋರಿಸುತ್ತೇವೆ. ಆದರೆ ಇದನ್ನು ಯಾವುದೇ ಜನಾಂಗೀಯತೆ ಅಥವಾ ಧರ್ಮದ ಆಧಾರದ ಮೇಲೆ ನಾವು ಮಾಡಲಾಗದು' ಎಂದು ಹೇಳಿದ್ದರು" ಎನ್ನುವುದನ್ನು ಗೋಪಾಲಗೌಡರು ನೆನಪಿಸಿದರು.

ಎಸ್‌ ಆರ್‌ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈ ತತ್ವವನ್ನು ಗುರುತಿಸಿದೆ ಎಂದು ನ್ಯಾ. ಗೌಡ ಹೇಳಿದ್ದಾರೆ. “1994ರಲ್ಲಿ ಬೊಮ್ಮಾಯಿ ವರ್ಸಸ್‌ ಭಾರತ ಸರ್ಕಾರದ ಪ್ರಕರಣದಲ್ಲಿ ಸಾಂವಿಧಾನಿಕ ಪೀಠ ನೀಡಿದ ತೀರ್ಪಿನ ಕಾನೂನು ಇದಾಗಿದೆ. ಆಗ ಸುಪ್ರೀಂ ಕೋರ್ಟ್‌ ಈ ಬಗ್ಗೆ ಸ್ಪಷ್ಟ ಗೆರೆ ಎಳೆದಿದೆ: ಧರ್ಮದ ಆಧಾರದಲ್ಲಿ ಸಂಸತ್‌ ಅಥವಾ ವಿಧಾನ ಸಭೆಯು ಯಾವುದೇ ಕಾನೂನು ರೂಪಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ," ಹೀಗಾಗಿ ಸಿಎಎ ಅಸಾಂವಿಧಾನಿಕ ಎಂದು ಅವರು ಹೇಳಿದರು. “ಧರ್ಮದ ಆಧಾರದಲ್ಲಿ ಪೌರತ್ವ ಕಲ್ಪಿಸುವ ಪೌರತ್ವ ತಿದ್ದುಪಡಿ ಕಾಯಿದೆಯು ನನ್ನ ಪ್ರಕಾರ ಮತ್ತು ಎಸ್‌ ಆರ್‌ ಬೊಮ್ಮಾಯಿ ಪ್ರಕರಣದ ಅನ್ವಯ ಅಸಾಂವಿಧಾನಿಕ” ಎಂದು ನ್ಯಾಯಮೂರ್ತಿ ಗೋಪಾಲಗೌಡ ಖಚಿತವಾಗಿ ಹೇಳಿದರು.

ಡಾ. ಕೆ ಎಸ್‌ ಚೌಹಾಣ್‌ ಅವರು ಬರೆದಿರುವ 'ಪೌರತ್ವ, ಹಕ್ಕುಗಳು ಮತ್ತು ಸಾಂವಿಧಾನಿಕ ಸೀಮಿತತೆಗಳು' ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಭಾಗವಹಿಸಿದ ಮಾತನಾಡಿದರು.

Also Read
ಸಿಎಎ ವಿರೋಧಿ ಪ್ರತಿಭಟನೆ: ಮಂಗಳೂರು ಗಲಭೆಯ ಆಪಾದನೆ ಹೊರಿಸಲಾದ 21 ಮಂದಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ಕೇಂದ್ರ ಸರ್ಕಾರವು ಪೌರತ್ವವನ್ನು ಸಾಬೀತುಪಡಿಸುವ ಉದ್ದೇಶದಿಂದ ಪ್ರಸ್ತಾಪ ಮಾಡಿರುವ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಸಿಆರ್‌) ಬಗ್ಗೆಯೂ ಗೋಪಾಲಗೌಡರು ಮಾತನಾಡಿ, “ಭಾರತದಲ್ಲಿ ಶೇ. 50ಕ್ಕೂ ಹೆಚ್ಚು ಜನರು ಅನಕ್ಷರಸ್ಥರಾಗಿದ್ದು, ದೇಶ ಸ್ವಾತಂತ್ರ್ಯ ಪಡೆದು 71 ವರ್ಷಗಳಾಗಿದ್ದರೂ ಅವರ ದಾಖಲೆಗಳನ್ನು ಸರಿಯಾಗಿ ಇಡಲಾಗಿಲ್ಲ," ಎಂದಿದ್ದಾರೆ. “ಇದರಿಂದ ಒಂದೇ ಒಂದು ಧರ್ಮ ಮಾತ್ರ ಸಮಸ್ಯೆಗೆ ಸಿಲುಕುವುದಿಲ್ಲ. ಧರ್ಮಾತೀತವಾಗಿ ಎನ್‌ಆರ್‌ಸಿಯು ಎಲ್ಲಾ ವ್ಯಕ್ತಿಗಳಿಗೂ ಅದು ಅನ್ವಯಿಸಲಿದೆ. ಇದನ್ನು ನೆನಪಿಸಿಕೊಳ್ಳಬೇಕು” ಎಂದಿದ್ದಾರೆ,

ಎನ್‌ಆರ್‌ಸಿಯಿಂದಾಗಿ ಹಲವು ವಿಭಾಗಗಳ ಜನರಿಗೆ ಸಮಸ್ಯೆಯಾಗಲಿದ್ದು, ಇದರಿಂದ ಅವರು ದೇಶರಹಿತರಾಗುತ್ತಾರೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ ಎಂದು ಡಾ. ಚೌಹಾಣ್‌ ಹೇಳಿದರು. “ಇವರುಗಳ ರಕ್ಷಣೆಗೆ ನ್ಯಾಯಾಲಯ ಮುಂದಾಗಬೇಕು” ಎಂದು ಅವರು ಮನವಿ ಮಾಡಿದರು.

“ಭಾರತ ಜಾತ್ಯತೀಯ ರಾಷ್ಟ್ರವಾಗಿದ್ದು, ಸಿಎಎ ಸಂಪೂರ್ಣವಾಗಿ ಅಸಾಂವಿಧಾನಿಕ” ಎಂದು ಡಾ. ಚೌಹಾಣ್‌ ಹೇಳಿದರು. ಧರ್ಮ ಎಂಬುದು ವ್ಯಕ್ತಿಯ ಖಾಸಗಿ ವಿಚಾರವಾಗಿದ್ದು, ಜಾತ್ಯತೀತ ರಾಷ್ಟ್ರದಲ್ಲಿ ಯಾವೊಬ್ಬ ವ್ಯಕ್ತಿಯೂ ಧರ್ಮಕ್ಕೆ ಹೆಚ್ಚು ಒತ್ತು ನೀಡುವಂತಿಲ್ಲ. ಸಂವಿಧಾನದಿಂದಾಗಿ ಜನರಿಗೆ ಘನತೆಯ ಹಕ್ಕು ಮತ್ತು ಇತರೆ ಹಕ್ಕುಗಳು ಲಭಿಸಿವೆ. ಸಂವಿಧಾನದ ಮಿತಿಯಲ್ಲಿ ಜನರ ಹಕ್ಕುಗಳನ್ನು ಪುಸ್ತಕದಲ್ಲಿ ವಿಶ್ಲೇಷಿಸಿಲಾಗಿದೆ ಎಂದರು.

Related Stories

No stories found.
Kannada Bar & Bench
kannada.barandbench.com