ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲೇಖಕ ಹೋರಾಟಗಾರ ಸಿವಿಕ್ ಚಂದ್ರನ್ ಅವರಿಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಕೇರಳ ಸರ್ಕಾರ ರಾಜ್ಯ ಹೈಕೋರ್ಟ್ ಮೊರೆ ಹೋಗಲಿದೆ.
ಐಪಿಸಿ ಸೆಕ್ಷನ್ 354, 354 ಎ(1)(ii), 354 ಎ(2), 354 ಡಿ(2) ಮತ್ತು ಎಸ್‌ಸಿ ಎಸ್‌ಟಿ ಕಾಯಿದೆಯ ಕೆಲ ನಿಯಮಾವಳಿಗಳಡಿಯಲ್ಲಿ ಹೂಡಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗಸ್ಟ್ 2ರಂದು ಚಂದ್ರನ್ ಅವರಿಗೆ ಜಾಮೀನು ನೀಡಲಾಗಿತ್ತು.
ಜಾಮೀನು ನೀಡುವ ವೇಳೆ ಕೋಳಿಕ್ಕೋಡ್ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಸ್ ಕೃಷ್ಣ ಕುಮಾರ್ ಅವರು “ತನ್ನ ಬಗ್ಗೆ ಅರಿವಿದ್ದೇ ಆರೋಪಿ ತನ್ನನ್ನು ಸ್ಪರ್ಶಿಸಿ ಅಪ್ಪಿಕೊಳ್ಳುವುದನ್ನು ಮಾಡಿದ್ದಾನೆ ಎಂಬ ಸಂತ್ರಸ್ತೆಯ ವಾದ ನಂಬಲಾಗದ ಸಂಗತಿಯಾಗಿದೆ. ಆರೋಪಿ ಸುಧಾರಣಾವಾದಿಯಾಗಿದ್ದು ಜಾತಿ ವ್ಯವಸ್ಥೆ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರು ಬರಹಗಾರಾಗಿದ್ದು ಜಾತಿರಹಿತ ಸಮಾಜಕ್ಕಾಗಿ ಹೋರಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪರಿಶಿಷ್ಟ ಜಾತಿಗೆ ಸಂತ್ರಸ್ತೆ ಸೇರಿದವಳು ಎಂದು ತಿಳಿದೂ ಆಕೆಯ ದೇಹವನ್ನು ಸ್ಪರ್ಶಿಸಿರುವುದು ನಂಬಲಸಾಧ್ಯವಾದ ಸಂಗತಿಯಾಗಿದೆ” ಎಂದಿದ್ದರು.
ಹತ್ತು ದಿನಗಳ ನಂತರ, ಆಗಸ್ಟ್ 12ರಂದು, ಇದೇ ನ್ಯಾಯಾಧೀಶರು ಸೆಕ್ಷನ್ 354A(2) (ಲೈಂಗಿಕ ಕಿರುಕುಳ), 341 (ತಪ್ಪು ಸಂಯಮ) ಮತ್ತು 354 (ಹೆಣ್ಣಿನ ಮೇಲೆ ದೌರ್ಜನ್ಯ ಅಥವಾ ಆಕೆಯ ಘನತೆಗೆ ಧಕ್ಕೆ) ತರುವ ಪ್ರಕರಣಗಳಲ್ಲಿ ಜಾಮೀನು ನೀಡಿದ್ದರು. ಆಗ ನ್ಯಾಯಾಧೀಶರು “ಈ ಸೆಕ್ಷನ್‌ನಡಿ ಅಪರಾಧ ಎಂದು ಗುರುತಿಸಲು ದೈಹಿಕ ಸಂಪರ್ಕ ಮತ್ತು ಇಷ್ಟವಿಲ್ಲದ ಮತ್ತು ಸ್ಪಷ್ಟವಾದ ಲೈಂಗಿಕ ಅಭಿವ್ಯಕ್ತಿಗಳನ್ನು ಒಳಗೊಂಡಿರುವ ಬೆಳವಣಿಗೆಗಳು ನಡೆದಿರಬೇಕು. ಲೈಂಗಿಕ ಲಾಭಕ್ಕಾಗಿ ಬೇಡಿಕೆ ಅಥವಾ ವಿನಂತಿ ಇರಬೇಕು. ಲೈಂಗಿಕ ಛಾಯೆಯ ಮಾತುಗಳಿರಬೇಕು. ಆರೋಪಿ ಜಾಮೀನು ಅರ್ಜಿಯೊಂದಿಗೆ ಸಲ್ಲಿಸಿರುವ ಛಾಯಾಚಿತ್ರಗಳು ದೂರುದಾರೆಯೇ ಕೆಲ ಲೈಂಗಿಕ ಪ್ರಚೋದನಕಾರಿಯಾದ ಉಡುಪುಗಳನ್ನು ತೊಟ್ಟಿರುವುದನ್ನು ಬಹಿರಂಗಪಡಿಸುತ್ತದೆ. ಹಾಗಾಗಿ ಆರೋಪಿಗಳ ವಿರುದ್ಧ ಸೆಕ್ಷನ್ 354ಎ ಮೇಲ್ನೋಟಕ್ಕೆ ನಿಲ್ಲುವುದಿಲ್ಲ” ಎಂದು ಹೇಳಿದ್ದರು.
ಎಪ್ಪತ್ತರ ವಯೋಮಾನದ ದೈಹಿಕ ವಿಕಲಚೇತನ ಚಂದ್ರನ್ ದೂರುದಾರೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು.
"ದೈಹಿಕ ಸಂಪರ್ಕ ಆಗಿತ್ತು ಎಂದು ಒಪ್ಪಿಕೊಂಡರೂ ಸಹ, ದೈಹಿಕವಾಗಿ ಅಂಗವೈಕಲ್ಯಕ್ಕೊಳಗಾಗಿರುವ 74 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ದೂರುದಾರರನ್ನು ಬಲವಂತವಾಗಿ ತನ್ನ ತೊಡೆಯ ಮೇಲೆ ಕೂರಿಸಿಕೊಂಡು, ಆಕೆಯ ಸ್ತನವನ್ನು ಲೈಂಗಿಕವಾಗಿ ಸ್ಪರ್ಶಿಸಿದ್ದಾರೆ ಎಂದು ನಂಬುವುದು ಅಸಾಧ್ಯ. ಹಾಗಾಗಿ ಇದು ಆರೋಪಿಗೆ ಜಾಮೀನು ನೀಡಬಹುದಾದ ಸೂಕ್ತ ಪ್ರಕರಣವಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಎರಡೂ ಆದೇಶಗಳು ಅಂತರ್ಜಾಲ ಮತ್ತು ನ್ಯಾಯಿಕ ಸಮುದಾಯದಲ್ಲಿ ತೀವ್ರ ಟೀಕೆ ಮತ್ತು ಖಂಡನೆಗೆ ತುತ್ತಾಗಿದ್ದವು.
ಮೊದಲ ಆದೇಶದ ವಿರುದ್ಧದ ಮೇಲ್ಮನವಿಯನ್ನು ಇಂದು ಸಲ್ಲಿಸಲಾಗುವುದು ಮತ್ತು ಎರಡನೇ ಆದೇಶದ ವಿರುದ್ಧದ ಮೇಲ್ಮನವಿಯನ್ನು ಸೋಮವಾರ ಸಲ್ಲಿಸಲಾಗುವುದು ಎಂದು ಮೂಲಗಳು ʼಬಾರ್ & ಬೆಂಚ್ʼಗೆ ದೃಢಪಡಿಸಿವೆ.