ಸಿಜೆ ಅಂಜಾರಿಯಾ ಸಹಿತ ಮೂವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲು ಕೊಲಿಜಿಯಂ ಶಿಫಾರಸ್ಸು

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರ ನೇತೃತ್ವದ ಕೊಲಿಜಿಯಂ ಮೂವರು ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸ್ಸು ಮಾಡಿದೆ.
Justice N V Anjaria, Justice Vijay Bishnoi, Justice Atul S Chandurkar
Justice N V Anjaria, Justice Vijay Bishnoi, Justice Atul S Chandurkar
Published on

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಸೇರಿ ಮೂವರು ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸೋಮವಾರ ಕೇಂದ್ರ ಸರ್ಕಾರಕ್ಕೆ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಸಿಜೆಐ ಬಿ ಆರ್‌ ಗವಾಯಿ ಅವರ ನೇತೃತ್ವದ ಕೊಲಿಜಿಯಂ ಶಿಫಾರಸ್ಸು ಮಾಡಿದೆ.

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ (ಮಾತೃ ಹೈಕೋರ್ಟ್‌ ಗುಜರಾತ್‌); ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಜಯ್‌ ಬಿಷ್ಣೋಯ್‌ (ಮಾತೃ ಹೈಕೋರ್ಟ್‌ ರಾಜಸ್ಥಾನ); ಬಾಂಬೆ ನ್ಯಾಯಮೂರ್ತಿ ಅತುಲ್‌ ಎಸ್.‌ ಚಂದೂರ್ಕರ್‌ ಅವರ ಹೆಸರನ್ನು ಶಿಫಾರಸ್ಸು ಮಾಡಿದೆ.

ನ್ಯಾ. ಅಂಜಾರಿಯಾ ಅವರು ಗುಜರಾತ್‌ ಹೈಕೋರ್ಟ್‌ನಲ್ಲಿ 1988ರ ಆಗಸ್ಟ್‌ನಲ್ಲಿ ಹಿರಿಯ ವಕೀಲ ಎಸ್‌ ಎನ್‌ ಶೇಲತ್‌ ಅವರ ಬಳಿ ವಕೀಲಿಕೆ ಆರಂಭಿಸಿದ್ದರು. ನ್ಯಾ. ಅಂಜಾರಿಯಾ ಅವರು ಸಾಂವಿಧಾನಿಕ, ಸಿವಿಲ್‌, ಕಾರ್ಮಿಕ ಮತ್ತು ಸೇವಾ ವಿಷಯಗಳನ್ನು ನಡೆಸಿದ್ದು, ಹೈಕೋರ್ಟ್‌, ರಾಜ್ಯ ಚುನಾವಣಾ ಆಯೋಗ ಮತ್ತು ಗುಜರಾತ್‌ ಕೈಗಾರಿಕಾ ಅಭಿವೃದ್ಧಿ ಕಾರ್ಪೊರೇಶನ್‌ ಸೇರಿ ರಾಜ್ಯದ ಹಲವು ಸಂಸ್ಥೆಗಳ ವಕೀಲರಾಗಿ ಕರ್ತವ್ಯ ನಿಭಾಯಿಸಿದ್ದಾರೆ.

2011ರ ನವೆಂಬರ್‌ 21ರಂದು ನ್ಯಾ. ಅಂಜಾರಿಯಾ ಅವರು ಗುಜರಾತ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, 2013ರ ಸೆಪ್ಟೆಂಬರ್‌ 6ರಂದು ಕಾಯಂಗೊಂಡಿದ್ದರು. 2024ರ ಫೆಬ್ರವರಿ 25ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು.

ನ್ಯಾಯಮೂರ್ತಿ ಬಿಷ್ಣೋಯ್‌ ಅವರು 1989ರ ಜುಲೈ 8ರಂದು ವಕೀಲರಾಗಿ ನೋಂದಣಿ ಮಾಡಿಸಿದ್ದು, ರಾಜಸ್ಥಾನ ಹೈಕೋರ್ಟ್‌ ಮತ್ತು ಜೋಧಪುರದ ಕೇಂದ್ರೀಯ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಪ್ರಾಕ್ಟೀಸ್‌ ಮಾಡಿದ್ದಾರೆ. ಸಿವಿಲ್‌, ಕ್ರಿಮಿನಲ್‌, ಸಾಂವಿಧಾನಿಕ, ಸೇವಾ ಮತ್ತು ಚುನಾವಣಾ ಪ್ರಕರಣಗಳನ್ನು ನಡೆಸಿದ್ದಾರೆ.

ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಟ್ಯಾಂಡಿಂಗ್‌ ಕೌನ್ಸಿಲ್‌ ಮತ್ತು ರಾಜಸ್ಥಾನ ಸರ್ಕಾರದ ವಿವಿಧ ಇಲಾಖೆಗಳ ವಕೀಲರಾಗಿ ನ್ಯಾ. ಬಿಷ್ಣೋಯ್‌ ಕೆಲಸ ಮಾಡಿದ್ದಾರೆ. 2013ರ ಜನವರಿ 8ರಂದು ರಾಜಸ್ಥಾನ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ಬಿಷ್ಣೋಯ್‌, 2015ರ ಜನವರಿ 7ರಂದು ಕಾಯಂಗೊಂಡಿದ್ದರು. 2024ರ ಫೆಬ್ರವರಿ 5ರಂದು ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.

ನ್ಯಾ. ಚಂದೂರ್ಕರ್‌ ಅವರು 1988ರ ಜುಲೈ 21ರಂದು ವಕೀಲರಾಗಿ ನೋಂದಣಿಯಾಗಿದ್ದು, ಮುಂಬೈನ ಹಿರಿಯ ವಕೀಲ ಬಿ ಎನ್‌ ನಾಯ್ಕ್‌ ಅವರ ಚೇಂಬರ್‌ನಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ಆನಂತರ ನ್ಯಾಯಮೂರ್ತಿಯಾಗಿ ಪದೋನ್ನತಿಗೊಂಡಿದ್ದರು. 1992ರಲ್ಲಿ ನಾಗ್ಪುರ ಪೀಠಕ್ಕೆ ಪ್ರಾಕ್ಟೀಸ್‌ ವರ್ಗಾಯಿಸಿಕೊಂಡಿದ್ದ ನ್ಯಾ. ಚಂದೂರ್ಕರ್‌ ಅವರು ಹಲವು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗಿದ್ದರು.

ನ್ಯಾ. ಚಂದೂರ್ಕರ್‌ ಅವರು ಮಹಾರಾಷ್ಟ್ರ ಪುರಸಭೆ ಮಂಡಳಿ, ನಗರ ಪಂಚಾಯಿತಿಗಳು ಮತ್ತು ಕೈಗಾರಿಕಾ ಟೌನ್ಷಿಪ್‌ ಕಾಯಿದೆ 1965 ಮತ್ತು ಮಹಾರಾಷ್ಟ್ರ ಬಾಡಿಗೆ ನಿಯಂತ್ರಣ ಕಾಯಿದೆ 1999 ಎಂಬ ಎರಡು ಪುಸ್ತಕಗಳನ್ನು ರಚಿಸಿದ್ದಾರೆ.

ನ್ಯಾ. ಚಂದೂರ್ಕರ್‌ ಅವರನ್ನು 2013ರ ಜೂನ್‌ 21ರಂದು ಬಾಂಬೆ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು.

ಈಚೆಗೆ ಸಿಜೆಐಯಾಗಿದ್ದ ಸಂಜೀವ್‌ ಖನ್ನಾ, ನ್ಯಾಯಮೂರ್ತಿಗಳಾದ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ಬೆಲಾ ತ್ರಿವೇದಿ ಅವರು ನಿವೃತ್ತಿ ಹೊಂದಿದ್ದರಿಂದ 34 ಹುದ್ದೆಗಳ ಪೈಕಿ 31 ನ್ಯಾಯಮೂರ್ತಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Kannada Bar & Bench
kannada.barandbench.com