
ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡುವಂತೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಗುರುವಾರ ಶಿಫಾರಸ್ಸು ಮಾಡಿದೆ.
ನ್ಯಾಯಮೂರ್ತಿ ಬಾಗ್ಚಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಲಿದ್ದಾರೆ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರ ನಿವೃತ್ತಿಯ ನಂತರ ಮೇ 2031ರಲ್ಲಿ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
ಆದಾಗ್ಯೂ, ನ್ಯಾಯಮೂರ್ತಿ ಬಾಗ್ಚಿ ಅವರು ಅಕ್ಟೋಬರ್ 2031 ರಲ್ಲಿ ನಿವೃತ್ತರಾಗುವುದರಿಂದ ತುಲನಾತ್ಮಕವಾಗಿ ಕಡಿಮೆ ಅವಧಿಗೆ ಮಾತ್ರ ಸಿಜೆಐ ಆಗಿ ಸೇವೆ ಸಲ್ಲಿಸಲಿದ್ದಾರೆ. ನ್ಯಾಯಮೂರ್ತಿ ಬಾಗ್ಚಿ ಅವರು 2013 ರಲ್ಲಿ ನಿವೃತ್ತರಾದ ದಿವಂಗತ ಸಿಜೆಐ ಅಲ್ತಮಷ್ ಕಬೀರ್ ನಂತರ ಕಲ್ಕತ್ತಾ ಹೈಕೋರ್ಟ್‌ನಿಂದ ಆಯ್ಕೆಯಾದ ಮೊದಲ ಸಿಜೆಐ ಆಗಲಿದ್ದಾರೆ.
ನ್ಯಾಯಮೂರ್ತಿ ಬಾಗ್ಚಿ ಅವರು ಹೈಕೋರ್ಟ್ ನ್ಯಾಯಾಧೀಶರ ಅಖಿಲ ಭಾರತ ಹಿರಿತನದ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದ್ದಾರೆ ಎಂಬ ಅಂಶವನ್ನು ಕೊಲಿಜಿಯಂ ಗಣನೆಗೆ ತೆಗೆದುಕೊಂಡಿದೆ.
"ಪ್ರಸ್ತುತ, ಸುಪ್ರೀಂ ಕೋರ್ಟ್‌ನ ಪೀಠವನ್ನು ಕಲ್ಕತ್ತಾದ ಹೈಕೋರ್ಟ್‌ನಿಂದ ಒಬ್ಬ ನ್ಯಾಯಾಧೀಶರು ಮಾತ್ರ ಪ್ರತಿನಿಧಿಸುತ್ತಿದ್ದಾರೆ ಎಂಬ ಅಂಶವನ್ನು ಕೊಲಿಜಿಯಂ ಪರಿಗಣಿಸಿದೆ. ಮುಖ್ಯ ನ್ಯಾಯಮೂರ್ತಿಗಳು ಸೇರಿದಂತೆ ಹೈಕೋರ್ಟ್ ನ್ಯಾಯಾಧೀಶರ ಒಟ್ಟು ಅಖಿಲ ಭಾರತ ಹಿರಿತನದಲ್ಲಿ ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರು 11ನೇ ಸ್ಥಾನದಲ್ಲಿದ್ದಾರೆ" ಎಂದು ಕೊಲಿಜಿಯಂ ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
ಬೆಳೆದುಬಂದ ಹಾದಿ: ನ್ಯಾ. ಜೊಯಮಲ್ಯ ಬಾಗ್ಚಿ ಅವರನ್ನು ಜೂನ್ 27, 2011 ರಂದು ಕಲ್ಕತ್ತಾದ ಹೈಕೋರ್ಟ್‌ನ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಯಿತು. ಜನವರಿ 4, 2021 ರಂದು ಆಂಧ್ರಪ್ರದೇಶದ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ನವೆಂಬರ್ 8, 2021 ರಂದು ಅವರು ಕಲ್ಕತ್ತಾ ಹೈಕೋರ್ಟ್‌ಗೆ ಮರು ನಿಯುಕ್ತಿ ಮಾಡಲಾಯಿತು. ಅಂದಿನಿಂದ ನ್ಯಾ. ಬಾಗ್ಚಿ ಅವರು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯಾ. ಬಾಗ್ಚಿ ಅವರು 13 ವರ್ಷಗಳಿಗೂ ಹೆಚ್ಚು ಕಾಲ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. "ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ತಮ್ಮ ದೀರ್ಘ ಅವಧಿಯಲ್ಲಿ, ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರು ಕಾನೂನಿನ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಅನುಭವವನ್ನು ಗಳಿಸಿದ್ದಾರೆ ಎಂದು ಕೊಲಿಜಿಯಂ ಹೇಳಿದೆ.