ಸ್ವರ್ಗವೇ ಉರುಳಿದರೂ ನ್ಯಾಯ ಅಬಾಧಿತವಾಗಿರಲಿ: ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ

ಇ-ಸಂಪನ್ಮೂಲ ಕೇಂದ್ರ ಉದ್ಘಾಟನೆಯಾಗಿರುವುದು ನ್ಯಾಯಾಂಗದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದ್ದು, ಅದು ಆಂದೋಲನ ಸೃಷ್ಟಿಸಲಿದೆ ಎಂದು ಸಿಜೆಐ ಬೊಬ್ಡೆ ಭವಿಷ್ಯ ನುಡಿದರು.
Chief Justice of India SA Bobde, Nyay Kaushal
Chief Justice of India SA Bobde, Nyay Kaushal

ʼವಿಡಿಯೋ ಸಮಾವೇಶ ಮತ್ತು ಅಂತರ್ಜಾಲದಿಂದಾಗಿ ವರ್ಚುವಲ್‌ ಮಾಧ್ಯಮದ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಲು ಸಾಧ್ಯವಾಗಿದೆʼ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ತಿಳಿಸಿದರು.

ನಾಗಪುರದಲ್ಲಿ ಶನಿವಾರ ʼನ್ಯಾಯ ಕೌಶಲ್‌ʼ ಹೆಸರಿನ ಇ-ಸಂಪನ್ಮೂಲ ಕೇಂದ್ರ ಮತ್ತು ಮಹಾರಾಷ್ಟ್ರ ಸಾರಿಗೆ ಮತ್ತು ಸಂಚಾರ ಇಲಾಖೆಗೆಂದು ರೂಪಿಸಲಾದ ವರ್ಚುವಲ್‌ ನ್ಯಾಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.

Chief Justice of India SA Bobde
Chief Justice of India SA Bobde

ʼಇ-ಸಂಪನ್ಮೂಲ ಕೇಂದ್ರ ಉದ್ಘಾಟನೆಯಾಗಿರುವುದು ನ್ಯಾಯಾಂಗದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯಾಗಿದ್ದು, ಅದು ಆಂದೋಲನಕ್ಕೆ ಕಾರಣವಾಗಲಿದೆʼ ಎಂದು ಸಿಜೆಐ ಬೊಬ್ಡೆ ಹೇಳಿದರು. ಇದೇ ವೇಳೆ ಅವರು ಕೋವಿಡ್‌ ಸಾಂಕ್ರಾಮಿಕ ರೋಗ ಹರಡಿದ ಆರಂಭದ ಅವಧಿಯಲ್ಲಿ ನಿರ್ಬಂಧಿತ ರೀತಿಯಲ್ಲಿ ಭೌತಿಕ ಕಾರ್ಯಗಳನ್ನು ಮುಂದುವರೆಸಲು ಸುಪ್ರೀಂಕೋರ್ಟ್‌ ಹೇಗೆ ಶ್ರಮಿಸಿತು ಎಂಬುದನ್ನು ವಿವರಿಸಿದರು.

"ಆದರೆ ನನ್ನ ಸಹೋದ್ಯೋಗಿಗಳೊಂದಿಗೆ ಸುಪ್ರೀಂಕೋರ್ಟ್ ಕಟ್ಟಡದ ಸುತ್ತಲೂ ಒಂದು ಸುತ್ತು ಹಾಕಿದಾಗ (ಅದು) ಹಾಗೆ ಮುಂದುವರಿಯುವುದು ಸುರಕ್ಷಿತವಲ್ಲ ಎಂದು ತೋರಿತು. ಆದ್ದರಿಂದ, ನಾನು ತಕ್ಷಣ ಡಾ. ಚಂದ್ರಚೂಡ್ (ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್) ಅವರನ್ನು ಕರೆದೆ. ವರ್ಚುವಲ್‌ ಕಲಾಪಗಳನ್ನು ನಡೆಸುವ ಸಂಬಂಧ ಯೋಜನೆಯೊಂದನ್ನು ರೂಪಿಸಿದೆವು” ಎಂದು ಮಾಹಿತಿ ನೀಡಿದರು.

ಸ್ವರ್ಗವೇ ಉರುಳಿದರೂ ನ್ಯಾಯ ಅಬಾಧಿತವಾಗಿರಲಿ.
ಸಿಜೆಐ ಬೊಬ್ಡೆ

ಆದರೆ ವರ್ಚುವಲ್‌ ಕಲಾಪಗಳಿಗೆ ನ್ಯಾಯಾಲಯಗಳು ತಮ್ಮನ್ನು ಬದಲಿಸಿಕೊಳ್ತಳುವಾಗ ತಮ್ಮದೇ ಆದ ಸಮಸ್ಯೆಗಳು ಸೃಷ್ಟಿಯಾದವು ಎಂದು ಒಪ್ಪಿಕೊಂಡ ಅವರು ನ್ಯಾಯ ನಿರಂತರವಾಗಿ ಮುಂದುವರೆಯುತ್ತಿದ್ದಾಗ ಅದರ ಲಭ್ಯತೆ ಎಂಬುದು ತಾಂತ್ರಿಕ ಅವಲಂಬನೆಗೆ ಕಾರಣವಾಯಿತುʼ ಎಂದು ಹೇಳಿದರು.

ʼನ್ಯಾಯ ಕೈಗೆಟುಕುವಂತೆ ಮತ್ತು ಬಳಕೆಗೆ ಸಾಧ್ಯವಾಗುವಂತೆ ಮಾಡುವುದು ಮುಖ್ಯ. ಸಾಧ್ಯವಾದ ಎಲ್ಲ ಬಗೆಯಲ್ಲಿಯೂ ನ್ಯಾಯ ದೊರಕಿಸಿಕೊಡಲು ಆಗದೇ ಇದ್ದರೆ ಅದು ನ್ಯಾಯಾಲಯಗಳ ಭಾರಿ ವೈಫಲ್ಯʼ ಎಂದು ಅವರು ಅಭಿಪ್ರಾಯಪಟ್ಟರು. ʼಈ ನಿಟ್ಟಿನಲ್ಲಿ ಇ ಸಂಪನ್ಮೂಲ ಕೇಂದ್ರ ಒಂದು ದಿಟ್ಟ ಹೆಜ್ಜೆಯಾಗಿದ್ದು ದೇಶದ ಪ್ರತಿಯೊಂದು ನ್ಯಾಯಾಲಯಗಳನ್ನು ಕೇಂದ್ರದ ಮೂಲಕ ಅರಿಯಬಹುದಾಗಿದೆʼ ಎಂದು ಅವರು ಹೇಳಿದರು.

Photos from the event
Photos from the event

ಇದೇ ವೇಳೆ ಕೋವಿಡ್‌ ಸಾಂಕ್ರಾಮಿಕ ರೋಗದ ಪ್ರಕರಣಗಳು ಇಳಿಮುಖವಾಗತೊಡಗಿದಂತೆ ಬಾಕಿ ಉಳಿಯುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. "ಸಾಂಕ್ರಾಮಿಕ ಪರಿಸ್ಥಿತಿಯ ನಂತರ, ಪ್ರಕರಣಗಳ ಸಂಖ್ಯೆ ಮಿತಿಮೀರಲಿದೆ ಎಂದು ನಾನು ಊಹಿಸಬಲ್ಲೆ. ಪ್ರಕರಣಗಳ ಬಾಕಿ ತುಂಬಾ ಹೆಚ್ಚಲಿದ್ದು ಹೊಸ ಪ್ರಕರಣಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ನನಗೆ ತಿಳಿದಿಲ್ಲʼ ಎಂದು ಅವರು ಹೇಳಿದರು.

Also Read
'ವಾಕ್ ಸ್ವಾತಂತ್ರ್ಯ ಎಂಬುದು ಇತ್ತೀಚಿನ ದಿನಗಳಲ್ಲಿ ಅತಿ ದುರ್ಬಳಕೆಯಾಗಿರುವ ಸ್ವಾತಂತ್ರ್ಯಗಳಲ್ಲೊಂದು' ಸಿಜೆಐ ಬೊಬ್ಡೆ

ದೆಹಲಿಯಿಂದಲೇ ವೀಡಿಯೊ ಮೂಲಕ ಮಾತನಾಡಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಾ. ಡಿ ವೈ ಚಂದ್ರಚೂಡ್‌ ಅವರು ʼದಾವೆದಾರರಿಗೆ ಮತ್ತು ವಕೀಲರಿಗೆ ನ್ಯಾಯ ಒದಗಿಸುವಲ್ಲಿ ಇ- ನ್ಯಾಯಾಲಯಗಳ ಪಾತ್ರ ಮಹತ್ವದ್ದು ಎಂದು ಹೇಳಿದರು.

ಲಾಕ್‌ಡೌನ್ ವೇಳೆ ವಿಚಾರಣೆ ಮತ್ತು ದಾಖಲಾತಿಗಳನ್ನು ಅನೂಚಾನವಾಗಿ ಮಾಡುವುದು ಜಗತ್ತಿನ ಬೇರಾವುದೇ ದೇಶಗಳಿಗೆ ಸಾಧ್ಯವಾಗುತ್ತಿರಲಿಲ್ಲ. ತಂತ್ರಜ್ಞಾನದ ಸಹಾಯದಿಂದ ಭಾರತ ಅದನ್ನು ಆಗುಮಾಡಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್

ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಾಂಕರ್‌ ದತ್ತಾ ಮಾತನಾಡಿ “ಇ- ಸಂಪನ್ಮೂಲ ಕೇಂದ್ರ ದೇಶದ ಮೂಲೆ ಮೂಲೆಗಳಿಗೆ ವರ್ಚುವಲ್‌ ಆಗಿ ನ್ಯಾಯ ಲಭ್ಯವಿರುವಂತೆ ನೋಡಿಕೊಳ್ಳುತ್ತದೆ” ಎಂದು ಅವರು ಅಭಿಪ್ರಾಯಪಟ್ಟರು. "ನೀವು ವಾಪಸ್‌ ಹಿಂದಕ್ಕೆ ಹೋಗಿ ಮೊದಲಿನಿದನ್ನು ಬದಲಿಸಲು ಸಾಧ್ಯವಿಲ್ಲ. ಎಲ್ಲಿದ್ದೀರೋ ಅಲ್ಲಿಂದಲೇ ಆರಂಭಿಸಿ ಅಂತ್ಯವನ್ನು ಬದಲಿಸಬಹುದು” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ಆರ್‌. ಗವಾಯ್‌, ಬಾಂಬೆ ಹೈಕೋರ್ಟ್‌ನ ಕಂಪ್ಯೂಟರ್ ಸಮಿತಿ ಅಧ್ಯಕ್ಷರಾದ ನ್ಯಾ. ಎನ್.ಎಂ.ಜಮದಾರ್, ನ್ಯಾಯಮೂರ್ತಿಗಳಾದ ಆರ್.ಕೆ. ದೇಶಪಾಂಡೆ ಮತ್ತು ಬಾಂಬೆ ಹೈಕೋರ್ಟ್‌ನ ಎಸ್‌.ಬಿ.ಸುಕ್ರೆ ಮತ್ತಿತರರು ಉಪಸ್ಥಿತರಿದ್ದರು. ಅಂದಹಾಗೆ ದೇಶದಲ್ಲಿ ಇದೇ ಮೊದಲ ಬಾರಿಗೆ "ನ್ಯಾಯಾ ಕೌಶಲ್" ಹೆಸರಿನ ಇ-ಸಂಪನ್ಮೂಲ ಕೇಂದ್ರ ಸ್ಥಾಪಿಸಲಾಗಿದೆ. ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರಕರಣಗಳನ್ನು ದಾಖಲಿಸಲು ಇದರಿಂದ ಅನುಕೂಲವಾಗಲಿದೆ.

Related Stories

No stories found.
Kannada Bar & Bench
kannada.barandbench.com