ಅರ್ಧದಲ್ಲೇ ಕೋರ್ಸ್ ತೊರೆಯುವವರ ಶುಲ್ಕವನ್ನು ಕೋಚಿಂಗ್ ಸಂಸ್ಥೆಗಳು ಮರುಪಾವತಿಸಬೇಕು: ಕೇರಳ ಗ್ರಾಹಕ ವೇದಿಕೆ

ಶಿಕ್ಷಣ ಕ್ಷೇತ್ರದಲ್ಲಿ ಗ್ರಾಹಕರಿಗೆ ಅನ್ಯಾಯವಾಗುವಂತಹ ನಿಯಮ ಮತ್ತು ಷರತ್ತು ವಿಧಿಸದೆ ಈ ಸಂಸ್ಥೆಗಳು ನ್ಯಾಯಸಮ್ಮತವಾಗಿರುವುದು ಅತ್ಯಗತ್ಯ ಎಂದು ಗ್ರಾಹಕ ವೇದಿಕೆ ಬುದ್ಧಿಮಾತು ಹೇಳಿದೆ.
ಗ್ರಾಹಕ ರಕ್ಷಣೆ
ಗ್ರಾಹಕ ರಕ್ಷಣೆ

ಶೈಕ್ಷಣಿಕ ಕೋಚಿಂಗ್‌ ಸಂಸ್ಥೆಗಳು ಒದಗಿಸುವ ಸೇವೆ ಬಗ್ಗೆ ಅತೃಪ್ತರಾದ ವಿದ್ಯಾರ್ಥಿಗಳು ಅರ್ಧದಲ್ಲೇ ಕೋರ್ಸ್‌ ತೊರೆದರೆ ಆ ವಿದ್ಯಾರ್ಥಿಗಳು ಪಾವತಿಸಿದ್ದ ಶುಲ್ಕವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಹಕ್ಕು ಕೋಚಿಂಗ್ ಸಂಸ್ಥೆಗಳಿಗೆ ಇಲ್ಲ ಎಂದು ಕೇರಳದ ಗ್ರಾಹಕ ವೇದಿಕೆಯೊಂದು ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಜೆಬಾ ಸಲೀಮ್ ಮತ್ತು ವಿಎಲ್‌ಸಿಸಿಿ ಹೆಲ್ತ್‌ಕೇರ್‌ ಲಿಮಿಟೆಡ್ ನಡುವಣ ಪ್ರಕರಣ].

ಅನೈತಿಕ ಅಭ್ಯಾಸಗಳಲ್ಲಿ ತೊಡಗಿರುವ ಮತ್ತು ವಿದ್ಯಾರ್ಥಿಗಳ ಮತ್ತವರ ಕುಟುಂಬಗಳನ್ನು ಶೋಷಿಸುವ ನಿರ್ಲಜ್ಜ ಕೋಚಿಂಗ್ ಸಂಸ್ಥೆಗಳ ಬಗ್ಗೆ ಎರ್ನಾಕುಲಂನ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕಳವಳ ವ್ಯಕ್ತಪಡಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ಗ್ರಾಹಕರಿಗೆ ಅನ್ಯಾಯಕರ ನಿಯಮ ಮತ್ತು ಷರತ್ತು ವಿಧಿಸದೆ ಈ ಸಂಸ್ಥೆಗಳು ನ್ಯಾಯಸಮ್ಮತವಾಗಿರುವುದು ಅತ್ಯಗತ್ಯ ಎಂದು ಅಧ್ಯಕ್ಷರಾದ ಡಿ ಬಿ ಬಿನು, ಸದಸ್ಯರಾದ ವಿ ರಾಮಚಂದ್ರನ್, ಶ್ರೀವಿದ್ಯಾ ಟಿ.ಎನ್ ಅವರನ್ನೊಳಗೊಂಡ ಪೀಠ ಹೇಳಿತು. ಶಿಕ್ಷಣ ಕ್ಷೇತ್ರದಲ್ಲಿ ಗ್ರಾಹಕರ ಮೇಲೆ ಅನ್ಯಾಯದ ನಿಯಮಗಳು ಮತ್ತು  ಷರತ್ತುಗಳನ್ನು ವಿಧಿಸುವುದನ್ನು ತಡೆಯುವುದು ಅತ್ಯಗತ್ಯ ಎಂದು ಒತ್ತಿಹೇಳಿತು. 

"ಶಿಕ್ಷಣ ಕ್ಷೇತ್ರದಲ್ಲಿ, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಅನೇಕ ಕೋಚಿಂಗ್ ಸಂಸ್ಥೆಗಳು ಅಮೂಲ್ಯವಾದ ಸೇವೆಗಳನ್ನು ನೀಡುತ್ತಿದ್ದರೂ, ದುರದೃಷ್ಟವಶಾತ್ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳನ್ನು ಶೋಷಿಸುವ ಅನೈತಿಕ ಅಭ್ಯಾಸಗಳಲ್ಲಿ ತೊಡಗಿರುವ ನಿರ್ಲಜ್ಜ ಕೋಚಿಂಗ್ ಸಂಸ್ಥೆಗಳ ಉಪಸ್ಥಿತಿಯೂ ಇದೆ. ಒದಗಿಸಿದ ಸೇವೆಗಳ ಬಗ್ಗೆ ಅತೃಪ್ತಿಯಿಂದಾಗಿ ಕೋರ್ಸ್ ಅನ್ನು ಅರ್ಧದಲ್ಲೇ ಬಿಡಲು ಆಯ್ಕೆ ಮಾಡುವ ವಿದ್ಯಾರ್ಥಿಗಳ ಶುಲ್ಕವನ್ನು ಉಳಿಸಿಕೊಳ್ಳುವ ಹಕ್ಕನ್ನು ಈ ಸಂಸ್ಥೆಗಳು ಹೊಂದಿರಬಾರದು. ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಈ ಸಂಸ್ಥೆಗಳು ಅನ್ಯಾಯದ ನಿಯಮಗಳು ಮತ್ತು ಷರತ್ತುಗಳನ್ನು ವಿಧಿಸುವುದನ್ನು ತಡೆಯುವುದು ಅತ್ಯಗತ್ಯ. ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅರ್ಹ ರೀತಿಯ ಗೌರವ ಮತ್ತು ಪ್ರಾಮಾಣಿಕತೆಯಿಂದ ನೋಡಿಕೊಳ್ಳಲಾಗುತ್ತದೆ ಎಂದು ಖಾತರಿಪಡಿಸಲು ಗ್ರಾಹಕರನ್ನು, ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ರಕ್ಷಿಸುವುದು ಅತ್ಯಂತ ಮಹತ್ವದ್ದಾಗಿದೆ" ಎಂದು ನ್ಯಾಯಪೀಠ ಹೇಳಿದೆ.

ತೂಕ ಇಳಿಸುವ ಮತ್ತು ಸೌಂದರ್ಯ ಪರಿಹಾರಗಳ ತರಬೇತಿ ಸಂಸ್ಥೆಯಾದ ಕೊಚ್ಚಿಯ ವಿಎಲ್‌ಸಿಸಿ ಸಂಸ್ಥೆಯ ಮಾಜಿ ವಿದ್ಯಾರ್ಥಿನಿ (ದೂರುದಾರ) ಸಲ್ಲಿಸಿದ್ದ ಪ್ರಕರಣದ ವಿಚಾರಣೆ ವೇಳೆ ವೇದಿಕೆ ಈ ವಿಚಾರ ತಿಳಿಸಿದೆ.

ದೂರುದಾರೆ ಜನವರಿ 2021ರಲ್ಲಿ ಕಾಸ್ಮೆಟಾಲಜಿ ಕೋರ್ಸ್‌ನಲ್ಲಿ ಅಧ್ಯಯನ ಮಾಡಲು ನೋಂದಾಯಿಸಿಕೊಂಡಿದ್ದರು. ನಂತರ ಅವರು ಉನ್ನತ ಕೋರ್ಸ್‌ ಅಧ್ಯಯನ ಮಾಡುವವರಿದ್ದರು. ಕೋವಿಡ್ -19 ಕಾರಣದಿಂದಾಗಿ, ಭೌತಿಕ ತರಗತಿಗಳು ಅಸ್ತವ್ಯಸ್ತಗೊಂಡವು. ದೂರುದಾರರಿಗೂ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಆನ್‌ಲೈನ್‌ ತರಗತಿಗಳಿಗೆ ಹಾಜರಾದರು.

ಹೆಚ್ಚುವರಿ ಕೋರ್ಸ್‌ಗಳಿಗೆ ಸೇರಲು ಸಂಸ್ಥೆ ತನ್ನನ್ನು ಮನವೊಲಿಸಿತು. ಆದರೆ ತಾನು ಕೋರ್ಸ್‌ಗೆ ಶುಲ್ಕ ಪಾವತಿಸಿದರೂ ತರಗತಿಗಳನ್ನು ನಡೆಸಲಿಲ್ಲ ಎಂದು ಆಕೆ ಆರೋಪಿಸಿದ್ದಾರೆ.

ಶುಲ್ಕ ಮರುಪಾವತಿಸುವಂತೆ ಕೋರಿದರೂ ಸಂಸ್ಥೆ ತನ್ನ ಉತ್ಪನ್ನಗಳನ್ನು ಖರೀದಿಸುವಂತೆ ಸೂಚಿಸಿತು. ಶುಲ್ಕ ಮರಳಿ ಪಡೆಯಲು ಅನೇಕ ವಿಫಲ ಯತ್ನಗಳನ್ನು ನಡೆಸಿದ ಬಳಿಕ ಕಾನೂನು ಸೇವಾ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಲಾಯಿತು. ಆದರೆ ವಿಎಲ್‌ಸಿಸಿ ಸಂಸ್ಥೆ ವಿಚಾರಣೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ 2.79 ಲಕ್ಷ ರೂ ಶುಲ್ಕವನ್ನು ವಿಎಲ್‌ಸಿಸಿ ವಿದ್ಯಾರ್ಥಿನಿಗೆ ಮರುಪಾವತಿಸಬೇಕು ಎಂದು ವೇದಿಕೆ ನಿರ್ದೇಶಿಸಿದೆ. ಮಾನಸಿಕ ಯಾತನೆ, ಅನಾನುಕೂಲತೆ, ದೈಹಿಕ ಕಷ್ಟಗಳು ಮತ್ತು ಸೇವೆಯ ಕೊರತೆಗಾಗಿ ದೂರುದಾರೆಗೆ ಹೆಚ್ಚುವರಿಯಾಗಿ 50,000 ರೂ. ಪರಿಹಾರ ಹಾಗೂ ದಾವೆ ವೆಚ್ಚದ ರೂಪದಲ್ಲಿ 10,000 ರೂ.ಗಳನ್ನು ಪಾವತಿಸುವಂತೆ ಸಂಸ್ಥೆಗೆ ನಿರ್ದೇಶನ ನೀಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Zeba Salim v. VLCC.pdf
Preview

Related Stories

No stories found.
Kannada Bar & Bench
kannada.barandbench.com