ನ್ಯಾಯಮೂರ್ತಿಗಳ ಶಿಫಾರಸು: ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಬಿ ವಿ ನಾಗರತ್ನ?

ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡವರಲ್ಲಿ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಕೂಡ ಸೇರಿದ್ದಾರೆ.
ನ್ಯಾಯಮೂರ್ತಿಗಳ ಶಿಫಾರಸು: ಸುಪ್ರೀಂಕೋರ್ಟ್‌ನ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಬಿ ವಿ ನಾಗರತ್ನ?

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಗೆ 9 ಹೆಸರುಗಳನ್ನು ಕೊಲಿಜಿಯಂ ಶಿಫಾರಸು ಮಾಡಿದೆ. ಅವರಲ್ಲಿ 3 ಮಹಿಳಾ ನ್ಯಾಯಮೂರ್ತಿಗಳು ಸೇರಿದ್ದಾರೆ ಮತ್ತು ಒಬ್ಬರನ್ನು ನ್ಯಾಯವಾದಿ ವರ್ಗದಿಂದ ನೇಮಕ ಮಾಡಲಾಗುತ್ತದೆ.

ವಿಶೇಷ ಎಂದರೆ ಶಿಫಾರಸುಗಳಿಗೆ ಒಪ್ಪಿಗೆ ದೊರೆತರೆ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಬಿ ವಿ ನಾಗರತ್ನ ಅವರು ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಪ್ರಥಮ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ. ನ್ಯಾ. ನಾಗರತ್ನ ಅವರನ್ನು ಹೊರತು ಪಡಿಸಿ ಕೊಲಿಜಿಯಂ ಶಿಫಾರಸು ಮಾಡಿರುವ ಇತರೆ ಇಬ್ಬರು ಮಹಿಳಾ ನ್ಯಾಯಮೂರ್ತಿಗಳೆಂದರೆ ಹಿಮಾ ಕೊಹ್ಲಿ ಮತ್ತು ಬೇಲಾ ತ್ರಿವೇದಿ. ನ್ಯಾ. ನಾಗರತ್ನ ಅವರಂತೆಯೇ ನ್ಯಾ. ವಿಕ್ರಮ್‌ ನಾಥ್‌ ಮತ್ತು ಹಿರಿಯ ನ್ಯಾಯವಾದಿ ಪಿ ಎಸ್‌ ನರಸಿಂಹ ಅವರು ಕೂಡ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗುವ ಸಾಧ್ಯತೆಗಳಿವೆ.

ಮತ್ತೊಂದೆಡೆ ಕರ್ನಾಟಕ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಎ ಎಸ್‌ ಓಕಾ ಅವರನ್ನು ಕೂಡ ಕೊಲಿಜಿಯಂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿದೆ.

ಪಿ ಎಸ್ ನರಸಿಂಹ ಅವರ ಹೆಸರನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದರೆ ಅವರು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾಗಿ ನ್ಯಾಯವಾದಿ ವರ್ಗದಿಂದ ನೇರವಾಗಿ ಆಯ್ಕೆಯಾಗಲಿರುವ ಒಂಬತ್ತನೇ ವಕೀಲರಾಗಲಿದ್ದಾರೆ.

ಕೊಲಿಜಿಯಂ ಸದಸ್ಯರಾಗಿದ್ದ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದ ನಂತರ ಈ ಶಿಫಾರಸುಗಳನ್ನು ಮಾಡಲಾಗಿದೆ. ಅವರ ನಿವೃತ್ತಿಯ ನಂತರ ನ್ಯಾ. ಎಲ್‌ ನಾಗೇಶ್ವರ ರಾವ್‌ ಅವರು ಕೊಲಿಜಿಯಂ ಪ್ರವೇಶಿಸಿದ್ದರು.

ಅಖಿಲ ಭಾರತ ಜ್ಯೇಷ್ಠತಾ ಪಟ್ಟಿಯಲ್ಲಿ ಇಬ್ಬರು ಹಿರಿಯ ನ್ಯಾಯಮೂರ್ತಿಗಳಾದ ಕರ್ನಾಟಕ ಹೈಕೋರ್ಟ್ ಸಿಜೆ ಎ ಎಸ್‌ ಓಕಾ ಮತ್ತು ತ್ರಿಪುರಾ ಹೈಕೋರ್ಟ್ ಸಿಜೆ ಅಖಿಲ್ ಕುರೇಶಿ ಅವರನ್ನು ನೇಮಿಸಬೇಕು ಎಂದು ನ್ಯಾ. ನಾರಿಮನ್‌ ಪಟ್ಟು ಹಿಡಿದಿದ್ದರಿಂದ ಕೊಲಿಜಿಯಂನಲ್ಲಿ ಈ ಮೊದಲು ಒಮ್ಮತ ಮೂಡಿರಲಿಲ್ಲ.

ಐವರು ಸದಸ್ಯರ ಕೊಲಿಜಿಯಂನಲ್ಲಿ ಸಿಜೆಐ ರಮಣ ಮಾತ್ರವಲ್ಲದೆ ಹಾಲಿ ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎ ಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ಎಲ್ ನಾಗೇಶ್ವರ ರಾವ್ ಇದ್ದಾರೆ. ಇದೇ ವೇಳೆ ಕೊಲಿಜಿಯಂ ಒಂಬತ್ತು ಹೆಸರುಗಳನ್ನು ಶಿಫಾರಸು ಮಾಡಿದ್ದರೂ ನಿರ್ಧಾರಕ್ಕೆ ಕೊಲಿಜಿಯಂ ನ್ಯಾಯಮೂರ್ತಿಗಳು ಇನ್ನೂ ಸಹಿ ಮಾಡಿಲ್ಲ.

ಸುಪ್ರೀಂಕೋರ್ಟ್‌ ಪ್ರಸ್ತುತ ಒಂಬತ್ತು ಹುದ್ದೆಗಳು ಖಾಲಿ ಇದ್ದು ನ್ಯಾ. ನವೀನ್‌ ಸಿನ್ಹಾ ಇಂದು ನಿವೃತ್ತರಾಗಲಿದ್ದು ಅದರೊಂದಿಗೆ ನಿವೃತ್ತರಾದ ನ್ಯಾಯಮೂರ್ತಿಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಲಿದೆ.

ಪದೋನ್ನತಿಗೊಂಡ ನ್ಯಾಯಮೂರ್ತಿಗಳ ವಿವರ:

ಮಹಿಳಾ ನ್ಯಾಯಮೂರ್ತಿಗಳು: ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ (ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ), ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಬೇಲಾ ತ್ರಿವೇದಿ

ವಕೀಲ ಸಮುದಾಯದಿಂದ: ಹಿರಿಯ ವಕೀಲ ಪಿ ಎಸ್‌ ರಸಿಂಹ

ಹೈಕೋರ್ಟ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿಗಳು: ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ನಾಥ್, ಸಿಕ್ಕಿಂ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ, ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಸಿ ಟಿ ರವಿಕುಮಾರ್, ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್

Kannada Bar & Bench
kannada.barandbench.com