ಕೆಳ ಹಂತದ ನ್ಯಾಯಾಲಯಗಳಂತೆ ಉನ್ನತ ನ್ಯಾಯಾಂಗದಲ್ಲೂ ಮೀಸಲಾತಿ ಸೌಲಭ್ಯ ಜಾರಿಗೆ ಬರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಕೀಲರ ರಕ್ಷಣಾ ಕಾಯಿದೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಮುಂದಿನ ಅಧಿವೇಶನದಲ್ಲಿ ಅದನ್ನು ಅಂಗೀಕರಿಸುತ್ತೇವೆ. ಇದರ ಬಗ್ಗೆ ಯಾರೂ ಸಂಶಯಪಡಬೇಕಾದ ಅಗತ್ಯ ಇಲ್ಲ ಎಂದ ಸಿಎಂ.
ಕೆಳ ಹಂತದ ನ್ಯಾಯಾಲಯಗಳಂತೆ ಉನ್ನತ ನ್ಯಾಯಾಂಗದಲ್ಲೂ ಮೀಸಲಾತಿ ಸೌಲಭ್ಯ ಜಾರಿಗೆ ಬರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೆಳ ನ್ಯಾಯಾಲಯಗಳಲ್ಲಿ ಮೀಸಲಾತಿ ಇದೆ. ಮೇಲ್ಮಟ್ಟದ ನ್ಯಾಯಾಲಯದಲ್ಲಿ ಮೀಸಲಾತಿ ಇಲ್ಲ. ಅಲ್ಲಿ ಮೀಸಲಾತಿ ಜಾರಿಯಾದರೆ ಹೆಚ್ಚು ಉಪಯುಕ್ತ ರೀತಿಯಲ್ಲಿ ನ್ಯಾಯದಾನ ನೀಡಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ವತಿಯಿಂದ ಮೈಸೂರಿನಲ್ಲಿ ಶನಿವಾರ ನಡೆದ ಹತ್ತನೇ ರಾಜ್ಯ ವಕೀಲರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ, ಎಷ್ಟೇ ಕಷ್ಟವಾದರೂ ಸಂವಿಧಾನವನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದ ಅವರು ಈ ನಿಟ್ಟಿನಲ್ಲಿ ವಕೀಲರ ಜವಾಬ್ದಾರಿ ಹೆಚ್ಚಿದೆ ಎಂಬುದಾಗಿ ತಿಳಿಸಿದರು.

"ತಳವರ್ಗ, ಆರ್ಥಿಕವಾಗಿ ಶಕ್ತಿ ಇಲ್ಲದ ಜನರ ಬಗ್ಗೆ ಕನಿಕರದ ಬದಲಿಗೆ ಸಹಾಯ ಮಾಡುವ ಮನಸ್ಸು ಇರಬೇಕು. ಸಮಾಜದಲ್ಲಿ ಇರುವ ಅಸಮಾನತೆ ತೊಡೆದುಹಾಕಲು ಪ್ರಯತ್ನ ಮಾಡಬೇಕು. ಅಂಬೇಡ್ಕರ್ ಅವರು ಮಾಡಿದ ಐತಿಹಾಸಿಕ ಭಾಷಣವನ್ನು ಎಲ್ಲರೂ ಓದಿದರೆ ಸಾಮಾಜಿಕ ಜವಾಬ್ದಾರಿ ಹೆಚ್ಚಾಗುತ್ತದೆ. ಸಮಾಜ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಮಾಡಿದೆ ಎಂದು ಕೇಳಿಕೊಳ್ಳುವುದು ಮುಖ್ಯ" ಎಂದು ಅವರು ಹೇಳಿದರು.

ಸಂವಿಧಾನ ರೂಪುಗೊಳ್ಳುವ ಮುನ್ನ ಮತ್ತು ಬ್ರಿಟಿಷರ ಕಾಲದಲ್ಲಿ ಇದ್ದುದಕ್ಕಿಂತಲೂ ಭಿನ್ನವಾದ ನ್ಯಾಯದಾನ ವ್ಯವಸ್ಥೆ ಸ್ವಾತಂತ್ರ್ಯ ದೊರೆತ ನಂತರ ಮತ್ತು ಸಂವಿಧಾನ ರಚನೆಯಾದ ನಂತರ ರೂಪುಗೊಂಡಿತು. ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ 14ನೇ ವಿಧಿಯಂತೆ ಕಾನೂನಿನೆದುರು ಎಲ್ಲರೂ ಸಮಾನರು, ಕಾನೂನಿನ ಎದುರು ಎಲ್ಲರಿಗೂ ಸಮಾನ ರಕ್ಷಣೆ ಎಂಬುದನ್ನು ಒಪ್ಪಿಕೊಂಡಿದ್ದೇವೆ ಎಂದು ಅವರು ಹೇಳಿದರು.

ತಾವು ವಕೀಲರಾಗಿದ್ದ ಕಾಲವನ್ನು ಸ್ಮರಿಸಿದ ಅವರು “ಎಲ್ಲಾ ಮೇಲ್ವರ್ಗದವರೇ ವಕೀಲರಾಗಿದ್ದರು. ಕೆಳಜಾತಿಯವರಿಗೆ ವಕೀಲರಾಗುವುದು ಬೇಡ ಎಂದೂ ಹೇಳುತ್ತಿದ್ದರು. ಸ್ವತಃ ನನಗೇ ಇದರ ಅನುಭವವಾಗಿದೆ. ಶಾನುಭೋಗರೊಬ್ಬರು ಮಗನನ್ನು ಕಾನೂನು ಕಲಿಸಬೇಡ ಎಂದು ನನ್ನ ತಂದೆಗೆ ಹೇಳಿದ್ದರು. ಅವರ ಮಾತು ಕೇಳಿ ಕಾನೂನು ಓದದೇ ಹೋಗಿದ್ದರೆ ಇಂದು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ" ಎಂದರು.

"ಪಟ್ಟಭದ್ರ ಹಿತಾಸಕ್ತಿಗಳು ಎಲ್ಲ ಸಂದರ್ಭದಲ್ಲಿ ಎಲ್ಲಾ ಕಾಲದಲ್ಲೂ ಇದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ದಲಿತ ಸಮುದಾಯದಿಂದ ಬಂದವರು. ಅವರಿಗೆ ಬರೋಡಾ ಮಹಾರಾಜರು ವಿದೇಶಕ್ಕೆ ತೆರಳಲು ಅವಕಾಶ ನೀಡದೆ ಹೋಗಿದ್ದರೆ, ಇಂದು ಸಂವಿಧಾನ ಸಿಗುತ್ತಿರಲಿಲ್ಲ. ಸಂವಿಧಾನವನ್ನು ವಿರೋಧಿಸುವವರೂ ಇದ್ದಾರೆ  ಎಳೆ ವಯಸ್ಸಿನಲ್ಲಿ ಸಂವಿಧಾನದ ವಿರುದ್ಧ ದಾರಿತಪ್ಪಿಸುವವರಿದ್ದಾರೆ.  ಬಡವರಿಗೆ , ದಲಿತರಿಗೆ, ಅವಕಾಶ ವಂಚಿತರಿಗೆ ನ್ಯಾಯ ಸಿಗಬೇಕು. ಸಂವಿಧಾನದ ವಿರುದ್ಧ ಇರುವವರಿಂದ ಬಡವರಿಗೆ ರಕ್ಷಣೆ ಸಿಗಲು ಸಾಧ್ಯವೇ? ಈ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಬೇಕಿದೆ" ಎಂದರು.

ಶೀಘ್ರವೇ ವಕೀಲರ ರಕ್ಷಣಾ ಕಾಯಿದೆ ಜಾರಿ

ವಕೀಲರ ರಕ್ಷಣಾ ಕಾಯಿದೆ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಚಿನ ಅಧಿವೇಶನದಲ್ಲಿ ಇದನ್ನು ಜಾರಿಗೆ ತರಬೇಕೆಂದು ಮನಸ್ಸು ಮಾಡಿದ್ದೆ. ಆದರೆ ಕಾರಣಾಂತರಗಳಿಂದ ಮೊದಲನೇ ಅಧಿವೇಶನದಲ್ಲಿ ಇದನ್ನು ಜಾರಿಗೆ ತರಲಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಅದನ್ನು ಅಂಗೀಕರಿಸುತ್ತೇವೆ. ಇದರ ಬಗ್ಗೆ ಯಾರೂ ಸಂಶಯಪಡಬೇಕಾದ ಅಗತ್ಯ ಇಲ್ಲ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ, ರಾಜ್ಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ, ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ, ಕಾನೂನು ಮತ್ತು ಸಂಸದೀಯ ಸಚಿವ ಎಚ್‌ ಕೆ ಪಾಟೀಲ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿಶಾಲ್‌ ರಘು ಮತ್ತಿತರರು ಸಮಾವೇಶದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಎರಡು ದಿನಗಳ ಕಾಲ ನಡೆಯಲಿದೆ.

Related Stories

No stories found.
Kannada Bar & Bench
kannada.barandbench.com