ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಕೊಲಿಜಿಯಂ ಶುಕ್ರವಾರ ಶಿಫಾರಸ್ಸು ಮಾಡಿದೆ.
ನ್ಯಾ. ವರಾಳೆ ಅವರ ನೇಮಕಾತಿ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಅನುಮೋದಿಸಿದರೆ, ಪ್ರಸಕ್ತ ಸುಪ್ರೀಂ ಕೋರ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಮುದಾಯದ ಮೂರನೇ ನ್ಯಾಯಮೂರ್ತಿ ವರಾಳೆ ಅವರಾಗಲಿದ್ದಾರೆ. ನ್ಯಾ. ಬಿ ಆರ್ ಗವಾಯಿ ಮತ್ತು ನ್ಯಾ. ಸಿ ಟಿ ರವಿಕುಮಾರ್ ಅವರು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ದಲಿತ ಸಮುದಾಯ ಇನ್ನಿಬ್ಬರು ನ್ಯಾಯಮೂರ್ತಿಗಳಾಗಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿರುವ ಪಿ ಬಿ ವರಾಳೆ ಅವರು ದೇಶಾದ್ಯಂತದ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
ನ್ಯಾಯಮೂರ್ತಿ ವರಾಳೆ ಅವರು ಆಗಸ್ಟ್ 1985ರಲ್ಲಿ ವಕೀಲರಾಗಿ ನೋಂದಾಯಿಸಿಕೊಳ್ಳುವ ಮೂಲಕ ವೃತ್ತಿ ಜೀವನ ಆರಂಭಿಸಿದರು. ಆರಂಭಿಕ ವರ್ಷಗಳಲ್ಲಿ ವಕೀಲ ಎಸ್ ಎನ್ ಲೋಯಾ ಅವರ ಅಡಿಯಲ್ಲಿ ಪ್ರಾಕ್ಟೀಸ್ ಮಾಡಿದರು. 1992ರವರೆಗೆ ಔರಂಗಾಬಾದ್‌ನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 2008ರ ಜುಲೈ 18ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ. ವರಾಳೆ ಅವರು ಅಕ್ಟೋಬರ್ 15, 2022ರಂದು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.
ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಕೊಲಿಜಿಯಂ ನಿರ್ಣಯದ ಪ್ರಕಾರ, ನ್ಯಾಯಮೂರ್ತಿ ವರಾಳೆ ಅವರು ಅಸಾಧಾರಣ ನಡವಳಿಕೆ ಮತ್ತು ಸಮಗ್ರತೆಯನ್ನು ಹೊಂದಿರುವ ಸಮರ್ಥ ನ್ಯಾಯಾಧೀಶರಾಗಿದ್ದಾರೆ ಮತ್ತು ಉನ್ನತ ಮಟ್ಟದ ವೃತ್ತಿಪರ ನೈತಿಕತೆಯನ್ನು ಕಾಪಾಡಿಕೊಂಡಿದ್ದಾರೆ ಎನ್ನಲಾಗಿದೆ.
"ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆಯುವ ಮೊದಲು, ಅವರು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಿವಿಲ್, ಕ್ರಿಮಿನಲ್, ಕಾರ್ಮಿಕ ಮತ್ತು ಆಡಳಿತಾತ್ಮಕ ಕಾನೂನು ವಿಷಯಗಳಲ್ಲಿ ಮತ್ತು ಔರಂಗಾಬಾದ್‌ನ ಹೈಕೋರ್ಟ್ ಪೀಠದಲ್ಲಿ ಸಾಂವಿಧಾನಿಕ ವಿಷಯಗಳಲ್ಲಿ 23 ವರ್ಷಗಳ ಕಾಲ ಬಾರ್‌ನಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಹೈಕೋರ್ಟ್ ನ್ಯಾಯಾಧೀಶರ ಅಖಿಲ ಭಾರತ ಜ್ಯೇಷ್ಠತೆಯಲ್ಲಿ ನ್ಯಾಯಮೂರ್ತಿ ವರಾಳೆ ಅವರು 6ನೇ ಸ್ಥಾನದಲ್ಲಿದ್ದಾರೆ. ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರ ಹಿರಿತನದಲ್ಲಿ, ಅವರು ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ" ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
[ನಿರ್ಣಯ ಓದಿ]