ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ ನರೇಂದರ್ ಅವರ ವರ್ಗಾವಣೆಯನ್ನು ಯಾಕೆ ಮಾಡಲಾಯಿತು ಎಂಬುದರ ಬಗ್ಗೆ ಕೊಲಿಜಿಯಂ ಉತ್ತರ ನೀಡಿಲ್ಲ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಜಿ ನರೇಂದರ್ ಆಂಧ್ರಪ್ರದೇಶ ಹೈಕೋರ್ಟ್‌ಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರು ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ಈ ವೇಳೆ ಮಾತನಾಡಿದ ವಿವೇಕ್ ಸುಬ್ಬಾರೆಡ್ಡಿ ಅವರು ನರೇಂದರ್ ವರ್ಗಾವಣೆ ಯಾಕೆ ಮಾಡಿದಿರಿ ಎಂದು ಕೇಳಿದರೂ ಕೊಲಿಜಿಯಂನಿಂದ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಬೇಸರ ಹೊರ ಹಾಕಿದರು.
ಈ ಮಾತಿಗೆ ದನಿಗೂಡಿಸಿದ ಹಿರಿಯ ವಕೀಲ ಹಾಗೂ ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಕೊಲಿಜಿಯಂ ದಲಿತರನ್ನು ಮತ್ತು ಹಿಂದುಳಿದವರನ್ನೇ ಇಂತಹ ವರ್ಗಾವಣೆಗೆ ಗುರಿ ಮಾಡಿಕೊಂಡಿದೆ. ಈ ನಡೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದರು.
"ನ್ಯಾ. ನರೇಂದರ್ ಹಿಂದುಳಿದ ವರ್ಗಕ್ಕೆ ಸೇರಿದವರು. ಪ್ರಾಮಾಣಿಕತೆ ಮತ್ತು ಪಾರದರ್ಶಕ ಆಡಳಿತಕ್ಕೆ ಹೆಸರಾಗಿದ್ದವರು. ಇಂತಹವರಿಗೆ ಪದೋನ್ನತಿ ನೀಡಿ ವರ್ಗಾವಣೆ ಮಾಡಿದ್ದರೆ ಸಂತೋಷ ಆಗುತ್ತಿತ್ತು. ಆದರೆ, ಸಾಮಾಜಿಕ ನ್ಯಾಯಕ್ಕೆ ಹೆಸರಾದ ಈ ನಾಡಿನಲ್ಲಿ ಅವರಿಗೆ ಶಿಕ್ಷೆಯ ವರ್ಗಾವಣೆ ಮಾಡುವ ಮೂಲಕ ಅನ್ಯಾಯ ಎಸಗಲಾಗಿದೆ. ವರ್ಗಾವಣೆ ವಿಷಯದಲ್ಲಿ ಕೊಲಿಜಿಯಂಗೆ ಇರುವ ಮಾನದಂಡ, ನಿಯಮಗಳು ಏನು ಎಂಬುದೇ ತಿಳಿಯದಾಗಿದೆ. ಇದೊಂದು ಗಂಭೀರ ವಿಚಾರ" ಎಂದರು.
ಮುಂದುವರೆದು, "ನ್ಯಾ. ನರೇಂದರ್ ಒಬ್ಬ ಸಮರ್ಥ ಮತ್ತು ಉತ್ತಮ ಗುಣಗಳನ್ನು ಹೊಂದಿದ ನ್ಯಾಯಮೂರ್ತಿ. ಅವರೇನು ಮಾಡಿದ್ದರು ಎಂದು ಈ ವರ್ಗಾವಣೆ ಮಾಡಲಾಗಿದೆ? ಯಾರು ಈ ಪ್ರಶ್ನೆ ಕೇಳಬೇಕು. ಯಾರಿಗೆ ಇದರ ಹೊಣೆಗಾರಿಕೆ ಇದೆ? ಇದೆಲ್ಲಾ ಬುದ್ಧಿವಂತಿಕೆಯಿಂದ ಯೋಜಿಸಿದ ಸೂತ್ರ. ಪರಿಶಿಷ್ಟ ಜಾತಿಗೆ ಸೇರಿದ್ದ ನ್ಯಾಯಮೂರ್ತಿ ಪಿ ಬಿ ಭಜಂತ್ರಿ ಅವರನ್ನೂ ಇದೇ ರೀತಿ ವರ್ಗಾವಣೆ ಮಾಡಲಾಯಿತು. ಇದನ್ನೆಲ್ಲಾ ಎಲ್ಲಿಯವರೆಗೆ ಸಹಿಸಿಕೊಳ್ಳಬೇಕು?" ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ, ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ, ಎಎಬಿ ಪದಾಧಿಕಾರಿಗಳು ಇದ್ದರು.
ಇದಕ್ಕೂ ಮುನ್ನ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಕೋರ್ಟ್ ಹಾಲ್ ಒಂದರಲ್ಲಿ ಪೂರ್ಣ ಪೀಠದ ಸಮ್ಮುಖದಲ್ಲಿ ನ್ಯಾ. ನರೇಂದರ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.