ಕೈಗಾರಿಕಾ ವ್ಯಾಜ್ಯ ಕಾಯಿದೆಯ ಮೊಕದ್ದಮೆ ಪರಿಗಣಿಸಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರವ್ಯಾಪ್ತಿ ಇಲ್ಲ: ಸುಪ್ರೀಂಕೋರ್ಟ್

ಸೇವಾ ವಿಷಯಗಳಲ್ಲಿ ಸಿವಿಲ್ ನ್ಯಾಯಾಲಯಗಳಿಗೆ ಸೀಮಿತ ವ್ಯಾಪ್ತಿ ಇರಬಹುದಾದರೂ ಕೈಗಾರಿಕಾ ವ್ಯಾಜ್ಯ ಕಾಯಿದೆಯ ಅಡಿ ಶಿಸ್ತು ಪ್ರಾಧಿಕಾರ ನೀಡಿದ ಆದೇಶದ ಮೇಲೆ ತೀರ್ಪು ನೀಡಲು ಅವುಗಳಿಗೆ ಅಧಿಕಾರ ವ್ಯಾಪ್ತಿ ಇಲ್ಲದಿರಬಹುದು ಎಂದು ನ್ಯಾಯಾಲಯ ಹೇಳಿದೆ.
Supreme Court
Supreme Court
Published on

ಕೈಗಾರಿಕಾ ವ್ಯಾಜ್ಯ ಕಾಯಿದೆಯ (ಐ ಡಿ ಕಾಯಿದೆ) ನಿಯಮಗಳ ಆಧಾರದಲ್ಲಿ ಹೂಡಲಾದ ಮೊಕದ್ದಮೆ ಪರಿಗಣಿಸಲು ಸಿವಿಲ್ ನ್ಯಾಯಾಲಯಗಳಿಗೆ ಅಧಿಕಾರವ್ಯಾಪ್ತಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಹೇಳಿದೆ. [ಮಿಲ್ಕಿ ರಾಮ್ ಮತ್ತು ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿ ನಡುವಣ ಪ್ರಕರಣ].

ಸೇವಾ ವಿಷಯಗಳಲ್ಲಿ ಸಿವಿಲ್ ನ್ಯಾಯಾಲಯಗಳಿಗೆ ಸೀಮಿತ ವ್ಯಾಪ್ತಿ ಇರಬಹುದಾದರೂ ಕೈಗಾರಿಕಾ ವ್ಯಾಜ್ಯ ಯಿದೆ ಅಡಿಯಲ್ಲಿ ಶಿಸ್ತು ಪ್ರಾಧಿಕಾರ ನೀಡಿದ ಆದೇಶದ ಮೇಲೆ ತೀರ್ಪು ನೀಡಲು ಅವುಗಳಿಗೆ ನ್ಯಾಯವ್ಯಾಪ್ತಿ ಇಲ್ಲದಿರಬಹುದು ಎಂದು ನ್ಯಾಯಮೂರ್ತಿಗಳಾದ ಆರ್ ಸುಭಾಷ್ ರೆಡ್ಡಿ ಹಾಗೂ ಹೃಷಿಕೇಶ್ ರಾಯ್ ಅವರಿದ್ದ ಪೀಠ ಹೇಳಿದೆ.

ಕೆಳ ಹಂತದ ನ್ಯಾಯಾಲಯಗಳು ಪ್ರತಿಪಾದಿಸಿದ ಅಭಿಪ್ರಾಯಗಳನ್ನು ಒಪ್ಪಲು ಈ ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಕೈಗಾರಿಕಾ ವ್ಯಾಜ್ಯ ಕಾಯಿದೆಯ ನಿಬಂಧನೆಗಳ ನ್ನು ಆಧರಿಸಿ ಹೂಡಲಾದ ಮೊಕದ್ದಮೆಗಳನ್ನು ಕೈಗೆತ್ತಿಕೊಳ್ಳಲು ಸಿವಿಲ್ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿಯಿಲ್ಲ ಎಂದು ಪರಿಗಣಿಸಲಾಗಿದೆ” ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ.

Also Read
ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಗಳ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು 8 ವಾರಗಳಲ್ಲಿ ಭರ್ತಿ ಮಾಡಿ: ಸುಪ್ರೀಂ

ಆದ್ದರಿಂದ ಕೈಗಾರಿಕಾ ವ್ಯಾಜ್ಯ ಕಾಯಿದೆ- 1947ರ ಆಧಾರದ ಮೇಲೆ ಮೊಕದ್ದಮೆ ಪರಿಗಣಿಸಲು ಸಿವಿಲ್‌ ನ್ಯಾಯಾಲಯಗಳಿಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂಬ ಹಿಮಾಚಲ ಪ್ರದೇಶ ಹೈಕೋರ್ಟ್‌ ನೀಡಿದ ತೀರ್ಪನ್ನು ಅದು ಎತ್ತಿ ಹಿಡಿದಿದೆ.

ಹಿಮಾಚಲ ಪ್ರದೇಶ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗೂಲಿ ನೌಕರರೊಬ್ಬರಿಗೆ ಪ್ರಕರಣ ಸಂಬಂಧಿಸಿದ್ದಾಗಿದ್ದು ಜನವರಿ 1, 1985ರಲ್ಲಿ ಆತನನ್ನು ನೌಕರಿಯಿಂದ ವಜಾ ಮಾಡಲಾಗಿತ್ತು. ಅದನ್ನು ಅವರು ಸಿವಿಲ್‌ ಮೊಕದ್ದಮೆ ಹೂಡುವ ಮೂಲಕ ಪ್ರಶ್ನಿಸಿದರು. ನೌಕರನ ಸೇವಾವಧಿ ಜೊತೆಗೆ ಪ್ರಕರಣ ಸಿವಿಲ್‌ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆಯೇ ಎಂಬ ಪ್ರಶ್ನೆ ಆಗ ಎದ್ದಿತ್ತು. ಎರಡೂ ವಿಚಾರಗಳಿಗೆ ಸಂಬಂಧಿಸಿದಂತೆ ಸಿವಿಲ್‌ ನ್ಯಾಯಾಲಯ ನೌಕರನ ಪರವಾಗಿ ತೀರ್ಪು ನೀಡಿತ್ತು.

ಇದನ್ನು ಧರ್ಮಶಾಲಾದ ಜಿಲ್ಲಾ ನ್ಯಾಯಾಲಯದಲ್ಲಿ ವಿದ್ಯುಚ್ಛಕ್ತಿ ಮಂಡಳಿ ಪ್ರಶ್ನಿಸಿತು. ಸಿವಿಲ್‌ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯ ಪ್ರಶ್ನೆ ಮತ್ತೊಮ್ಮೆ ಎದುರಾಯಿತು. ಆಗ ನ್ಯಾಯವ್ಯಾಪ್ತಿಯು ಕಾನೂನು ಮತ್ತು ವಾಸ್ತವಾಂಶಗಳ ಮಿಶ್ರ ಪ್ರಶ್ನೆಯಾಗಿದ್ದು ಮೊಕದ್ದಮೆಯನ್ನು ದೀರ್ಘಕಾಲದವರೆಗೆ ಮುಂದುವರೆಸುತ್ತಿರುವುದರಿಂದ, ಫಿರ್ಯಾದಿಯನ್ನು ಕಾರ್ಮಿಕ ನ್ಯಾಯಾಲಯಕ್ಕೆ ಕಳುಹಿಸುವುದು ಸರಿಯಲ್ಲ ಎಂದು ಮೇಲ್ಮನವಿ ನ್ಯಾಯಾಲಯ ತಿಳಿಸಿತು. ಈ ಮಧ್ಯೆ ವಿದ್ಯುಚ್ಛಕ್ತಿ ಮಂಡಳಿ ದಿನಗೂಲಿ ನೌಕರನಿಗೆ ಕಾಯಂ ಉದ್ಯೋಗದ ಭರವಸೆ ನೀಡಿತಾದರೂ, ನೌಕರನು ತನ್ನ 'ಸೇವೆಗೆ ಸೇರಿಕೊಳ್ಳು ವರದಿ'ಯಲ್ಲಿ (ಜಾಯಿನಿಂಗ್ ರಿಪೋರ್ಟ್‌) ವಿವಿಧ ಷರತ್ತುಗಳನ್ನು ಒಡ್ಡಿದ್ದರಿಂದ ಆಡಳಿತ ಮಂಡಳಿಗೆ ನೌಕರನನ್ನು ಸೇವೆಗೆ ದಾಖಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.. ಇತ್ತ ನೌಕರ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ಮಂಡಳಿಗೆ ಸೂಚಿಸುವಂತೆ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯವು ಮಂಡಳಿಯ ವಾದವನ್ನು ಒಪ್ಪದೆ ನೌಕರ ಪರವಾಗಿ ತೀರ್ಪನ್ನಿತ್ತಿತು. ಇದನ್ನು ಪ್ರಶ್ನಿಸಿ ಮಂಡಳಿ ಹಿಮಾಚಲ ಪ್ರದೇಶ ಹೈಕೋರ್ಟ್‌ ಮೊರೆ ಹೋಯಿತು. ಕೈಗಾರಿಕಾ ವ್ಯಾಜ್ಯ ಕಾಯಿದೆಯಡಿ ಮೊಕದ್ದಮೆ ಪರಿಗಣಿಸಲು ಸಿವಿಲ್‌ ನ್ಯಾಯಾಲಯಗಳಿಗೆ ಅಧಿಕಾರ ವ್ಯಾಪ್ತಿ ಇಲ್ಲ ಎಂದು ನ್ಯಾಯಾಲಯ ಹೇಳಿ ಕೆಳಹಂತದ ನ್ಯಾಯಾಲಯಗಳ ಆದೇಶವನ್ನು ಅನೂರ್ಜಿತವೆಂದಿತು. ಈ ಆದೇಶದ ವಿರುದ್ಧ ನೌಕರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದರು.

ಸಾಮಾನ್ಯ ಕಾನೂನು ಪರಿಹಾರದ ಮೊರೆ ಹೋದಾಗ ದಾವೆದಾರರು ಸಿವಿಲ್ ನ್ಯಾಯಾಲಯ ಅಥವಾ ಕಾರ್ಮಿಕ ನ್ಯಾಯಾಲಯವನ್ನು ಆಯ್ಕೆ ಮಾಡಬಹುದಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಐಡಿ ಕಾಯಿದೆಯ ನಿಬಂಧನೆಗಳ ಮೇಲೆ ಅರ್ಜಿದಾರ ಸ್ಪಷ್ಟವಾಗಿ ದಾವೆ ಹೂಡಿದ್ದು ಸಿವಿಲ್‌ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವ ಹಕ್ಕು ವಿದ್ಯುಚ್ಛಕ್ತಿ ಮಂಡಳಿಗೆ ಇದೆ. ಹೀಗಾಗಿ ಹೈಕೋರ್ಟ್‌ ಅವಲೋಕನಗಳನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದು ಅರ್ಜಿ ವಜಾಗೊಳಿಸಿತು. ಆದರೆ ನೌಕರನ ಸಂಕಷ್ಟ ಗಮನಿಸಿದ ನ್ಯಾಯಾಲಯ ಅರ್ಜಿದಾರ/ನೌಕರನಿಗೆ ಪಾವತಿಸಿದ ಬಾಕಿ ಮೊತ್ತವನ್ನು ಹಿಂಪಡೆಯುವಂತಿಲ್ಲ ಎಂದು ಆದೇಶಿಸಿತು.

Kannada Bar & Bench
kannada.barandbench.com