ಜೈಲಿನಲ್ಲಿ ಸಿದ್ಧವಾಗುವ ಸಮವಸ್ತ್ರಗಳನ್ನು ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲು ಸಹಕರಿಸುವಂತೆ ಎಎಬಿಗೆ ಸಿಜೆ ಸಲಹೆ

ಕಾರಾಗೃಹದಲ್ಲಿ ಸ್ಥಾಪಿಸಲಾಗಿರುವ ಅಡಿಕೆ ಎಲೆ ಉತ್ಪನ್ನಗಳ ಉತ್ಪಾದನಾ ಘಟಕ ಉದ್ಘಾಟಿಸಿದ ಸಿಜೆ ವರಾಳೆ. ಪರಿಸರ ದಿನದಂದು ಈ ಘಟಕದ ಉದ್ಘಾಟನೆ ಮಾಡಿರುವುದು ಪ್ಲಾಸ್ಟಿಕ್‌ ನಿಷೇಧಿಸುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಎಂದು ಹರ್ಷ.
CJ Varale inspected the Jail Kitchen
CJ Varale inspected the Jail Kitchen

ಜೈಲಿನಲ್ಲಿ ಕೈಮಗ್ಗ ಘಟಕ ಇದ್ದು, ಇಲ್ಲಿ ಸಿದ್ಧವಾಗುವ ಸಮವಸ್ತ್ರಗಳನ್ನು ಸರ್ಕಾರಿ ಶಾಲೆಯ ಮಕ್ಕಳಿಗೆ ವಿತರಿಸಲು ಜೈಲು ಪ್ರಾಧಿಕಾರಕ್ಕೆ ಸಹಕರಿಸುವಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಿಗೆ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಸಲಹೆ ನೀಡಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಸೋಮವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದ ಅವರು ಗಿಡ ನೆಟ್ಟು, ಕೈದಿಗಳ ಯೋಗ ಕ್ಷೇಮ, ಅವರಿಗೆ ವಿತರಣೆಯಾಗುವ ಆಹಾರ ಪದಾರ್ಥ ಮತ್ತು ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿದರು. ಮುಖ್ಯ ನ್ಯಾಯಮೂರ್ತಿಯಾದ ಬಳಿಕ ನ್ಯಾ. ವರಾಳೆ ಅವರು ಪರಪ್ಪನ ಕಾರಾಗೃಹಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದು ವಿಶೇಷ.

“ಪರಿಸರ ನಮ್ಮ ತಾಯಿ, ಅದನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದ್ದು, ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಿಸಬೇಕು. ಕೈದಿಗಳು ಜೈಲಿನಲ್ಲಿ ಕಲಿತ ಕೌಶಲಗಳನ್ನು ಮುಂದೆ ಬದುಕಿನಲ್ಲಿ ಬಳಕೆ ಮಾಡಬೇಕು” ಎಂದು ಸಲಹೆ ನೀಡಿದರು.

“ಕಾರಾಗೃಹದಲ್ಲಿ ಸ್ಥಾಪಿಸಲಾಗಿರುವ ಅಡಿಕೆ ಎಲೆ ಉತ್ಪನ್ನಗಳ ಉತ್ಪಾದನಾ ಘಟಕ ಉದ್ಘಾಟಿಸಿ, ಪರಿಸರ ದಿನದಂದು ಈ ಘಟಕದ ಉದ್ಘಾಟನೆ ಮಾಡಿರುವುದು ಪ್ಲಾಸ್ಟಿಕ್‌ ನಿಷೇಧಿಸುವ ನಿಟ್ಟಿನಲ್ಲಿ ಉತ್ತಮ ಹೆಜ್ಜೆ” ಎಂದು ಹರ್ಷ ವ್ಯಕ್ತಪಡಿಸಿದರು.

ಅಡಿಕೆ ಎಲೆಯ ತಟ್ಟೆ, ಲೋಟಗಳನ್ನು ಉತ್ಪಾದಿಸಲು ಮೂರು ಹೊಸ ಯಂತ್ರಗಳನ್ನು ಅಳವಡಿಸಲಾಗಿದ್ದು, ಆರು ಕೈದಿಗಳನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ವರಾಳೆ ಅವರು ಮರಗೆಲಸ, ಬೇಕರಿ ಉತ್ಪನ್ನಗಳ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ಜೈಲಿನಲ್ಲಿನ ಅಡುಗೆ ಕೋಣೆಗೆ ಭೇಟಿ ನೀಡಿ, ಅಲ್ಲಿನ ಸುವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹೈಕೋರ್ಟ್‌ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರೂ ಆಗಿರುವ ನ್ಯಾ. ಕೆ ಸೋಮಶೇಖರ್‌ ಅವರು ಜೈಲಿನಲ್ಲಿರುವ ಗ್ರಂಥಾಲಯವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜ್ಞಾನ ಸಂಪಾದನೆ ಮಾಡಿಕೊಂಡು, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಕೈದಿಗಳಿಗೆ ಸಲಹೆ ನೀಡಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು ಪರಿಸರದ ಮಹತ್ವದ ಬಗ್ಗೆ ತಿಳಿಸಿದರು. ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಮಹಾನಿರ್ದೇಶಕ ಮನೀಶ್‌ ಕರಿಬಿಕರ್‌, ಹೈಕೋರ್ಟ್‌ ರಿಜಿಸ್ಟ್ರಾರ್‌ ಕೆ ಎಸ್‌ ಭರತ್‌ ಕುಮಾರ್‌, ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ಖಜಾಂಚಿ ಹರೀಶ್‌ ಎಂ ಟಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಶಂಕರ್, ಕಾರಾಗೃಹ ಡಿಐಜಿ ಸೋಮಶೇಖರ್‌, ಎಐಜಿ ಆನಂದರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Related Stories

No stories found.
Kannada Bar & Bench
kannada.barandbench.com