ಮೇ 10ರಿಂದ ಹದಿನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿ: ಮುಖ್ಯಮಂತ್ರಿ ಘೋಷಣೆ

ಹೊಸ ಮಾರ್ಗಸೂಚಿ ಪ್ರಕಾರ ಬೆಳಗ್ಗೆ ಆರರಿಂದ ಹತ್ತುಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ. ಹಾಲಿನ ಬೂತ್ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ತೆರೆದಿರುತ್ತದೆ.
ಮೇ 10ರಿಂದ ಹದಿನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿ: ಮುಖ್ಯಮಂತ್ರಿ ಘೋಷಣೆ

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ಇದೇ ಮೇ 10ರಿಂದ ಹದಿನೈದು ದಿನಗಳ ಕಾಲ ರಾಜ್ಯದಲ್ಲಿ ಲಾಕ್‌ಡೌನ್‌ ಮಾದರಿಯ ಕಠಿಣ ಕ್ರಮವನ್ನು ಘೋಷಿಸಲಾಗಿದೆ. ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ ಬಳಿಕ ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಈ ಕಠಿಣ ಕ್ರಮದ ಕುರಿತು ಅಧಿಕೃತ ನಿರ್ಧಾರ ಪ್ರಕಟಿಸಿದರು. ಆದರೆ, ಅಧಿಕೃತವಾಗಿ ಸರ್ಕಾರ ಈ ಕಠಿಣ ನಿರ್ಬಂಧವನ್ನು ಲಾಕ್‌ಡೌನ್‌ ಎಂದು ಹೆಸರಿಸಲು ಹೋಗಿಲ್ಲ.

ಮೇ 10ರ ಬೆಳಿಗ್ಗೆ 6 ಗಂಟೆಯಿಂದ ಮೇ 24ರ ಬೆಳಿಗ್ಗೆ 6 ಗಂಟೆಯವರೆಗೆ ಈ ಕಠಿಣ ನಿರ್ಬಂಧ ಘೋಷಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವುದು ಮತ್ತು ರೋಗಿಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರಿದೆ.

ಕೋವಿಡ್‌ ತಡೆಯುವ ನಿಟ್ಟಿನಲ್ಲಿ ಏಪ್ರಿಲ್‌ 27ರಿಂದ ಹದಿನಾಲ್ಕು ದಿನಗಳ ಕಾಲ ಸರ್ಕಾರ ಕೋವಿಡ್‌ ಕರ್ಫ್ಯೂ ಹೇರಿತ್ತು. ಆದರೆ ಕರ್ಫ್ಯೂ ನಿರೀಕ್ಷಿತ ಫಲ ನೀಡದ ಕಾರಣ ಕಠಿಣ ನಿಯಮ ಅಥವಾ ಲಾಕ್‌ಡೌನ್‌ ಮಾಡುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಶುಕ್ರವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ತಿಳಿಸಿದ್ದರು. ಅದಾದ ಕೆಲ ಗಂಟೆಗಳಲ್ಲಿ ಶುಕ್ರವಾರ ಸಂಜೆಯೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲಾಕ್‌ಡೌನ್‌ ಮಾದರಿಯ ಕಠಿಣ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.

ಮಾರ್ಗಸೂಚಿಯ ವಿವರಗಳು ಹೀಗಿವೆ:

  • ಬೆಳಿಗ್ಗೆ ಆರರಿಂದ ಹತ್ತುಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ. ಹಾಲಿನ ಬೂತ್‌ ಬೆಳಿಗ್ಗೆ ಆರರಿಂದ ಸಂಜೆ ಆರರವರೆಗೆ ತೆರೆದಿರುತ್ತದೆ. ತಳ್ಳುಗಾಡಿಯಲ್ಲಿ ತರಕಾರಿ ಮಾರಲು ಅವಕಾಶ.

  • ಕೈಗಾರಿಕೆ, ಹೋಟೆಲ್‌, ಬಾರ್‌ ಪಬ್‌ಗಳಿಗೆ ಸಂಪೂರ್ಣ ನಿಷೇಧ. ಪಾರ್ಸೆಲ್‌ ತೆಗೆದುಕೊಳ್ಳಲು ಅನುಮತಿ.

  • ಅಂತರಜಿಲ್ಲಾ ಸಂಚಾರಕ್ಕೆ ನಿರ್ಬಂಧ.

  • ಸರ್ಕಾರಿ ಕಚೇರಿಗಳಿಗೆ ಭಾಗಶಃ ಅವಕಾಶ.

  • ರಸ್ತೆ ಕಾಮಗಾರಿ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಯಾವುದೇ ಅಡ್ಡಿ ಇಲ್ಲ.

  • ವಿವಾಹ ಕಾರ್ಯಕ್ರಮಗಳಲ್ಲಿ ಐವತ್ತಕ್ಕಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ.

  • ರೈಲು, ವಿಮಾನ ಸಂಚಾರಕ್ಕೆ ನಿರ್ಬಂಧ ಇಲ್ಲ.

  • ಸರಕು ಸಾಗಣೆಗೆ ಇಲ್ಲ ನಿರ್ಬಂಧ.

ಸುದ್ದಿಗೋಷ್ಠಿ ವೇಳೆ ಯಡಿಯೂರಪ್ಪ “ವಲಸೆ ಕಾರ್ಮಿಕರು ತಮ್ಮ ಹಳ್ಳಿಗಳಿಗೆ ಮರಳಬಾರದು. ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಯಂತಹ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಕಾರ್ಮಿಕರು ಭಯಪಡುವ ಅಗತ್ಯವಿಲ್ಲ ಎಂದರು. ಲಾಕ್‌ಡೌನ್‌ ಪರಿಹಾರ ಕುರಿತು ಶೀಘ್ರವೇ ಚರ್ಚೆ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದರು.

ಲಾಕ್‌ಡೌನ್‌ ಘೋಷಣೆಯಾಗುವ ಹಿನ್ನೆಲೆಯಲ್ಲಿ ಬೆಂಗಳೂರು ತೊರೆಯುತ್ತಿರುವ ಜನರು ನಗರದ ವಿವಿಧ ರೈಲು ನಿಲ್ದಾಣಗಳಲ್ಲಿ ಜಮಾಯಿಸಿದ್ದು ಕಂಡುಬಂದಿತು. ಬಸ್‌ ಸೇರಿದಂತೆ ಎಲ್ಲಾ ಬಗೆಯ ಸಾರಿಗೆ ಸೌಕರ್ಯವನ್ನು ಈಗಾಗಲೇ ನಿರಾಕರಿಸಿರುವುದರಿಂದ ಜನ ಹೊರ ಊರುಗಳಿಗೆ ತೆರಳಲು ರೈಲು ಮಾರ್ಗವನ್ನೇ ಅವಲಂಬಿಸಬೇಕಿದೆ. ಮೇ 8ರಿಂದ ಕೇರಳದಲ್ಲಿ ಕೂಡ ಲಾಕ್‌ಡೌನ್‌ ಜಾರಿಗೆ ತರಲು ಅಲ್ಲಿನ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿತ್ತು.

ಕೋವಿಡ್‌ ಎರಡನೇ ಅಲೆ ವೇಳೆ ಸಂಪೂರ್ಣ ಲಾಕ್‌ಡೌನ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಲವು ತೋರಿರಲಿಲ್ಲ. ಬದಲಿಗೆ ಈ ಕುರಿತು ನಿರ್ಧಾರ ಕೈಗೊಳ್ಳುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟದ್ದು ಎಂದು ಅವರು ಇತ್ತೀಚೆಗೆ ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com