[ಸಿವಿಲ್‌ ನ್ಯಾಯಾಧೀಶರ ನೇಮಕಾತಿ] ಪೂರ್ವಭಾವಿ ಪರೀಕ್ಷೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್‌ ನಕಾರ

ಪೂರ್ವಭಾವಿ ಪರೀಕ್ಷೆಯ ಫಲಿತಾಂಶವು ನ್ಯಾಯಾಲಯದಲ್ಲಿರುವ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾ. ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
Civil Judge Exam
Civil Judge Exam
Published on

ರಾಜ್ಯದಲ್ಲಿ 94 ಸಿವಿಲ್‌ ನ್ಯಾಯಾಧೀಶರ ಹುದ್ದೆ ಭರ್ತಿ ಸಂಬಂಧ ಆಗಸ್ಟ್‌ 8ರಂದು ನಡೆಯಬೇಕಿರುವ ಪೂರ್ವಭಾವಿ ಪರೀಕ್ಷೆ ಕುರಿತಂತೆ ಹೊರಡಿಸಲಾಗಿರುವ ಅಧಿಸೂಚನೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಪೂರ್ವಭಾವಿ ಪರೀಕ್ಷೆಯ ಫಲಿತಾಂಶವು ನ್ಯಾಯಾಲಯದಲ್ಲಿರುವ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

ರಾಜ್ಯದಲ್ಲಿ ಖಾಲಿ ಇರುವ 94 ಸಿವಿಲ್‌ ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವ ಕುರಿತಾದ ಅಧಿಸೂಚನೆಯಲ್ಲಿ ಪೂರ್ಣ ದೃಷ್ಟಿದೋಷ ಮತ್ತು ಅಲ್ಪ ದೃಷ್ಟಿದೋಷ ಇರುವವರಿಗೆ ಮೀಸಲಾತಿ ಕಲ್ಪಿಸಿಲ್ಲ ಎಂಬುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಪೂರ್ಣ ದೃಷ್ಟಿದೋಷ ಮತ್ತು ಅಲ್ಪ ದೃಷ್ಟಿದೋಷ ಇರುವವರಿಗೆ ಪರೀಕ್ಷೆ ಬರೆಯಲು ಅನುಮತಿಸಿದರೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಲಾಗಿರುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕಾಗುತ್ತದೆ. ಹೀಗಾಗಿ, ಮಧ್ಯಂತರ ಕೋರಿಕೆಯನ್ನು ಮನ್ನಿಸಲಾಗದು ಎಂದು ನ್ಯಾಯಾಲಯ ಹೇಳಿತು.

“ಮೊದಲಿಗೆ ಸಿವಿಲ್ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಸಂಪೂರ್ಣ ಪ್ರಕ್ರಿಯೆಯು ಈ ಅರ್ಜಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ನಾವು ಇಲ್ಲಿ ಹೇಳುತ್ತಿದ್ದೇವೆ. ಪೂರ್ಣ ದೃಷ್ಟಿದೋಷ ಮತ್ತು ಅಲ್ಪ ದೃಷ್ಟಿದೋಷ ಇರುವವರಿಗೆ ಪರೀಕ್ಷೆ ಬರೆಯಲು ಅನುಮತಿಸಿದರೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಲಾಗಿರುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

94 ಸಿವಿಲ್‌ ನ್ಯಾಯಾಧೀಶರ ಹುದ್ದೆ ಭರ್ತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಸಮಿತಿ ಹೊರಡಿಸಿರುವ ಅಧಿಸೂಚನೆಯು ವಿಶೇಷ ಚೇತನರ ಹಕ್ಕುಗಳ ಕಾಯಿದೆ- 2016ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಿಶೇಷ ಚೇತನರಿಗೆ ಶೇ. 4ರಷ್ಟು ಹುದ್ದೆಗಳನ್ನು ಮೀಸಲಿಡಬೇಕು. ಈ ಪೈಕಿ ¼ ಭಾಗದ ಸ್ಥಾನಗಳನ್ನು ಪೂರ್ಣ ದೃಷ್ಟಿದೋಷ ಮತ್ತು ಅಲ್ಪ ದೃಷ್ಟಿದೋಷ ಹೊಂದಿದವರಿಗೆ ಮೀಸಲಿಡಬೇಕು ಎಂದು ಕಾಯಿದೆಯಲ್ಲಿ ಹೇಳಲಾಗಿದೆ.

ಮೂಳೆ ಮತ್ತು ಕೀಲುಗಳ ಸಮಸ್ಯೆಗಳನ್ನು ಹೊಂದಿರುವ ವಿಶೇಷ ಚೇತನರಿಗೆ ಮಾತ್ರ ಶೇ. 1ರಷ್ಟು ಹುದ್ದೆಗಳನ್ನು ಸಿವಿಲ್‌ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಿಡಲಾಗಿದೆಯೇ ವಿನಾ ಅಂಧತ್ವ ಮತ್ತು ಕಡಿಮೆ ದೃಷ್ಟಿದೋಷ ಇರುವವರಿಗೆ ಯಾವುದೇ ಮೀಸಲಾತಿ ಕಲ್ಪಿಸಲಾಗಿಲ್ಲ ಎಂದು ಅರ್ಜಿದಾರರು ಒತ್ತಿ ಹೇಳಿದ್ದಾರೆ.

Also Read
ದೃಷ್ಟಿದೋಷ ಇರುವವರಿಗೆ ಮೀಸಲಾತಿ ಕಲ್ಪಿಸಲು ವಿಫಲ; ಹೈಕೋರ್ಟ್‌ನಲ್ಲಿ ಸಿವಿಲ್ ನ್ಯಾಯಾಧೀಶರ ನೇಮಕಾತಿ ಅಧಿಸೂಚನೆ ಪ್ರಶ್ನೆ

ಅಂಧತ್ವ ಮತ್ತು ಕಡಿಮೆ ದೃಷ್ಟಿದೋಷ ಹೊಂದಿರುವ ಅಭ್ಯರ್ಥಿಗಳು ಸಿವಿಲ್‌ ನ್ಯಾಯಾಧೀಶರ ಹುದ್ದೆಗೆ ಪರಿಗಣಿಸಲು ಅರ್ಹರಾಗಿದ್ದಾರೆ ಎಂದು ಅರ್ಜಿದಾರರ ಪರ ಹಿರಿಯ ವಕೀಲೆ ಜಯ್ನಾ ಕೊಠಾರಿ ಹೇಳಿದರು. ತಮ್ಮ ವಾದಕ್ಕೆ ಕೊಠಾರಿ ಅವರು ವಿಕಾಸ್‌ ಕುಮಾರ್‌ ಹಾಗೂ ಯುಪಿಎಸ್‌ಸಿ ಮತ್ತಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ್ದರು.

ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿಗದಿಪಡಿಸಿರುವ ಕಾಲಾನುಕ್ರಮವನ್ನು ಹೈಕೋರ್ಟ್‌ ಆಡಳಿತ ಪಾಲಿಸಬೇಕು ಎಂಬುದಕ್ಕೆ ಕೊಠಾರಿ ಅವರು ಯಾವುದೇ ತಕರಾರು ಎತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ. ವಿಚಾರಣೆಯನ್ನು ಆಗಸ್ಟ್‌ 31ಕ್ಕೆ ಮುಂದೂಡಿದೆ.

Kannada Bar & Bench
kannada.barandbench.com