“ನನ್ನ ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ:” ಸುಪ್ರೀಂ ಕೋರ್ಟ್‌ಗೆ ವಿದಾಯ ಹೇಳಿದ ಸಿಜೆಐ ಎಸ್‌ ಎ ಬೊಬ್ಡೆ

“ನನ್ನ ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿಯಿಂದ ವೃತ್ತಿಗೆ ವಿದಾಯ ಹೇಳುತ್ತಿದ್ದೇನೆ. ನ್ಯಾ. ರಮಣರಿಗೆ ಅಧಿಕಾರ ಹಸ್ತಾಂತರಿಸುತ್ತಿದ್ದು, ಅವರು ಸಮರ್ಥವಾಗಿ ನ್ಯಾಯಾಲಯವನ್ನು ಮುನ್ನಡೆಸಲಿದ್ದಾರೆ” ಎಂದು ಬೊಬ್ಡೆ ಹೇಳಿದರು.
CJI SA Bobde
CJI SA Bobde

ಸುಪ್ರೀಂ ಕೋರ್ಟ್‌ ಮುಖ್ಯಸ್ಥರಾಗಿ ತಮ್ಮ ಕೈಲಾದಷ್ಟು ಉತ್ತಮ ಕೆಲಸವನ್ನು ಮಾಡಿ ನಿವೃತ್ತಿ ಹೊಂದುತ್ತಿರುವ ತೃಪ್ತಿ ತಮಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಹೇಳಿದ್ದಾರೆ. ನಿವೃತ್ತಿ ಹೊಂದುವ ನ್ಯಾಯಮೂರ್ತಿಗಳಿಗೆ ನ್ಯಾಯಾಲಯದ ಕೊಠಡಿಯಲ್ಲಿ ಆಯೋಜಿಸಲಾಗುವ ಔಪಚಾರಿಕ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬೊಬ್ಡೆ ಅವರು ಮಾತನಾಡಿದರು.

“ನನ್ನ ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿಯೊಂದಿಗೆ ನಿವೃತ್ತಿಯಾಗುತ್ತಿದ್ದೇನೆ. ನ್ಯಾಯಮೂರ್ತಿ ರಮಣ ಅವರಿಗೆ ಅಧಿಕಾರ ಹಸ್ತಾಂತರಿಸುತ್ತಿದ್ದು, ಅವರು ಸಮರ್ಥವಾಗಿ ನ್ಯಾಯಾಲಯವನ್ನು ಮುನ್ನಡೆಸಲಿದ್ದಾರೆ” ಎಂದು ಅವರು ಹೇಳಿದರು.

1956ರಲ್ಲಿ ಜನಿಸಿದ ಬೊಬ್ಡೆ ಅವರು 1978ರಲ್ಲಿ ವಕೀಲರಾಗಿ ನೋಂದಾಯಿಸಿಕೊಡರು. ಬಾಂಬೆ ಹೈಕೋರ್ಟ್‌ ನಾಗಪುರ ಪೀಠದಲ್ಲಿ 21 ವರ್ಷಗಳ ಕಾಲ ಪ್ರಾಕ್ಟೀಸ್‌ ಮಾಡಿದ್ದ ಅವರು 1998ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಹೊಂದಿದ್ದರು. 2000ದ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2012ರ ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2013ರ ಏಪ್ರಿಲ್‌ 12ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬೊಬ್ಡೆ ಅವರು 2019ರ ನವೆಂಬರ್‌ 18ರಂದು ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು.

ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಸಿಜೆ ಬೊಬ್ಡೆ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

“ಕಳೆದ ವರ್ಷದ ಮಾರ್ಚ್‌ನಿಂದ ಕೋವಿಡ್‌ನಿಂದಾಗಿ ಜಗತ್ತು ಭಾರಿ ಸಂಕಷ್ಟಕ್ಕೆ ಸಿಲುಕಿದೆ. ನ್ಯಾಯಾಲಯ ಮುಚ್ಚಲಿದೆ ಎಂದು ಪರಿಷತ್‌ ನಿರ್ಧರಿಸಿತ್ತು. ಆದರೆ, ನ್ಯಾಯಾಲಯ ಮುಚ್ಚದಿರುವ ನಿರ್ಧಾರ ಕೈಗೊಂಡಿತ್ತು. ಪರಿಸ್ಥಿತಿ ಪರಿಗಣಿಸಿದ ಸಿಜೆಐ ಬೊಬ್ಡೆ ಅವರು ವರ್ಚುವಲ್‌ ವಿಚಾರಣೆ ಆರಂಭಿಸಿ 50,000 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ. ಇದೊಂದು ಮಹತ್ವದ ಸಾಧನೆ” ಎಂದು ಎಜಿ ವೇಣುಗೋಪಾಲ್‌ ಮೆಚ್ಚುಗೆ ಸೂಚಿಸಿದರು.

“ಸಿಜೆಐ ಎಸ್ಎ ಬೊಬ್ಡೆ ಪ್ರಬುದ್ಧ ಮತ್ತು ಅದ್ಭುತ ನ್ಯಾಯಾಧೀಶರು ಮಾತ್ರವಲ್ಲದೇ ಪ್ರೀತಿ ಮತ್ತು ಕಾಳಜಿಯುಳ್ಳ ಮನುಷ್ಯರಾಗಿಯೂ ನೆನೆಯಲ್ಪಡುತ್ತಾರೆ. ನಿಮ್ಮ ಅನುಪಸ್ಥಿತಿ ಕಾಡಲಿದೆ. ನಿಮಗೆ ಆರೋಗ್ಯಕರ ಮತ್ತು ಯಶಸ್ವಿ ಜೀವನವನ್ನು ಬಯಸುತ್ತೇವೆ,” ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

Also Read
65 ವರ್ಷಕ್ಕೆ ನ್ಯಾಯಮೂರ್ತಿಗಳ ನಿವೃತ್ತಿ ಬೇಸರದ ಸಂಗತಿ: ನ್ಯಾ. ಮಲ್ಹೋತ್ರಾ ನಿವೃತ್ತಿಗೆ ವೇಣುಗೋಪಾಲ್‌ ಪ್ರತಿಕ್ರಿಯೆ

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ ಅಧ್ಯಕ್ಷ ಹಿರಿಯ ವಕೀಲ ವಿಕಾಸ್‌ ಸಿಂಗ್‌ ಹಾಗೂ ವಕೀಲ ಶಿವಾಜಿ ಜಾಧವ್‌ ಅವರು ಬೊಬ್ಡೆ ಅವರ ಸೇವೆಯನ್ನು ಸ್ಮರಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

“ಕೊನೆಯ ದಿನವು ಮಿಶ್ರ ಭಾವನೆಗಳನ್ನು ಹುಟ್ಟುಹಾಕಿದೆ ಎಂದು ನಾನು ಹೇಳಲೇಬೇಕು. ಅದನ್ನು ವಿವರಿಸಲು ಕಷ್ಟ. ನಾನು ಈ ಹಿಂದೆಯೂ ಈ ರೀತಿಯ ವಿಧ್ಯುಕ್ತ ಪೀಠದ ಭಾಗವಾಗಿದ್ದೇನೆ. ಆದರೆ ಆಗ ಎಂದೂ ಅಂತಹ ಮಿಶ್ರ ಭಾವನೆಗಳನ್ನು ಅನುಭವಿಸಲಿಲ್ಲ. ಇದು ನನಗೆ ವಿಷಯಗಳನ್ನು ಸ್ಪಷ್ಟವಾಗಿ ಹೇಳಲು ಅನುವು ಮಾಡಿಕೊಡುತ್ತಿದೆ” ಎಂದು ಸಿಜೆಐ ಬೊಬ್ಡೆ ಹೇಳಿದರು.

ಮುಂದುವರೆದು, "ನಾನು ಈ ನ್ಯಾಯಾಲಯಕ್ಕೆ ಖುಷಿಯಿಂದ, ಸದ್ಭಾವನೆಯಿಂದ, ಸ್ಮರಣೀಯ ನೆನಪುಗಳೊಂದಿಗೆ ವಿದಾಯ ಹೇಳುತ್ತಿದ್ದೇನೆ. ಅದ್ಭುತ ವಾದಗಳು, ಅತ್ಯುತ್ತಮ ಮಂಡನೆಗಳು, ಸದ್ವರ್ತನೆ, ನ್ಯಾಯದಾನಕ್ಕೆ ತೋರುವ ಬದ್ಧತೆಯನ್ನು ಕೇವಲ ಪರಿಷತ್ತಿನಿಂದ ಮಾತ್ರವೇ ಅಲ್ಲ ಇದಕ್ಕೆ ಸಂಬಂಧಿಸಿದ ಎಲ್ಲರಿಂದಲೂ ನಾನಿಲ್ಲಿ ಕಂಡಿದ್ದೇನೆ. 22 ವರ್ಷ ಕಾಲ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ಕಚೇರಿಗೆ ವಿದಾಯ ಹೇಳುತ್ತಿದ್ದೇನೆ. ಸರ್ವೋಚ್ಚ ನ್ಯಾಯಾಲಯದ ನನ್ನ ಅನುಭವ ಅತ್ಯುತ್ಕೃಷ್ಟವಾದದ್ದು. ನನ್ನ ಸಹೋದರ ನ್ಯಾಯಮೂರ್ತಿಗಳೊಂದಿಗಿನ ಮೈತ್ರಿ ಅದ್ಭುತವಾಗಿತ್ತು," ಎಂದು ಅವರು ನೆನೆದರು.

Related Stories

No stories found.
Kannada Bar & Bench
kannada.barandbench.com