ಕನ್ನಡ ಕಾನೂನು ನಿಘಂಟಿಗಾಗಿ ತಜ್ಞರ ಸಮಿತಿ ರಚಿಸಿ, ತೀರ್ಪುಗಳನ್ನು ಅನುವಾದಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ

ತೀರ್ಪುಗಳನ್ನು ಕನ್ನಡದಲ್ಲಿ ತರ್ಜುಮೆಗೊಳಿಸುವ ವ್ಯವಸ್ಥೆಯಾಗಬೇಕು. ಅವುಗಳನ್ನು ಎಲ್ಲಾ ನ್ಯಾಯಾಲಯಗಳ ಗ್ರಂಥಾಲಯಗಳಿಗೆ ಕಳುಹಿಸಬೇಕು ಎಂದರು.
ಕನ್ನಡ ಕಾನೂನು ನಿಘಂಟಿಗಾಗಿ ತಜ್ಞರ ಸಮಿತಿ ರಚಿಸಿ, ತೀರ್ಪುಗಳನ್ನು ಅನುವಾದಿಸಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ

ಕನ್ನಡ ಕಾನೂನಿಗೆ ಸಂಬಂಧಿಸಿದ ನಿಘಂಟು ಸಿದ್ಧಪಡಿಸಲು ತಜ್ಞರ ಸಮಿತಿ ರಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯದ ವಿವಿಧ ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರಿಗೆ  2019-20 ಮತ್ತು 2020-21ನೇ ಸಾಲಿನ ʼನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿʼ ಪ್ರದಾನ ಮಾಡಿ  ಅವರು ಮಾತನಾಡಿದರು.

ನಿತ್ಯ ನ್ಯಾಯಾಲಯದಲ್ಲಿ ಕನ್ನಡದ ಬಳಕೆಯಾಗುವಂತಾಗಬೇಕಾದರೆ ಕನ್ನಡ ಕಾನೂನು ನಿಘಂಟನ್ನು ಸಿದ್ಧಪಡಿಸುವ ತಜ್ಞರ ಸಮಿತಿ ರಚಿಸಬೇಕು. ಸಮಾನಾಂತರ ಕನ್ನಡ ಶಬ್ದಗಳು ರೂಢಿಗೆ ಬಂದರೆ ಅವುಗಳನ್ನು ಬಳಸಲು ನ್ಯಾಯಾಧೀಶರಿಗೆ ಅನುಕೂಲವಾಗಲಿದೆ. ಹಲವಾರು ಇಂಗ್ಲಿಷ್ ಶಬ್ದಗಳಿಗೆ ನೇರವಾದ ಕನ್ನಡದ ಪದಗಳಿಲ್ಲ. ಮಾತೃಭಾಷೆಯಲ್ಲಿ ತೀರ್ಪು ಪ್ರಕಟಿಸುವ ಅವಶ್ಯಕತೆ ಇದೆ ಎಂದರು.

ನಾನು ವಕೀಲ ಅಲ್ಲ ಆದರೆ ನ್ಯಾಯವಾದಿಯ ಮಗ. ಹತ್ತಿರದಿಂದ ಈ ವೃತ್ತಿಯನ್ನು ಕಂಡಿದ್ದೇನೆ. ನಮ್ಮ ತಂದೆಯವರ ಬಳಿ  28 ಕಿರಿಯ ವಕೀಲರಿದ್ದರು. ಮೊದಲು ಜನರು ಬಹಳ ಮುಗ್ಧರಿದ್ದರು. ಅವರು ವಕೀಲರು ಏನು ಹೇಳಿದರೂ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಪ್ರಕರಣಗಳ ತೀರ್ಪು ಕನ್ನಡದಲ್ಲಿ ಬಾರದಿದ್ದರೆ ಎಷ್ಟೊ ಸಮಸ್ಯೆಗಳಾಗುತ್ತವೆ. ತೀರ್ಪುಗಳನ್ನು ಕನ್ನಡದಲ್ಲಿ ತರ್ಜುಮೆಗೊಳಿಸುವ ವ್ಯವಸ್ಥೆಯಾಗಬೇಕು. ಅವುಗಳನ್ನು ಎಲ್ಲಾ ನ್ಯಾಯಾಲಯಗಳ  ಗ್ರಂಥಾಲಯಗಳಿಗೆ ಕಳುಹಿಸಬೇಕು ಎಂದರು. ಕನಿಷ್ಠ ಪಕ್ಷ ತರ್ಜುಮೆಯಾದ ತೀರ್ಪು ಗಳನ್ನು ನೋಡಿಕೊಳ್ಳುವ ಅವಕಾಶವಿರಬೇಕು ಎಂದು ತಿಳಿಸಿದರು.  

ಹೀಗೆ ಮಾಡಿದಾಗ ನ್ಯಾಯ ಸುಲಭವಾಗಿ ದೊರೆಯುವ ವ್ಯವಸ್ಥೆಯಾಗುತ್ತದೆ. ಇಂದಿನ ಕಾಲದಲ್ಲಿ ತೀರ್ಪುಗಳ ಅರ್ಥೈಸುವಿಕೆ ಬಹಳ ಕಷ್ಟ.  ಆಡಲಿತಗಾರರಿಗೂ ಕಾನೂನಿನ ಅರಿವು ಅಗತ್ಯವಿದೆ. ಪ್ರಾಥಮಿಕ ಮಾಹಿತಿ ಇದ್ದರೆ ನ್ಯಾಯ ನೀಡಲು ಸಾಧ್ಯ. ನ್ಯಾಯ ದಾನ ತೀರ್ಪಿನಿಂದ ಪ್ರಾರಂಭವಾಗಿ, ಕಕ್ಷಿದಾರನಿಗೆ ಮುಟ್ಟಿದಾಗ ಪೂರ್ಣವಾಗುತ್ತದೆ ಎಂದರು.

Also Read
[ಕನ್ನಡ ಕಡ್ಡಾಯ] ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಹೈಕೋರ್ಟ್‌ ಆದೇಶ

ತೀರ್ಪು, ಅಭಿಪ್ರಾಯಗಳ ವ್ಯತ್ಯಾಸ ಗೊತ್ತಿರಬೇಕು. ಅದಕ್ಕಾಗಿ ತರಬೇತಿ ಅಗತ್ಯವಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿದಿದ್ದರೆ,  ನ್ಯಾಯದ ಬಗ್ಗೆ ನಂಬಿಕೆ ಉಳಿದಿದ್ದರೆ,  ನಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇದ್ದರೆ ಅದು ನ್ಯಾಯಾಂಗ ವ್ಯವಸ್ಥೆಯ ಮೇಲೆ ಮಾತ್ರ. ಅಂತರರಾಷ್ಟ್ರೀಯ ಮಟ್ಟದ ನ್ಯಾಯಾಂಗ ವ್ಯವಸ್ಥೆ ಇಲ್ಲಿ  ಇರುವುದರಿಂದ  ವಿದೇಶಿ ಹೂಡಿಕೆದಾರರು  ಇಲ್ಲಿಗೆ ಬರುತ್ತಾರೆ. ನಮ್ಮ ದೇಶದ ಪ್ರಗತಿಯಲ್ಲಿ ನ್ಯಾಯಾಂಗದ ಕೊಡುಗೆ ಬಹಳ ಇದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವಿಚಾರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಸ್ಥಿರತೆಯನ್ನು ತಂದು ಸುಸ್ಥಿರ ಬೆಳವಣಿಗೆಗೆ ನ್ಯಾಯಾಂಗ ಕೊಡುಗೆ ನೀಡುತ್ತಿದೆ ಎಂದು ವಿವರಿಸಿದರು.

ಶಿಕ್ಷಣದಲ್ಲಿ ಕನ್ನಡದ ಬಗ್ಗೆ ಕರ್ನಾಟಕ ಸರ್ಕಾರ ಹಲವಾರು ಕಾನೂನು ಗಳನ್ನು ರೂಪಿಸಿದೆ. ಹಲವಾರು ಸುತ್ತೋಲೆ ಹೊರಡಿಸಿದೆ. ಆದರೂ ಸರ್ವೋಚ್ಚ ನ್ಯಾಯಾಲಯ ಶಿಕ್ಷಣ ದಲ್ಲಿ ಸ್ವಾತಂತ್ರ್ಯವಿರಬೇಕು ಎಂದಿರುವ ಕಾರಣ ಸಂಪೂರ್ಣವಾಗಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ.. ಕನ್ನಡ ಕಾಯುವ,ಉಳಿಸುವ, ಬೆಳೆಸುವ ಸಮಗ್ರ ಕನ್ನಡದ ವಿಧೇಯಕವನ್ನು ಈಗಾಗಲೇ ವಿಧಾನಮಂಡಲದಲ್ಲಿ ಮಂಡಿಸಿದ್ದು, ಬರುವ ದಿನಗಳಲ್ಲಿ ಅನುಮೋದಿಸಿ, ಎಲ್ಲಾ ರಂಗಗಳಲ್ಲಿ ಕಾನೂತಾತ್ಮಕವಾಗಿ ಕನ್ನಡದ ಅನುಷ್ಠಾನಕ್ಕೆ ಪ್ರಥಮ ಬಾರಿಗೆ ಪ್ರಯತ್ನ ಮಾಡಲಾಗುತ್ತಿದೆ. ನ್ಯಾಯಾಂಗದಲ್ಲಿ ಕನ್ನಡ ಸ್ವಲ್ಪ ಕಷ್ಟಸಾಧ್ಯ. ಕನ್ನಡದಲ್ಲಿ ತೀರ್ಪು ನೀಡುವುದು ಸುಲಭದ ಮಾತಲ್ಲ. ಆದರೆ ಕನ್ನಡ ದಲ್ಲಿ ತೀರ್ಪು ನೀಡಿರುವುದು ಅಭೂತಪೂರ್ವ ಸಾಧನೆ ಎಂದು ಪ್ರಶಸ್ತಿ ಪುರಸ್ಕೃತರನ್ನು ಅವರು ಅಭಿನಂದಿಸಿದರು. ಕನ್ನಡ ಅರಿವಿನಿಂದ ಮಾಡಿರುವ ಈ ಕಾರ್ಯ ವಿಸ್ತರಿಸಬೇಕು. ಉಚ್ಛ ನ್ಯಾಯಾಲಯದಲ್ಲಿಯೂ ಇದಾಗಬೇಕು ಎಂಬ ಅಪೇಕ್ಷೆ ಕನ್ನಡಿಗರದ್ದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಜಿ. ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಸಾಹಿತಿ ಪ್ರೊ.ಮಲ್ಲಪುರಂ ವೆಂಕಟೇಶ್,  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಡಾ. ಎನ್ ಮಂಜುಳಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com