ದೆಹಲಿ ಹೈಕೋರ್ಟ್‌ ನ್ಯಾ. ವಿಭು ಬಖ್ರು ಅವರನ್ನು ಕರ್ನಾಟಕ ಹೈಕೋರ್ಟ್‌ ಸಿಜೆಯನ್ನಾಗಿ ನೇಮಿಸಲು ಕೊಲಿಜಿಯಂ ಶಿಫಾರಸ್ಸು

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸ್ಸುಗೊಂಡಿರುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಪದೋನ್ನತಿಯಿಂದ ಈ ಹುದ್ದೆಯು ಖಾಲಿಯಾಗಲಿದೆ.
ದೆಹಲಿ ಹೈಕೋರ್ಟ್‌ ನ್ಯಾ. ವಿಭು ಬಖ್ರು ಅವರನ್ನು ಕರ್ನಾಟಕ ಹೈಕೋರ್ಟ್‌ ಸಿಜೆಯನ್ನಾಗಿ ನೇಮಿಸಲು ಕೊಲಿಜಿಯಂ ಶಿಫಾರಸ್ಸು
Published on

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ವಿಭು ಬಖ್ರು ಅವರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಸೋಮವಾರ ಶಿಫಾರಸ್ಸು ಮಾಡಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ನೇತೃತ್ವದ ಕೊಲಿಜಿಯಂ ಈ ನಿರ್ಧಾರ ಕೈಗೊಂಡಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸ್ಸುಗೊಂಡಿರುವ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಪದೋನ್ನತಿಯಾದ ನಂತರ ಈ ಹುದ್ದೆಯು ಖಾಲಿಯಾಗಲಿದೆ. ಈ ಹುದ್ದೆಗೆ ನ್ಯಾ. ಬಖ್ರು ಅವರನ್ನು ನೇಮಿಸಲು ಶಿಫಾರಸ್ಸು ಮಾಡಲಾಗಿದೆ.

1966ರಲ್ಲಿ ನಾಗ್ಪುರದಲ್ಲಿ ಜನಿಸಿದ ನ್ಯಾ. ಬಖ್ರು ಅವರು ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್‌ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1989ರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿಯೂ ಅರ್ಹತೆ ಪಡೆದಿದ್ದರು. ಆನಂತರ 1990ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದು, ಅದೇ ವರ್ಷ ದೆಹಲಿ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದರು. ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌, ಕಂಪನಿ ಕಾನೂನು ಮಂಡಳಿ ಮತ್ತು ಇತರೆ ನ್ಯಾಯ ಮಂಡಳಿಗಳಲ್ಲಿಯೂ ಅವರು ವಕೀಲರಾಗಿ ಕೆಲಸ ಮಾಡಿದ್ದಾರೆ. 2011ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದರು. 2013ರ ಏಪ್ರಿಲ್‌ 17ರಂದು ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2015ರ ಮಾರ್ಚ್‌ 18ರಂದು ಕಾಯಂಗೊಂಡಿದ್ದರು.

ಇನ್ನು, ಪಟ್ನಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಷುತೋಷ್‌ ಕುಮಾರ್‌ ಅವರನ್ನು ಗುವಾಹಟಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಗುವಾಹಟಿ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ವಿಜಯ್‌ ಬಿಷ್ಣೋಯ್‌ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸ್ಸು ಮಾಡಲಾಗಿದೆ.

ನ್ಯಾಯಮೂರ್ತಿ ವಿಪುಲ್‌ ಮನುಭಾಯ್‌ ಪಂಚೋಲಿ ಅವರನ್ನು ಪಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಶಿಫಾರಸ್ಸು ಮಾಡಲಾಗಿದೆ. ಗುಜರಾತ್‌ ಹೈಕೋರ್ಟ್‌ ಪಂಚೋಲಿ ಅವರ ಮಾತೃ ಹೈಕೋರ್ಟ್‌ ಆಗಿದೆ.

ನ್ಯಾಯಮೂರ್ತಿ ಸಂಜೀವ್‌ ಸಚ್‌ದೇವ್‌ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾ. ಸುರೇಶ್‌ ಕೈಟ್‌ ಅವರು ಮೇ 23ರಂದು ನಿವೃತ್ತಿ ಹೊಂದಿದಾಗಿನಿಂದ ನ್ಯಾ. ಸಚ್‌ದೇವ್‌ ಅವರು ಹಂಗಾಮಿ ಸಿಜೆಯಾಗಿದ್ದಾರೆ.

ಹಿಮಾಚಲ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ತಾರ್ಲೋಕ್‌ ಸಿಂಗ್‌ ಚೌಹಾಣ್‌ ಅವರನ್ನು ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಲು ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಜಾರ್ಖಂಡ್‌ ಹಾಲಿ ಸಿಜೆ ಎಂ ಎಸ್‌ ರಾಮಚಂದ್ರ ರಾವ್‌ ಅವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ ನ್ಯಾ. ಚೌಹಾಣ್‌ ಅವರನ್ನು ನೇಮಕ ಮಾಡಲು ಶಿಫಾರಸ್ಸು ಮಾಡಲಾಗಿದೆ.

ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾ. ರಾವ್‌ ಅವರು ಸಿಜೆ ಎನ್‌ ವಿ ಅಂಜಾರಿಯಾ ನಂತರ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. 2024ರ ಮಾರ್ಚ್‌ 13ರಂದು ನ್ಯಾ. ರಾವ್‌ ಅವರು ಬೇರಾವುದಾದರೂ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿದ್ದರು.

ಮಾತೃ ಹೈಕೋರ್ಟ್‌ಗೆ ಮರಳಲಿರುವ ನ್ಯಾ. ಕಾಮೇಶ್ವರ ರಾವ್‌

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಅವರನ್ನು ಮರಳಿ ಅವರ ಮಾತೃ ಹೈಕೋರ್ಟ್‌ ದೆಹಲಿಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ದೆಹಲಿ ಹೈಕೋರ್ಟ್‌ನಲ್ಲಿ 11 ವರ್ಷ ಸೇವೆ ಸಲ್ಲಿಸಿದ್ದ ನ್ಯಾ. ರಾವ್‌ ಅವರ ಕೋರಿಕೆಯಂತೆ ಅವರನ್ನು 2024ರಲ್ಲಿ ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.

ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾ. ರಾವ್‌ ಅವರು ಸಿಜೆ ಎನ್‌ ವಿ ಅಂಜಾರಿಯಾ ನಂತರ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ. 2024ರ ಮಾರ್ಚ್‌ 13ರಂದು ನ್ಯಾ. ರಾವ್‌ ಅವರು ಬೇರಾವುದಾದರೂ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿದ್ದರು.

Kannada Bar & Bench
kannada.barandbench.com