ಘಟನೆ ನಡೆದು ನಾಲ್ಕು ವರ್ಷ ಮೀರಿದ್ದರೆ ನಿವೃತ್ತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲಾಗದು: ಹೈಕೋರ್ಟ್‌

ನಾಲ್ಕು ವರ್ಷಗಳ ಹಿಂದೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅರ್ಜಿದಾರರ ವಿರುದ್ಧ ತನಿಖೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ದೋಷಾರೋಪ ಮತ್ತು ತನಿಖಾ ಪ್ರಕ್ರಿಯೆ ಕುರಿತಾದ ಮೆಮೊವನ್ನು 2022ರ ಜೂನ್‌ 21ರಂದು ಹೊರಡಿಸಲಾಗಿತ್ತು.
Justice S G Pandit and Karnataka HC
Justice S G Pandit and Karnataka HC
Published on

ನಿವೃತ್ತ ಅಧಿಕಾರಿಯ ವಿರುದ್ಧ ಆರೋಪಿಸಲಾದ ಘಟನೆಯು ನಡೆದು ನಾಲ್ಕು ವರ್ಷಗಳಿಗೂ ಹೆಚ್ಚು ಕಾಲವಾಗಿದ್ದರೆ ಕರ್ನಾಟಕ ನಾಗರಿಕ ಸೇವೆಗಳ ಕಾನೂನಿನ ನಿಯಮ 214 (2) (ಬಿ)ರ ಅನ್ವಯ ಇಲಾಖಾ ತನಿಖಾ ಪ್ರಕ್ರಿಯೆಯನ್ನು ನಡೆಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಕರ್ನಾಟಕ ಗೃಹ ಮಂಡಳಿಯಲ್ಲಿ ನಿವೃತ್ತ ಕಾರ್ಯಕಾರಿ ಎಂಜಿನಿಯರ್‌ಗಳಾಗಿದ್ದ ಬೆಂಗಳೂರಿನ ಅನಿಲ್‌ ಕುಮಾರ್‌ ಮತ್ತು ಟಿ ಮಲ್ಲಣ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಜಿ ಪಂಡಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದ್ದು, ದೋಷರೋಪ ಮೆಮೊ ಮತ್ತು ತನಿಖಾಧಿಕಾರಿ ನೇಮಕಾತಿಯನ್ನು ವಜಾ ಮಾಡಿದೆ.

“ನಾಲ್ಕು ವರ್ಷಗಳ ಹಿಂದೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅರ್ಜಿದಾರರ ವಿರುದ್ಧ ತನಿಖೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆ ದೋಷಾರೋಪ ಮತ್ತು ತನಿಖಾ ಪ್ರಕ್ರಿಯೆ ಕುರಿತಾದ ಮೆಮೊವನ್ನು 2022ರ ಜೂನ್‌ 21ರಂದು ಹೊರಡಿಸಲಾಗಿತ್ತು. ಕೆಸಿಎಸ್‌ಆರ್‌ನ ನಿಯಮ 214 (2)(ಬಿ)(ii)ರ ಅಡಿ ತನಿಖೆ ಆರಂಭಿಸಲು ದೋಷಾರೋಪ ಮೆಮೊ ನಿರ್ಬಂಧಿಸಲಾಗಿದೆ. ಹೀಗಾಗಿ, ದೋಷಾರೋಪ ಮೆಮೊ ಅಮಾನ್ಯವಾಗುತ್ತದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಅರ್ಜಿದಾರರು ಕ್ರಮವಾಗಿ 2018ರ ಜೂನ್‌ 30 ಮತ್ತು 2020ರ ಆಗಸ್ಟ್‌ 31ರಂದು ನಿವೃತ್ತರಾಗಿದ್ದರು. ಇದರ ಬೆನ್ನಿಗೇ, 2022ರ ಜೂನ್‌ 21ರಂದು ದೋಷಾರೋಪ ಮೆಮೊ ಜಾರಿಗೊಳಿಸಲಾಗಿತ್ತು. 2006ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಕೆಸಿಎಸ್‌ಆರ್‌ ನಿಯಮಗಳ ಅಡಿ ದೋಷಾರೋಪ ನಿರ್ಬಂಧಿಸಲಾಗಿದ್ದು, ಮನವಿಯು ವಜಾಕ್ಕೆ ಅರ್ಹವಾಗಿದೆ ಎಂದು ವಾದಿಸಿದ್ದರು. ಇದನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಅರ್ಜಿದಾರರನ್ನು ವಕೀಲ ರಂಗನಾಥ್‌ ಜೋಯಿಸ್‌, ಪ್ರತಿವಾದಿಗಳನ್ನು ವಕೀಲರಾದ ರಮೇಶ್‌ ಜೋಯಿಸ್‌, ಎಚ್‌ ಎಲ್‌ ಪ್ರದೀಪ್‌ ಕುಮಾರ್‌ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com