ಅಂತರ್ಜಾಲದ ನಕಲಿ ಸುದ್ದಿಗಳ ಯುಗದಲ್ಲಿ ವಾಕ್ ಸ್ವಾತಂತ್ರ್ಯ ನಿಯಂತ್ರಿಸಲು ಹೊಸ ಸಿದ್ಧಾಂತಗಳು ಅಗತ್ಯ: ಸಿಜೆಐ ಚಂದ್ರಚೂಡ್

ಈ ನಿಟ್ಟಿನಲ್ಲಿ, ದೇಶವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವಾಗ ಅಂತರ್ಜಾಲದಲ್ಲಿ ಕಂಡುಬರುತ್ತಿದ್ದ ಅತಿರೇಕದ ಹೇಳಿಕೆಗಳನ್ನು ಅವರು ಎತ್ತಿ ತೋರಿಸಿದರು.
ಸಿಜೆಐ ಡಿ.ವೈ.ಚಂದ್ರಚೂಡ್
ಸಿಜೆಐ ಡಿ.ವೈ.ಚಂದ್ರಚೂಡ್

ಅಂತರ್ಜಾಲದಲ್ಲಿ, ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ವಾಕ್ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಹೊಸ ಸೈದ್ಧಾಂತಿಕ ಚೌಕಟ್ಟುಗಳನ್ನು ರೂಪಿಸುವ ಅಗತ್ಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಶುಕ್ರವಾರ ಒತ್ತಿ ಹೇಳಿದರು.

ಟ್ರೋಲ್ ಸೈನ್ಯಗಳ ಉಗಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಅಭಿಯಾನಗಳನ್ನು ಆಯೋಜಿಸುವುದರೊಂದಿಗೆ, ಸತ್ಯವನ್ನು ತಿರುಚುವ "ಅತಿಯಾದ ಮಾತುಗಳ" ಭಯವಿದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

ಈ ನಿಟ್ಟಿನಲ್ಲಿ, ದೇಶವು ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವಾಗ ಅಂತರ್ಜಾಲದಲ್ಲಿ ಕಂಡುಬರುತ್ತಿದ್ದ ಅತಿರೇಕದ ಹೇಳಿಕೆಗಳನ್ನು ಅವರು ಎತ್ತಿ ತೋರಿಸಿದರು.

"ಉದಾಹರಣೆಗೆ, ಧಾರ್ಮಿಕ ಸ್ಥಳವನ್ನು ಅಪವಿತ್ರಗೊಳಿಸಲಾಗಿದೆಯೇ ಅಥವಾ ಇಲ್ಲವೇ; ಭಾಷಣವನ್ನು ನಿಜವಾಗಿಯೂ ಮಾಡಲಾಗಿದೆಯೇ ಅಥವಾ ಇಲ್ಲವೇ; ಕೋವಿಡ್-19 ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆಯೇ ಇನ್ನು ಮುಂತಾದ ಎಲ್ಲಾ ಸಂಗತಿಗಳ ಬಗ್ಗೆ ವಾಸ್ತಾವಿಕ ಸತ್ಯಗಳಿರುತ್ತವೆ. ಹಾಗಾಗಿ ಇಲ್ಲಿ ಅಭಿಪ್ರಾಯಗಳನ್ನು ನೀಡಲು, ಆಲೋಚನೆಗಳನ್ನು ಹಂಚಿಕೊಳ್ಳಲು, ಸಂಭಾವ್ಯ ಉತ್ತರ ಹೇಳಲು ಆಸ್ಪದವಿರುವುದಿಲ್ಲ. ದೇಶವು ದುರಂತ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದಾಗ, ಅಂತರ್ಜಾಲವು ಅತಿರೇಕದ ನಕಲಿ ಸುದ್ದಿ ಮತ್ತು ವದಂತಿಗಳಿಂದ ತುಂಬಿತ್ತು - ಇದು ಸಂಕಷ್ಟದ ಸಮಯದಲ್ಲಿ ಹಾಸ್ಯಮಯ ಸನ್ನಿವೇಶ ಸೃಷ್ಟಿಸುತ್ತಿತ್ತಾದರೂ ಅದೇ ವೇಳೆ ಅಂತರ್ಜಾಲದಲ್ಲಿ ವಾಕ್ ಸ್ವಾತಂತ್ರ್ಯದ ಮಿತಿಗಳನ್ನು ಮರುಪರಿಶೀಲಿಸಲು ನಮ್ಮನ್ನು ಒತ್ತಾಯಿಸುತ್ತಿತ್ತು" ಎಂದು ಅವರು ಹೇಳಿದರು.

ಸಿಜೆಐ ಅವರು ಈ ವೇಳೆ ವಾಕ್ ಸ್ವಾತಂತ್ರ್ಯದ ಸಾಂಪ್ರದಾಯಿಕ ಕಲ್ಪನೆಗಳೊಂದಿಗೆ ಪ್ರಸಕ್ತ ಸಂದರ್ಭವನ್ನು ತುಲನಾತ್ಮಕವಾಗಿ ಇರಿಸಿ ನೋಡಿದರು. ವಾಕ್‌ ಸ್ವಾತಂತ್ರ್ಯದ ಕುರಿತಾದ ಸಾಂಪ್ರದಾಯಿಕ ಕಲ್ಪನೆಯಲ್ಲಿ ಸರ್ಕಾರದ ದಮನದ ಭಯದಿಂದಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾಗರಿಕ ಹಕ್ಕುಗಳ ಅತ್ಯಗತ್ಯ ಭಾಗವೆಂದು ಪರಿಗಣಿಸಲಾಗಿತ್ತು ಎಂದು ಹೇಳಿದರು. ಆದರೆ, ಪ್ರಸಕ್ತ ಇಂಟರ್‌ನೆಟ್‌ ಯುಗದಲ್ಲಿನ ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ವಾಕ್ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಹೊಸ ಸೈದ್ಧಾಂತಿಕ ಚೌಕಟ್ಟುಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದರು.

'ಡಿಜಿಟಲ್ ಯುಗದಲ್ಲಿ ನಾಗರಿಕ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯುವುದು: ಗೌಪ್ಯತೆ, ಕಣ್ಗಾವಲು ಮತ್ತು ವಾಕ್ ಸ್ವಾತಂತ್ರ್ಯ' ಎಂಬ ವಿಷಯದ ಕುರಿತು 14 ನೇ ನ್ಯಾಯಮೂರ್ತಿ ವಿ ಎಂ ತಾರ್ಕುಂಡೆ ಸ್ಮಾರಕ ಉಪನ್ಯಾಸದಲ್ಲಿ ಸಿಜೆಐ ಮಾತನಾಡಿದರು.

ಡಿಜಿಟಲ್ ಯುಗದಲ್ಲಿ ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಚಂದ್ರಚೂಡ್, ಅಂತರ್ಜಾಲದಲ್ಲಿ ತಪ್ಪು ಮಾಹಿತಿ ಮತ್ತು ದ್ವೇಷ ಭಾಷಣದ ಆಘಾತಕಾರಿ ಪ್ರಸರಣವು ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯವನ್ನು ಅರ್ಥಮಾಡಿಕೊಳ್ಳುವ ಸಾಂಪ್ರದಾಯಿಕ ವಿಧಾನಗಳಿಗೆ ಗಂಭೀರ ಸವಾಲನ್ನು ಒಡ್ಡಿದೆ ಎಂದು ಹೇಳಿದರು.

ಸಾಂಪ್ರದಾಯಿಕ ನಾಗರಿಕ ಹಕ್ಕುಗಳ ಹೋರಾಟದಲ್ಲಿ ಪಾರಂಪರಿಕವಾಗಿ ಇದ್ದ ಪ್ರಭುತ್ವ-ಹೋರಾಟಗಾರ-ಕಾರ್ಪೊರೆಟ್‌ ಸಂಸ್ಥಗಳ ಸಂಬಂಧಗಳಲ್ಲಿ ಉಂಟಾಗಿರುವ ಪಲ್ಲಟವನ್ನು ಅವರು ಗುರುತಿಸಿದರು. ಈಗ ಕಾರ್ಪೊರೆಟ್‌ಗಳನ್ನು "ನಿರ್ಬಂಧಿಸಬೇಕಾದ ಅಥವಾ ರಾಜ್ಯದೊಂದಿಗೆ ಶಾಮೀಲಾಗುವ" ಘಟಕವಾಗಿ ಸೀಮಿತವಾಗಿ ಗ್ರಹಿಸುತ್ತಿಲ್ಲ ಎಂದು ಅವರು ಹೇಳಿದರು.

"ಇದಾಗಲೇ ನಾಗರಿಕ ಹಕ್ಕುಗಳ ಕಾರ್ಯಕರ್ತರು ಕಾರ್ಪೊರೆಟ್‌ಗಳನ್ನು ನಿರ್ಬಂಧಿಸಬೇಕಾದ ಸಂಸ್ಥೆಯ ಸಾಂಪ್ರದಾಯಿಕ ಪಟ್ಟಿಗೆಯೊಳಗೆ ಇರಿಸುತ್ತಿಲ್ಲ. ವಾಸ್ತವವಾಗಿ, ಇದಕ್ಕೆ ವಿರುದ್ಧವಾಗಿ, ಅವರು ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿಸ್ತರಿಸಲು ಫೇಸ್ಬುಕ್, ಟ್ವಿಟರ್ ಮತ್ತು ಯೂಟ್ಯೂಬ್‌ನಂತಹ ಕಾರ್ಪೊರೆಟ್‌ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ" ಎಂದು ಸಿಜೆಐ ಹೇಳಿದರು.

ಆದಾಗ್ಯೂ, ಖಾಸಗಿ ಒಡೆತನದ ವೇದಿಕೆಗಳ ಮೇಲೆ ಜನರು ಇಟ್ಟಿರುವ ಅಪಾರ ಪ್ರಮಾಣದ ನಂಬಿಕೆಯಿಂದ ಉದ್ಭವಿಸುವ ಸಮಸ್ಯೆಗಳ ಬಗ್ಗೆಯೂ ಅವರು ಬೆರಳು ಮಾಡಿದರು.

ಮ್ಯಾನ್ಮಾರ್‌ನಲ್ಲಿ ಜನಾಂಗೀಯ ಶುದ್ಧೀಕರಣಕ್ಕೆ ಮಿಲಿಟರಿ ಮತ್ತು ನಾಗರಿಕ ಸಮಾಜದಿಂದ ಸಾಮಾಜಿಕ ಮಾಧ್ಯಮವನ್ನು ಸಾಧನವಾಗಿ ಬಳಸಲಾದ ಬಗ್ಗೆ ವಿಶ್ವಸಂಸ್ಥೆ ವ್ಯಾಪಕವಾಗಿ ವರದಿ ಮಾಡಿದೆ ಮತ್ತು ಗುರುತಿಸಿದೆ ಎಂದು ಸಿಜೆಐ ನೆನಪಿಸಿದರು.

ಸಂವಿಧಾನ ಮತ್ತು ಮತದಾರರಿಂದ ಉತ್ತರದಾಯಿಯಾಗಿರುವ ರಾಜ್ಯ, ಪ್ರಭುತ್ವದ ಸಂಸ್ಥೆಗಳ ಹೋಲಿಕೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ತುಲನಾತ್ಮಕವಾಗಿ ಅನಿಯಂತ್ರಿತವಾಗಿವೆ ಎಂದು ಅವರು ಹೇಳಿದರು.

ಗೌಪ್ಯತೆ ಮತ್ತು ಪ್ರಭುತ್ವದ ಕಣ್ಗಾವಲು ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್, ವಿಶ್ವಾದ್ಯಂತ ನ್ಯಾಯಾಲಯಗಳು ತಾಂತ್ರಿಕ ಪ್ರಗತಿಯಿಂದ ಎದುರಾಗುವ ಸವಾಲುಗಳನ್ನು ಎದುರಿಸುತ್ತಿವೆ ಎಂದು ವಿವರಿಸಿದರು. "ಉತ್ತರದಾಯಿತ್ವ, ಪಾರದರ್ಶಕತೆ ಮತ್ತು ಗೌಪ್ಯತ''ಯ ಮೂಲಭೂತ ಹಕ್ಕಿಗೆ ಆದ್ಯತೆ ನೀಡುವ ಕಾನೂನು ಚೌಕಟ್ಟುಗಳ ನಿರ್ಣಾಯಕ ಅಗತ್ಯವನ್ನು ಎತ್ತಿ ತೋರಿಸಿದರು.

ಅಂತಿಮವಾಗಿ ಸಿಜೆಐ ಅವರು, ಗೌಪ್ಯತೆ ಮತ್ತು ವಾಕ್ ಸ್ವಾತಂತ್ರ್ಯದ ರಕ್ಷಣೆ ಸೇರಿದಂತೆ ಡಿಜಿಟಲ್ ಸ್ವಾತಂತ್ರ್ಯದ ಆಗ್ರಹವು ಹಿಂದೆಂದೂ ಕಂಡುಬರದಷ್ಟು ತೀವ್ರವಾಗಿ ಕೇಳಿಬರುತ್ತಿದೆ ಆದರೆ ಈ ಕುರುತು ಸಿದ್ಧಾಂತೀಕರಣಗೊಳಿಸಲು ಇನ್ನೂ ಇದು ಆರಂಭಿಕ ಹಂತವಾಗಿದೆ ಎಂದರು.

ಜಗತ್ತು ಆನ್‌ಲೈನ್‌ನೆಡೆಗೆ ಹೊರಳುತ್ತಿರುವಂತೆ , ನಾಗರಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ನಮ್ಮ ಹೋರಾಟಗಳು ಸಹ ಇದನ್ನು ಅನುಸರಿಸಬೇಕು ಎಂದು ಸಿಜೆಐ ಚಂದ್ರಚೂಡ್ ಹೇಳಿದರು.

Related Stories

No stories found.
Kannada Bar & Bench
kannada.barandbench.com