

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಗುರುವಾರ ಶಿಫಾರಸ್ಸು ಮಾಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನಡೆದ ಕೊಲಿಜಿಯಂ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವ ಉಷಾರಾಣಿ, ಕೆ ಎಸ್ ಭರತ್ ಕುಮಾರ್‌ಮತ್ತು ನೆರಳೆ ವೀರಭದ್ರಯ್ಯ ಭವಾನಿ ಅವರ ಹೆಸರನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ನೀಡಲು ಶಿಫಾರಸ್ಸು ಮಾಡಲಾಗಿದೆ.
ಕೊಲಿಜಿಯಂ ಶಿಫಾರಸ್ಸಿಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತು ರಾಷ್ಟ್ರಪತಿಗಳು ನೇಮಕ ಆದೇಶ ಹೊರಡಿಸಿದ ಬಳಿಕ ಮೂವರೂ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಕರ್ನಾಟಕ ಹೈಕೋರ್ಟ್‌ಗೆ ಮಂಜೂರಾಗಿರುವ ಒಟ್ಟು ನ್ಯಾಯಮೂರ್ತಿಗಳ ಹುದ್ದೆಗಳ ಸಂಖ್ಯೆ 62. ಸದ್ಯ 54 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದು, ಎಂಟು ಹುದ್ದೆಗಳು ಖಾಲಿ ಇವೆ. ಮೂವರ ನೇಮಕಾತಿ ಪೂರ್ಣಗೊಂಡರೆ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳ ಸಂಖ್ಯೆ 57ಕ್ಕೆ ಏರಲಿದ್ದು, ಖಾಲಿ ಹುದ್ದೆಗಳ ಸಂಖ್ಯೆ ಐದಕ್ಕೆ ಇಳಿಯಲಿದೆ.