[ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ವಿವಾದ] ಮೊಕದ್ದಮೆಗಳ ಒಗ್ಗೂಡಿಸಿ ಆಲಿಸುವುದರಿಂದ ಉಭಯ ಪಕ್ಷಕಾರರಿಗೂ ಅನುಕೂಲ: ಸುಪ್ರೀಂ

ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ಮಾಡುವುದರಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಉಭಯ ಪಕ್ಷಕಾರರಿಗೂ ಲಾಭವಾಗುತ್ತದೆ. ಇದು ಬಹು ವಿಧದ ವಿಚಾರಣೆಯನ್ನು ತಪ್ಪಿಸುತ್ತದೆ ಎಂದು ತಿಳಿಹೇಳಿದ ಪೀಠ.
Krishna Janmabhoomi - Shahi Idgah Dispute
Krishna Janmabhoomi - Shahi Idgah Dispute
Published on

ಕೃಷ್ಣ ಜನ್ಮಭೂಮಿ - ಶಾಹಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಮೊಕದ್ದಮೆಗಳನ್ನು ಒಗ್ಗೂಡಿಸಿ ಆಲಿಸುವ ಅಲಹಾಬಾದ್ ಹೈಕೋರ್ಟ್‌ನ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮೇಲುನೋಟಕ್ಕೆ ಪೂರಕ ಅಭಿಪ್ರಾಯ ವ್ಯಕ್ತಪಡಿಸಿದೆ [ಕಮಿಟಿ ಆಫ್ ಮ್ಯಾನೇಜ್‌ಮೆಂಟ್ ಟ್ರಸ್ಟ್ ಶಾಹಿ ಈದ್ಗಾ ವರ್ಸಸ್‌ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ವಾದಕಾಲೀನ ಸ್ನೇಹಿತರು ಮತ್ತು ಇತರರು].

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಪಿ ವಿ ಸಂಜಯ್ ಕುಮಾರ್ ಅವರ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಒಟ್ಟುಗೂಡಿಸಿ ವಿಚಾರಣೆ ಮಾಡುವುದರಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಎರಡೂ ಬದಿಯ ಪಕ್ಷಕಾರರಿಗೆ ಲಾಭವಾಗುತ್ತದೆ. ಇದು ಬಹು ವಿಧದ ವಿಚಾರಣೆಯನ್ನು ತಪ್ಪಿಸುತ್ತದೆ ಎಂದು ತಿಳಿಹೇಳಿತು.

ವಾದಿಗಳ ಮನವಿಯನ್ನು ಆಲಿಸಿದ ನ್ಯಾಯಾಲಯವು "ದಾವೆಗಳನ್ನು ಒಗ್ಗೂಡಿಸಿ ಆಲಿಸುವ ವಿಚಾರದಲ್ಲಿ ನಾವೇಕೆ ಮಧ್ಯಪ್ರವೇಶಿಸಬೇಕು" ಎಂದು ಕೇಳಿತು. ಈ ವೇಳೆ, ಕಮಿಟಿ ಆಫ್ ಮ್ಯಾನೇಜ್‌ಮೆಂಟ್ ಟ್ರಸ್ಟ್ ಶಾಹಿ ಈದ್ಗಾ ಪರ ವಕೀಲರು, "ಸ್ವಭಾವದಲ್ಲಿ ಏಕರೂಪವಲ್ಲದ ಮೊಕದ್ದಮೆಗಳನ್ನು ಸಹ ಒಗ್ಗೂಡಿಸಲಾಗಿದೆ. ಅಲ್ಲದೆ, ಈ ಕುರಿತಾದ ಯಾವುದೇ ಮನವಿಯನ್ನೂ ಸಹ ಒಗ್ಗೂಡಿಸಿಯೇ ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಇದು ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ" ಎಂದು ವಾದಿಸಿದರು.

ಇದಕ್ಕೆ ಪೀಠವು, "ಇದರಿಂದ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಇದು ನಿಮ್ಮ ಹಾಗೂ ಅವರ (ಪ್ರತಿವಾದಿಗಳ) ಲಾಭ ಮತ್ತು ಪ್ರಯೋಜನಕ್ಕಾಗಿ ಇದ್ದು, ಬಹುವಿಧದ ವಿಚಾರಣೆಗಳನ್ನು ತಪ್ಪಿಸುತ್ತದೆ" ಎಂದಿತು. ನಂತರ ಪ್ರಕರಣವನ್ನು ಮುಂದೂಡಿ, ಏಪ್ರಿಲ್‌ನಲ್ಲಿ ವಿಚಾರಣೆಗೆ ಪಟ್ಟಿ ಮಾಡಿತು.

ಪ್ರಕರಣವನ್ನು ಏಪ್ರಿಲ್‌ ಮೊದಲನೇ ವಾರಕ್ಕೆ ಮುಂದೂಡಿದ ಪೀಠವು, "ಎಲ್ಲವನ್ನೂ ವಿವಾದ ಮಾಡುವ ಅಗತ್ಯವಿಲ್ಲ. ಅರ್ಜಿಗಳನ್ನು ಕ್ರೋಢೀಕರಿಸಿ ಆಲಿಸಿದರೆ ಏನು ವ್ಯತ್ಯಾಸವಾಗುತ್ತದೆ? ಪ್ರಸ್ತುತ ಲಿಖಿತ ವಾದಾಂಶಗಳನ್ನು ದಾಖಲೆಯಲ್ಲಿ ತೆಗೆದುಕೊಳ್ಳಲಾಗಿದೆ. ಅದೇನೇ ಇರಲಿ, ಅರ್ಜಿಗಳನ್ನು ಒಗ್ಗೂಡಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ನಾವು ಪ್ರಕರಣವನ್ನು ಮುಂದೂಡುತ್ತೇವೆ. ಎಲ್ಲವನ್ನೂ ಏಕೆ ಪ್ರಶ್ನಿಸಬೇಕು ಎನ್ನುವುದೇ ನಮಗೆ ಅರ್ಥವಾಗುತ್ತಿಲ್ಲ. 2025ರ ಏಪ್ರಿಲ್‌ನ ಮೊದಲನೇ ವಾರದಲ್ಲಿ ಪ್ರಕರಣವನ್ನು ಮರು-ಪಟ್ಟಿ ಮಾಡಿ,” ಎಂದಿತು.

ಮೊಕದ್ದಮೆಗಳನ್ನು ಒಗ್ಗೂಡಿಸಿ ಆಲಿಸುವಂತೆ ಹಿಂದೂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಕೃಷ್ಣ ಜನ್ಮಭೂಮಿ ಇದ್ದ ಸ್ಥಳದಲ್ಲಿ ಶಾಹಿ ಈದ್ಗಾ ಮಸೀದಿಯನ್ನು (ಮಸೀದಿ) ನಿರ್ಮಿಸಲಾಗಿದೆ ಎಂದು ಹಿಂದೂ ಪಕ್ಷಕಾರರು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ ಹಿನ್ನೆಲೆಯಲ್ಲಿ ವಿವಾದವು ನ್ಯಾಯಾಲಯದ ಮೆಟ್ಟಿಲೇರಿತ್ತು.

ಹಿಂದೂ ದೈವ ಭಗವಾನ್ ಶ್ರೀ ಕೃಷ್ಣ ವಿರಾಜಮಾನ್ ಮತ್ತು ಕೆಲವು ಹಿಂದೂ ಭಕ್ತರ ಪರವಾಗಿ ಸಿವಿಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ. ದೇವಾಲಯವಿದ್ದ ಸ್ಥಳದಿಂದ ಮಸೀದಿಯನ್ನು ತೆರವುಗೊಳಿಸಬೇಕು ಎನ್ನುವುದು ಅರ್ಜಿದಾರರ ಬೇಡಿಕೆಯಾಗಿದೆ.

Kannada Bar & Bench
kannada.barandbench.com