ಹೈಕೋರ್ಟ್‌ ಕಾಯಂ ನ್ಯಾಯಮೂರ್ತಿಯಾಗಿ ರಾಜೇಶ್‌ ರೈ ಪ್ರಮಾಣ ವಚನ

ಕರ್ನಾಟಕ ಹೈಕೋರ್ಟ್‌ನಲ್ಲಿ ಸದ್ಯ ಮುಖ್ಯ ನ್ಯಾಯಮೂರ್ತಿ ಸೇರಿ 49 ನ್ಯಾಯಮೂರ್ತಿಗಳಿದ್ದಾರೆ. ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದು, ಉಳಿದವರು ಕಾಯಂಗೊಂಡಿದ್ದಾರೆ.
ಹೈಕೋರ್ಟ್‌ ಕಾಯಂ ನ್ಯಾಯಮೂರ್ತಿಯಾಗಿ ರಾಜೇಶ್‌ ರೈ ಪ್ರಮಾಣ ವಚನ
Published on

ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಕೆ ರಾಜೇಶ್‌ ರೈ ಅವರಿಗೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರು ಬುಧವಾರ ಪ್ರಮಾಣ ವಚನ ಬೋಧಿಸಿದರು.

ಹೈಕೋರ್ಟ್‌ನ ಸಭಾಂಗಣದಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ನ್ಯಾ.ರಾಜೇಶ್‌ ರೈ ಅವರಿಗೆ ಪ್ರತಿಜ್ಞಾ ವಿಧಿ ಮತ್ತು ಅಧಿಕಾರ ಗೌಪ್ಯತೆ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜೇಶ್‌ ರೈ ಅವರು 1974ರ ಜನವರಿ 1ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ವಿಟ್ಲದಲ್ಲಿ ಶಾಲಾ ಮತ್ತು ಪಿಯು ಶಿಕ್ಷಣ ಪೂರೈಸಿದ ಅವರು ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನ ಪದವಿ ಪೂರೈಸಿದರು. 1999ರಲ್ಲಿ ವಕೀಲಿಕೆ ಆರಂಭಿಸಿದರು. ತಮ್ಮ 24 ವಷಗಳ ವಕೀಲಿಕೆಯಲ್ಲಿ ರಾಜ್ಯ ಸರ್ಕಾರಿ ವಕೀಲರಾಗಿ ಎರಡು ವರ್ಷ ಮತ್ತು ಕೇಂದ್ರ ಸರ್ಕಾರಿ ವಕೀಲರಾಗಿ ಆರು ವರ್ಷ ಕಾರ್ಯ ನಿರ್ವಹಿಸಿದ್ದಾರೆ. 2023ರ ಫೆಬ್ರವರಿ 9ರಂದು ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ಕರ್ನಾಟಕ ಹೈಕೋರ್ಟ್‌ನಲ್ಲಿ ಸದ್ಯ ಮುಖ್ಯ ನ್ಯಾಯಮೂರ್ತಿ ಸೇರಿ 49 ನ್ಯಾಯಮೂರ್ತಿಗಳಿದ್ದಾರೆ. ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿದ್ದು, ಉಳಿದವರು ಕಾಯಂಗೊಂಡಿದ್ದಾರೆ.

Kannada Bar & Bench
kannada.barandbench.com