ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಎಸ್ ರಾಚಯ್ಯ ಅವರನ್ನು ಕಾಯಂಗೊಳಿಸಲು ಮಂಗಳವಾರ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ.
ಕರ್ನಾಟಕ ಹೈಕೋರ್ಟ್ ಕೊಲಿಜಿಯಂ ಆಗಸ್ಟ್ 6ರಂದು ಒಮ್ಮತದಿಂದ ನ್ಯಾಯಮೂರ್ತಿ ಸಿದ್ದಯ್ಯ ರಾಚಯ್ಯ ಅವರನ್ನು ಕಾಯಂಗೊಳಿಸಲು ಶಿಫಾರಸ್ಸು ಮಾಡಿದೆ ಎಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಣಯದಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂನ ಅಕ್ಟೋಬರ್ 26, 2017ರ ನಿರ್ಣಯದ ಪ್ರಕಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇಮಿಸಿದ್ದ ಇಬ್ಬರು ಸರ್ವೋಚ್ಚ ನ್ಯಾಯಾಲಯದ ಸದಸ್ಯರು ನ್ಯಾ. ಎಸ್ ರಾಚಯ್ಯ ಅವರು ನೀಡಿರುವ ತೀರ್ಪುಗಳನ್ನು ಪರಿಶೀಲಿಸಿದ್ದಾರೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
"ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಅಭಿಪ್ರಾಯವು (ಶಿಫಾರಸ್ಸಿನ ಸಂಬಂಧ) ದೊರೆತಿಲ್ಲ. ಒಂದೊಮ್ಮೆ ಸಾಂವಿಧಾನಿಕ ಹುದ್ದೆಯಲ್ಲಿರುವವರ ಅಭಿಪ್ರಾಯ ತಲುಪಿಲ್ಲದಿದ್ದರೆ ಕಾನೂನು ಇಲಾಖೆಯು ಪ್ರಕ್ರಿಯಾ ನಿಯಮಗಳ ಪ್ಯಾರಾ 14ರ ಅನ್ವಯ ಶಿಫಾರಸ್ಸು ಕಳುಹಿಸಿಕೊಡಬಹುದಾಗಿದ್ದು ಅದರಂತೆ ಕಳುಹಿಸಿಕೊಡಲಾಗಿದೆ. ನಿರ್ದಿಷ್ಟ ಕಾಲಾವಧಿಯಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರ ಯಾವುದೇ ಅಭಿಪ್ರಾಯ ತಲುಪಿಲ್ಲ ಎಂದಾದರೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯವರಿಂದ ಅದಕ್ಕೆ ಸೇರಿಸಲು ಏನೂ ಇಲ್ಲ ಎಂದು ಕಾನೂನು ಮತ್ತು ನ್ಯಾಯ ಇಲಾಖೆಯು ಭಾವಿಸಬಹುದಾಗಿದೆ” ಎಂದು ಹೇಳಲಾಗಿದೆ.
ನ್ಯಾಯಮೂರ್ತಿಗಳ ಜೊತೆಗಿನ ಸಮಾಲೋಚನೆ, ತೀರ್ಪು ಮೌಲ್ಯಮಾಪನ ಸಮಿತಿಯ ವರದಿಯ ಜೊತೆಗೆ ದಾಖಲೆ ಪರಿಶೀಲಿಸಿ ನ್ಯಾ. ಎಸ್ ರಾಚಯ್ಯ ಅವರ ಹೆಸರು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ.
ಅಕ್ಟೋಬರ್ 1ರ ವೇಳೆಗೆ ಕರ್ನಾಟಕ ಹೈಕೋರ್ಟ್‌ನಲ್ಲಿ 62 ನ್ಯಾಯಮೂರ್ತಿಗಳ ಹುದ್ದೆಗಳಿದ್ದು, ಪ್ರಸ್ತುತ 50 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 12 ಹುದ್ದೆಗಳು ಖಾಲಿ ಇವೆ.