
ಮಲೆಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ಕೇರಳದ ರಂಜಿತ್ ಬಾಲಕೃಷ್ಣನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
“ಬೆಂಗಳೂರಿನ ತಾಜ್ ಹೋಟೆಲ್ 2016ರಲ್ಲಿ ಆರಂಭವಾಗಿದ್ದು, ದೂರುದಾರರು 2012ರಲ್ಲಿ ತಮ್ಮ ಮೇಲೆ ಮದ್ಯ ಸೇವಿಸಿ ರಂಜಿತ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ, ತಾಜ್ ಸೃಷ್ಟಿತ ಸಿದ್ಧಾಂತ ಬಿದ್ದು ಹೋಗಿದೆ. ಇನ್ನು, ರಂಜಿತ್ ಅವರು ಮದ್ಯಸೇವಿಸಿ ಕೃತ್ಯ ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಮದ್ಯದ ಮತ್ತು ಇಳಿದು ದೂರು ದಾಖಲಿಸಲು ದೂರುದಾರರಿಗೆ 12 ವರ್ಷ ಬೇಕಿರಲಿಲ್ಲ. ಅವಿಶ್ವಾಸಾರ್ಹ ಸಾಕ್ಷಿಗೆ ಇದೊಂದು ನಿಚ್ಚಳ ಉದಾಹರಣೆಯಾಗಿದೆ. ಹೀಗಾಗಿ, ಅರ್ಜಿ ಇತ್ಯರ್ಥವಾಗುವವರೆಗೆ ಪ್ರಕರಣದ ತನಿಖೆಗೆ ತಡೆಯಾಜ್ಞೆ ನೀಡಲಾಗಿದೆ. ರಾಜ್ಯ ಸರ್ಕಾರ ಮತ್ತು ದೂರುದಾರನಿಗೆ ನೋಟಿಸ್ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.
ರಂಜಿತ್ ಬಾಲಕೃಷ್ಣ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “2012ರಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ತಾಜ್ ಹೋಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯವಾಗಿದೆ ಎಂದು 31 ವರ್ಷದ ವ್ಯಕ್ತಿ ಆರೋಪಿಸಿದ್ದಾರೆ. ಮದ್ಯದ ಮತ್ತಿನಲ್ಲಿ ರಂಜಿತ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ವಿಮಾನ ನಿಲ್ದಾಣ ರಸ್ತೆಯಲ್ಲಿನ ತಾಜ್ ಹೋಟೆಲ್ ಆರಂಭವಾಗಿದ್ದು 2016ರಲ್ಲಿ. ಆದರೆ, ದೂರುದಾರ ತಮ್ಮ ಮೇಲೆ 2012ರಲ್ಲಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ. ಸುಮಾರು 12 ವರ್ಷಗಳ ಬಳಿಕ ದೂರು ನೀಡಿದ್ದಾರೆ” ಎಂದರು.
“ಮಲೆಯಾಳಂ ಖ್ಯಾತ ನಟ ಮಮ್ಮೂಟಿ ಅವರು ರಂಜಿತ್ ಬಾಲಕೃಷ್ಣನ್ ಅವರಿಗೆ ತನ್ನನ್ನು ಪರಿಚಯಿಸಿಕೊಟ್ಟಿದ್ದರು ಎಂದು ದೂರುದಾರರು ಹೇಳಿದ್ದಾರೆ. ತಾನು ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದು, ಆನಂತರ ಅವಕಾಶ ನೀಡದಿದ್ದಕ್ಕೆ ಅವರು ತನ್ನ ವಿರುದ್ಧ ದೂರು ನೀಡಿರಬೇಕು. ಹೀಗಾಗಿ, ಪ್ರಕರಣಕ್ಕೆ ತಡೆ ನೀಡಬೇಕು” ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: 2024ರ ಅಕ್ಟೋಬರ್ 26ರಂದು 31 ವರ್ಷದ ಯುವಕ ನೀಡಿದ ದೂರಿನ ಅನ್ವಯ ರಂಜಿತ್ ಬಾಲಕೃಷ್ಣನ್ ವಿರುದ್ಧ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66ಇ ಅಡಿ ರಂಜಿತ್ ಬಾಲಕೃಷ್ಣನ್ ವಿರುದ್ದ ಪ್ರಕರಣ ದಾಖಲಾಗಿತ್ತು.