ತಳಮಟ್ಟದಲ್ಲಿ ಕಕ್ಷಿದಾರರಿಗೆ ಕಾನೂನು ಮಾರ್ಗದರ್ಶನ, ಸಹಕಾರ ಹೆಚ್ಚಿನ ಮಟ್ಟದಲ್ಲಿ ಸಿಗಬೇಕು: ಸಿಎಂ ಬಸವರಾಜ ಬೊಮ್ಮಾಯಿ

ಚಿತ್ರದುರ್ಗ ಜಿಲ್ಲಾ ನ್ಯಾಯಾಂಗ ಇಲಾಖೆ ಮತ್ತು ಹೊಸದರ್ಗದ ವಕೀಲರ ಸಂಘದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಹೊಸದುರ್ಗ ನ್ಯಾಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಮಾತನಾಡಿದರು.
ತಳಮಟ್ಟದಲ್ಲಿ ಕಕ್ಷಿದಾರರಿಗೆ ಕಾನೂನು ಮಾರ್ಗದರ್ಶನ, ಸಹಕಾರ ಹೆಚ್ಚಿನ ಮಟ್ಟದಲ್ಲಿ ಸಿಗಬೇಕು: ಸಿಎಂ ಬಸವರಾಜ ಬೊಮ್ಮಾಯಿ

“ತಂತ್ರಜ್ಞಾನದ ನೆರವಿನೊಂದಿಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ, ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ, ತಳಮಟ್ಟದಲ್ಲಿ ಕಕ್ಷಿದಾರರಿಗೆ ಕಾನೂನು ಮಾರ್ಗದರ್ಶನ ಹಾಗೂ ಸಹಕಾರ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಿಗಬೇಕಿದೆ. ಈಗ ಸಮಾಜದಲ್ಲಿ ಅನ್ಯಾಯ ಮಾಡುವುದೇ ಸಹಜ ಎಂಬ ಪರಿಸ್ಥಿತಿ ಇರುವುದರಿಂದ ನ್ಯಾಯಾಲಯಗಳ ಮಧ್ಯೆ ಪ್ರವೇಶ ಅನಿವಾರ್ಯವಾಗಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲಾ ನ್ಯಾಯಾಂಗ ಇಲಾಖೆ ಮತ್ತು ಹೊಸದರ್ಗದ ವಕೀಲರ ಸಂಘದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಹೊಸದುರ್ಗ ನ್ಯಾಯಾಲಯದ 50ನೇ ವರ್ಷದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಸಮಾಜದಲ್ಲಿ ವ್ಯಾಜ್ಯಗಳೂ ಜಾಸ್ತಿಯಾಗಿದ್ದು, ಜನರು ನ್ಯಾಯ ಪಡೆಯಲು ಹೆಚ್ಚು ಸಮಯ ವ್ಯಯಿಸುತ್ತಿದ್ದಾರೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗ ನ್ಯಾಯಾಂಗ. ನಮ್ಮ ದೇಶದಲ್ಲಿನ ಸಾಮಾಜಿಕ ವ್ಯವಸ್ಥೆಯ ಅನ್ವಯ ನ್ಯಾಯ ಒದಗಿಸುವುದು ಸವಾಲಿನ ಕೆಲಸ. ಭಾರತದಲ್ಲಿ ಶ್ರೇಷ್ಠವಾದ ನ್ಯಾಯಾಂಗ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು ಅಷ್ಟೇ ಮುಖ್ಯ. ಇಲ್ಲಿ ನಿರಂತರ ಬದಲಾವಣೆ, ಸುಧಾರಣೆ ಅಗತ್ಯವಿದೆ” ಎಂದರು.

“ನ್ಯಾಯಾಲಯದ ತೀರ್ಪುಗಳ ಪ್ರಸ್ತುತತೆ ಬಗ್ಗೆ ಅರಿಯುವ ದೃಷ್ಟಿ ನ್ಯಾಯಾಧೀಶರು ಹಾಗೂ ವಕೀಲರಿಗೆ ಇರಬೇಕು. ಅಂತರ ರಾಜ್ಯ ಜಲ ವಿವಾದ ಕಾಯಿದೆಯ ಸೆಕ್ಷನ್‌ 3ರಲ್ಲಿ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದಾದಾಗ ನ್ಯಾಯ ಮಂಡಳಿ ರಚನೆಯಾಗುತ್ತದೆ. ನ್ಯಾಯ ಮಂಡಳಿ ರಚನೆಯ ನಂತರ ವಿವಾದ ಇತ್ಯರ್ಥಗೊಳ್ಳಲು ದಶಕಗಳೇ ಆಗುತ್ತವೆ. ಕರ್ನಾಟಕದಲ್ಲಿ 2-3 ದಶಕಗಳ ಅವಧಿಯ ನ್ಯಾಯ ಮಂಡಳಿಗಳಿವೆ. ಇಲ್ಲಿ ಜಲ ವಿವಾದಗಳು ಪರಿಹಾರ ದೊರೆಯದೇ ಕಗ್ಗಂಟಾಗಿ ಉಳಿಯುತ್ತಿವೆ. ಇದರಿಂದ ರಾಜ್ಯದ ಜಲ ಸಂಪನ್ಮೂಲ ಪೋಲಾಗುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆಗಳಿಗೆ ತೆರೆದುಕೊಳ್ಳದಿದ್ದರೆ ಸರ್ಕಾರ, ನ್ಯಾಯಮೂರ್ತಿಗಳು, ನ್ಯಾಯಾಂಗ ವ್ಯವಸ್ಥೆಗೂ ಕಷ್ಟವಾಗುತ್ತದೆ” ಎಂದರು.

ಹೊಸದುರ್ಗ ನ್ಯಾಯಾಲಯವು ಐವತ್ತು ವರ್ಷದ ಸುದೀರ್ಘ ಅವಧಿಯಲ್ಲಿ ನೊಂದ ಹಲವರಿಗೆ ನ್ಯಾಯದಾನ ಮಾಡಿದೆ. ಅಲ್ಲದೇ, ಕಾನೂನಿನ ಅರಿವನ್ನು ಮೂಡಿಸಿದೆ. ಹತ್ತು, ಹಲವು ನ್ಯಾಯಾಧೀಶರನ್ನು ದೇಶಕ್ಕೆ ನೀಡಿದೆ. ಹೊಸದುರ್ಗ ನ್ಯಾಯಾಲಯ ಜನರಿಗೆ ನ್ಯಾಯ ಒದಗಿಸುತ್ತಾ ಶತಮಾನೋತ್ಸವ ಆಚರಿಸುವಂತಾಗಲಿ ಎಂದು ಆಶಿಸಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ, ಚಿತ್ರದುರ್ಗದ ಆಡಳಿತಾತ್ಮಕ ನ್ಯಾಯಮೂರ್ತಿಯಾದ ಜ್ಯೋತಿ ಮೂಲಿಮನಿ, ಕಾನೂನು ಸಚಿವ ಎಂ ಮಾಧುಸ್ವಾಮಿ, ಕೃಷಿ ಸಚಿವ ಬಿ ಸಿ ಪಾಟೀಲ್‌, ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಬಿ ಮುರಳೀಧರ್‌ ಪೈ, ಜಿಲ್ಲಾ ನ್ಯಾಯಾಧೀಶರು, ನ್ಯಾಯಾಂಗದ ಅಧಿಕಾರಿ, ಸಿಬ್ಬಂದಿ, ವಕೀಲರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com