
ಉದಾಸೀನದಿಂದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ) ಪ್ರಶ್ನೆಪತ್ರಿಕೆ ರೂಪಿಸಿ ಪರೀಕ್ಷೆ ನಡೆಸಿಸಿದ್ದಕ್ಕಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವನ್ನು (ಎನ್ಎಲ್‌ಯುಗಳ ಒಕ್ಕೂಟ) ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ಕುರಿತು ನ್ಯಾಯಾಲಯ 2018ರಲ್ಲಿಯೇ ತೀರ್ಪು ನೀಡಿದ್ದರೂ ಕಾನೂನು ಪ್ರವೇಶ ಪರೀಕ್ಷೆಯನ್ನು ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಅಥವಾ ಭಾರತೀಯ ವಕೀಲರ ಪರಿಷತ್ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಅತೃಪ್ತಿ ಹೊರಹಾಕಿತು.
"ಲಕ್ಷಾಂತರ ವಿದ್ಯಾರ್ಥಿಗಳ ವೃತ್ತಿ ಆಕಾಂಕ್ಷೆಗಳನ್ನು ಒಳಗೊಂಡಿರುವ ಸಿಎಲ್‌ಎಟಿ ಪರೀಕ್ಷೆಗಳಿಗೆ ಉದಾಸೀನದಿಂದ ಒಕ್ಕೂಟ ಪ್ರಶ್ನೆಪತ್ರಿಕೆ ರೂಪಿಸುತ್ತಿರುವುದು ಖೇದಕರ ಸಂಗತಿ. ಶೈಕ್ಷಣಿಕ ವಿಷಯಗಳಲ್ಲಿ ನ್ಯಾಯಾಲಯವು ತಜ್ಞರಲ್ಲದ ಕಾರಣ ಮಧ್ಯಪ್ರವೇಶಿಸಲು ಯಾವಾಗಲೂ ನಿಧಾನವಾಗಿರುತ್ತದೆ. ಆದರೆ ಶಿಕ್ಷಣ ತಜ್ಞರು ಸ್ವತಃ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ತಪ್ಪು ಮಾಡಿದಾಗ, ನ್ಯಾಯಾಲಯ ಮಧ್ಯಪ್ರವೇಶಿಸದೇ ಬೇರೆ ದಾರಿ ಇಲ್ಲ" ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ, ಅದು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ ಅದು ಪರೀಕ್ಷೆಯನ್ನು ಸುಗಮಗೊಳಿಸಲು ಮತ್ತು ಅದರ ಸುತ್ತಲಿನ ಸಮಸ್ಯೆಗಳನ್ನು ಪರಿಹರಿಸಲು ಪ್ರತಿಕ್ರಿಯೆ ನೀಡುವಂತೆ ಹೇಳಿತು.
ನಾಲ್ಕು ಪ್ರಶ್ನೆಗಳಲ್ಲಿ ದೋಷ ಕಂಡುಬಂದಿದ್ದರಿಂದ, ಪದವಿ ಕೋರ್ಸ್‌ಗಳ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ) ಪರಿಷ್ಕೃತ ಫಲಿತಾಂಶ ಪ್ರಕಟಿಸುವಂತೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ (ಎನ್‌ಎಲ್‌ಯುಗಳ ಒಕ್ಕೂಟ) ದೆಹಲಿ ಹೈಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಅದು ಇಡಿಯಾಗಿ ಬದಲಿಸಿತು.
ಪ್ರಶ್ನೆ ಸಂಖ್ಯೆ 56ಕ್ಕೆ ಸಿ ಮತ್ತು ಡಿ ಉತ್ತರಗಳು ಸರಿಯಾಗಿವೆ. ಎ ಅಥವಾ ಬಿ ಉತ್ತರ ಬರೆದವರಿಗೆ ನಕಾರಾತ್ಮಕ ಅಂಕಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಪ್ರಶ್ನೆ ಸಂಖ್ಯೆ 77ಕ್ಕೆ ಉತ್ತರ ಬಿ ಸರಿಯಾಗಿದ್ದು ಅದಕ್ಕೆ ಗುರುತು ಹಾಕಿದವರಿಗೆ ಪೂರ್ಣ ಅಂಕ ದೊರೆಯಬೇಕು. 115 ಹಾಗೂ 116ನೇ ಪ್ರಶ್ನೆಗಳನ್ನು ರದ್ದುಗೊಳಿಸಬೇಕು ಎಂದು ಅದು ಹೇಳಿದೆ.