ಎಫ್‌ಐಆರ್‌ಗೂ ಮುನ್ನ ದಾಖಲೆ ಸಂಗ್ರಹ, ಪ್ರಾಥಮಿಕ ತನಿಖೆ ನಡೆಸುವಿಕೆ ಪಿಸಿ ಕಾಯಿದೆಯ ಉಲ್ಲಂಘನೆ: ಹೈಕೋರ್ಟ್‌

"ಅಮಾಯಕ ಅಧಿಕಾರಿಗಳಿಗೆ ಕಿರುಕುಳ ಉಂಟು ಮಾಡುವ ಪ್ರಾಸಿಕ್ಯೂಷನ್‌ಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಈ ರಕ್ಷಣಾ ಕವಚವನ್ನು ತಪ್ಪಿತಸ್ಥ ಸರ್ಕಾರಿ ನೌಕರನಿಗೆ ಕಲ್ಪಿಸಲಾಗುವುದಿಲ್ಲ" ಎಂದಿರುವ ನ್ಯಾಯಾಲಯ.
Karnataka HC and Lokayukta
Karnataka HC and Lokayukta
Published on

ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಅಡಿ ಎಫ್‌ಐಆರ್‌ ದಾಖಲಿಸುವ ಮುನ್ನವೇ ಲೋಕಾಯುಕ್ತ ಪೊಲೀಸರು ದಾಖಲೆಗಳ ಸಂಗ್ರಹ ಹಾಗೂ ಪ್ರಾಥಮಿಕ ತನಿಖೆ ನಡೆಸುವುದು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ತನಿಖಾಧಿಕಾರಿ ವಿಚಾರಣೆ/ ತನಿಖೆ ನಡೆಸುವುದನ್ನು ಕಡ್ಡಾಯಗೊಳಿಸಿರುವ ಕಾಯಿದೆ ಸೆಕ್ಷನ್‌ 17ಎಯ ಸ್ಪಷ್ಟ ಉಲ್ಲಂಘನೆ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಮಹತ್ವದ ತೀರ್ಪು ನೀಡಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಪಂಚಾಯಿತಿ ಕಚೇರಿಯ 2015-16ನೇ ಸಾಲಿನಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಎಸ್‌ ಲಕ್ಷ್ಮಿ ಸೇರಿದಂತೆ ಇತರೆ ಇಬ್ಬರು ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

“ನಿಷ್ಪ್ರಯೋಜಕ/ಕಿರುಕುಳ ನೀಡುವಂತಹ ಪ್ರಾಸಿಕ್ಯೂಷನ್‌ ಹಾಗೂ ದೂರುಗಳ ತನಿಖೆಯಿಂದ ಸರ್ಕಾರಿ ನೌಕರಿಗೆ ಸೆಕ್ಷನ್‌ 17ಎ ರಕ್ಷಣೆ ಕಲ್ಪಿಸುತ್ತದೆ. ಸಾರ್ವಜನಿಕ ಹಿತಾಸಕ್ತಿ ಹಾಗೂ ಆರೋಪಿತ ಅಧಿಕಾರಿಗಳಿಗೆ ಕಾನೂನಿನಲ್ಲಿ ಲಭ್ಯವಿರುವ ರಕ್ಷಣಾ ಕ್ರಮವನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ ಸರ್ಕಾರಿ ಅಧಿಕಾರಿಗಳ ವಿರುದ್ಧದ ಸುಳ್ಳು ದೂರುಗಳ ಕುರಿತ ವಿಚಾರಣೆ/ತನಿಖೆಯನ್ನು ತಡೆಯಬೇಕಾಗುತ್ತದೆ. ಇಲ್ಲವಾದರೆ ಅಮಾಯಕ ಅಧಿಕಾರಿಗಳಿಗೆ ಕಿರುಕುಳ ಉಂಟು ಮಾಡುವ ಪ್ರಾಸಿಕ್ಯೂಷನ್‌ಗಳು ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಈ ರಕ್ಷಣಾ ಕವಚವನ್ನು ತಪ್ಪಿತಸ್ಥ ಸರ್ಕಾರಿ ನೌಕರನಿಗೆ ಕಲ್ಪಿಸಲಾಗುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

“ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ-1983ರ ಸೆಕ್ಷನ್‌ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಲೋಕಾಯುಕ್ತ ಪೊಲೀಸರು ಅನಾಮಧೇಯ ದೂರು ಆಧರಿಸಿ ಸರ್ಕಾರಿ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸುವ ಹಾಗೂ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವ ಮುನ್ನ ವಿವರವಾದ ಪ್ರಾಥಮಿಕ ತನಿಖೆ ನಡೆಸುವುದು; ಅಧಿಕಾರಿಗಳನ್ನು ವಿಚಾರಣೆಗೆ ಕರೆಯುವುದು ಮತ್ತು ದಾಖಲೆ ಸಂಗ್ರಹಿಸುವುದು; ದಸ್ತಾವೇಜು ನಿರ್ಮಿಸುವುದು ಕಾನೂನು ಬಾಹಿರ ಕ್ರಮ. ಅಂತಹ ಶೋಧನೆಯು ಸೆಕ್ಷನ್‌ 17ಎ ಅನ್ನು ರೂಪಿಸಿದ ಶಾಸಕಾಂಗದ ಉದ್ದೇಶವನ್ನೇ ಕ್ಷುಲ್ಲಕ ಮತ್ತು ನಿಷ್ಪಲಗೊಳಿಸುತ್ತದೆ” ಎಂದು ನ್ಯಾಯಾಲಯ ಅರ್ಥೈಸಿದೆ.

ಹೀಗಾಗಿ, “ಪ್ರಸ್ತುತ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸದೆ ಮತ್ತು ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರು ವಿವರವಾದ ವಿಚಾರಣೆ ಅಥವಾ ತನಿಖೆ ನಡೆಸಿದ್ದಾರೆ. ತನಿಖೆ ಮಾಡಬೇಕಿದ್ದರೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಹೀಗಾಗಿ ಪ್ರಕರಣದಲ್ಲಿ 2023ರ ಜೂನ್‌ 17ರ ಮುನ್ನ ಪೂರ್ವಾನುಮತಿ ಪಡೆಯದೆ ಅರ್ಜಿದಾರರ ವಿರುದ್ಧ ಲೋಕಾಯುಕ್ತ ಪೊಲೀಸರು ನಡೆಸಿರುವ ಎಲ್ಲಾ ಕಾರ್ಯಗಳು ಅನೂರ್ಜಿತವಾಗಲಿದೆ. ಅರ್ಜಿದಾರರ ವಿರುದ್ಧ ಲೋಕಾಯುಕ್ತರು ನಡೆಸಿರುವ ವಿಚಾರಣೆಯನ್ನು ಪ್ರಾಥಮಿಕ ವಿಚಾರಣೆ ಎಂದು ಪರಿಗಣಿಸಲಾಗುವುದಿಲ್ಲ” ಎಂದು ಪೀಠ ಹೇಳಿದೆ.

ಅರ್ಜಿದಾರರ ವಿರುದ್ಧ ಭ್ರಷ್ಟಾಚಾರ ಆರೋಪಗಳಿದ್ದರೆ, ಆ ಬಗ್ಗೆ ತನಿಖೆ ನಡೆಸುವುದು ಅಗತ್ಯ. ಅರ್ಜಿದಾರರ ವಿರುದ್ಧದ ತನಿಖೆಗೆ ಸೆಕ್ಷನ್‌ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಸದ್ಯ ಪೂರ್ವಾನುಮತಿ ದೊರೆತಿದೆ. ಆದ್ದರಿಂದ ಪ್ರಕರಣವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ತನಿಖೆ ನಡೆಸುವ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಗೆ ಮುಕ್ತವಾಗಿರಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರೆ ಲಕ್ಷ್ಮಿ 2015-16ನೇ ಸಾಲಿನಲ್ಲಿ ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಜಿ ಎಸ್‌ ಸುರೇಂದ್ರ ಅವರು 2014-15ನೇ ಸಾಲಿನಲ್ಲಿ ಮುಖ್ಯ ಅಧಿಕಾರಿಯಾಗಿದ್ದರು. ಈ ಇಬ್ಬರ ಅವಧಿಯಲ್ಲಿಯೇ ಎಚ್‌ ಶ್ರೀನಿವಾಸ್‌ ಅವರು ಜ್ಯೂನಿಯರ್‌ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಅವರು ಆ ಹುದ್ದೆಯಿಂದ ಬೇರೆಡೆಗೆ ವರ್ಗಾವಣೆಯಾದ ನಂತರ 2019ರ ಏಪ್ರಿಲ್‌ 20ರಂದು ಅನಾಮಧೇಯ ಪತ್ರವೊಂದು ಲೋಕಾಯುಕ್ತ ಪೊಲೀಸರಿಗೆ ಬಂದಿತ್ತು. 2013-ರಿಂದ 2018ರವರೆಗೆ ಜಗಳೂರು ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಗಳು ಸರ್ಕಾರದ ಕೋಟಿಗಟ್ಟಲೆ ಅನುದಾನವನ್ನು ಲೂಟಿ ಮಾಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿತ್ತು.

ಆ ಪತ್ರ ಆಧರಿಸಿ ಲೋಕಾಯುಕ್ತ ಪೊಲೀಸರು, ಎಫ್‌ಐಆರ್‌ ದಾಖಲಿಸದೆ ತನಿಖೆ/ವಿಚಾರಣೆ ನಡೆಸಿ ದಾಖಲೆ ಸಂಗ್ರಹಿಸಿದ್ದರು. 20203ರ ಮಾರ್ಚ್‌ನಲ್ಲಿ ಸೆಕ್ಷನ್‌ 17ಎ ಅಡಿಯಲ್ಲಿ ತನಿಖೆಗೆ ಪೂರ್ವಾನುಮತಿ ಕೋರಿ ಅರ್ಜಿದಾರರು ಕಾರ್ಯನಿರ್ವಹಿಸುತ್ತಿದ್ದ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದಿದ್ದರು. ಅರ್ಜಿದಾರರು ಸುಮಾರು 50 ಲಕ್ಷ ರೂಪಾಯಿ ಅವ್ಯವಹಾರ ನಡೆಸಿದ್ದಾರೆ ಎಂದು ಆ ಪತ್ರದಲ್ಲಿ ಆರೋಪಿಸಲಾಗಿತ್ತು. ಸಕ್ಷಮ ಪ್ರಾಧಿಕಾರವು 2023ರ ಜೂನ್‌ 17ರಂದು ಅರ್ಜಿದಾರರ ವಿರುದ್ಧ ವಿಚಾರಣೆ/ತನಿಖೆಗೆ ಅನುಮತಿ ನೀಡಿತ್ತು. ಇದರಿಂದ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

Attachment
PDF
S Lakshmi Vs State of Karnataka
Preview
Kannada Bar & Bench
kannada.barandbench.com