ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸ್ಸು ಮಾಡುವಂತೆ ಹಾಲಿ ಸಿಜೆಐ ಯು ಯು ಲಲಿತ್ ಅವರಿಗೆ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಪತ್ರ ಬರೆದಿದ್ದಾರೆ. ಸಿಜೆಐ ಲಲಿತ್ ಅವರು ನವೆಂಬರ್ 8ರಂದು ನಿವೃತ್ತಿ ಹೊಂದಲಿದ್ದಾರೆ.
ಹಿರಿತನದ ಆಧಾರದಲ್ಲಿ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಮುಂದಿನ ಸಿಜೆಐ ಆಗಲಿರುವ ನಿರೀಕ್ಷೆ ಇದ್ದು, ಅವರ ಹೆಸರು ಶಿಫಾರಸ್ಸುಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ನ್ಯಾ. ಚಂದ್ರಚೂಡ್ ಅವರು ಸಿಜೆಐ ಆಗಿ ಎರಡು ವರ್ಷಗಳ ಸುದೀರ್ಘ ಅವಧಿ ಹೊಂದಿರಲಿದ್ದು, 2024ರ ನವೆಂಬರ್ 10ಕ್ಕೆ ನಿವೃತ್ತರಾಗಲಿದ್ದಾರೆ.
ಸಂವಿಧಾನದ 124(2)ನೇ ವಿಧಿಯಲ್ಲಿ ಸಿಜೆಐ ನೇಮಕಾತಿ ಪ್ರಕ್ರಿಯೆಯನ್ನು ಉಲ್ಲೇಖಿಸಲಾಗಿದೆ. ಇದರ ಅನುಸಾರ ಕಾನೂನು ಸಚಿವರು ಹಾಲಿ ಸಿಜೆಐಗೆ ತಮ್ಮ ಉತ್ತರಾಧಿಕಾರಿಯನ್ನು ಸೂಚಿಸುವಂತೆ ಸೂಕ್ತ ಸಮಯದಲ್ಲಿ ಕಾನೂನು ಸಚಿವರು ಪತ್ರ ಬರೆಯುತ್ತಾರೆ. ಹಾಲಿ ಸಿಜೆಐ ತಮ್ಮ ಸ್ಥಾನ ತೆರವು ಮಾಡುವುದಕ್ಕೂ ಒಂದು ತಿಂಗಳು ಮುಂಚೆ ಈ ಪ್ರಕ್ರಿಯೆ ಆರಂಭವಾಗುತ್ತದೆ.