ಜಯಲಲಿತಾ ಚಿನ್ನಾಭರಣ ಪಡೆಯಲು 6 ದೊಡ್ಡ ಟ್ರಂಕ್‌ ಜೊತೆ ಬನ್ನಿ: ತಮಿಳುನಾಡು ಸರ್ಕಾರಕ್ಕೆ ಮತ್ತೆ ವಿಶೇಷ ನ್ಯಾಯಾಲಯದ ಆದೇಶ

ಜಯಲಲಿತಾ ಅವರ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸುವುದನ್ನು ಇನ್ನಷ್ಟು ಕಾಲ ಮುಂದೂಡಬೇಕು ಎಂದು ಕೋರಿದ ಜಯಲಲಿತಾ ಸಂಬಂಧಿಗಳಾದ ದೀಪಕ್‌ ಮತ್ತು ಜೆ ದೀಪಾ ಅವರ ಮನವಿ ತಿರಸ್ಕರಿಸಿದ ವಿಶೇಷ ನ್ಯಾಯಾಲಯ.
Tamilnadu former CM J Jayalalithaa
Tamilnadu former CM J Jayalalithaa
Published on

ಅಕ್ರಮ ಆಸ್ತಿ ಗಳಿಕೆ ಸಂಬಂಧ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರಿಂದ ಜಪ್ತಿ ಮಾಡಲಾದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಸ್ವೀಕರಿಸಿಲು ಆರು ದೊಡ್ಡ ಟ್ರಂಕ್‌ ಹಾಗೂ ಅಗತ್ಯ ಭದ್ರತೆಯೊಂದಿಗೆ ಬರುವಂತೆ ತಮಿಳುನಾಡು ಸರ್ಕಾರದ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಜಯಲಲಿತಾ ಅವರ ಸಹೋದರನ ಸಂಬಂಧಿಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಕರ್ನಾಟಕ ಹೈಕೋರ್ಟ್‌ ವಜಾ ಮಾಡಿದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಮತ್ತೊಮ್ಮೆ ಈ ಆದೇಶ ಮಾಡಿದೆ.

ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್‌ ಎ ಮೋಹನ್‌ ಅವರು ನಡೆಸಿದರು.

“ಹೈಕೋರ್ಟ್‌ ಆದೇಶದಲ್ಲಿ ಜಯಲಲಿತಾ ಅವರ ಸಂಪತ್ತನ್ನು ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸಲು ಯಾವುದೇ ನಿರ್ಬಂಧವಿಲ್ಲ ಮತ್ತು ಜಯಲಲಿತಾ ಅವರ ಸಂಬಂಧಿಗಳು ಕೆಲವು ಆಸ್ತಿಗಳಿಗೆ ಸಂಬಂಧಿಸಿದಂತೆ ಕಾನೂನಿನ ಅನ್ವಯ ತಮ್ಮ ಕೋರಿಕೆ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಲಾಗಿದೆ” ಎಂದು ಆದೇಶದಲ್ಲಿ ವಿವರಿಸಿದೆ.

“ತಮಿಳುನಾಡಿನ ಉಪ ಪೊಲೀಸ್‌ ವರಿಷ್ಠಾಧಿಕಾರಿ ಇಂದು ಹಾಜರಾಗಿದ್ದು, 2024ರ ಜನವರಿ 22 ಮತ್ತು ಫೆಬ್ರವರಿ 19ರ ಆದೇಶದ ಅನ್ವಯ ತಮಿಳುನಾಡಿನ ಗೃಹ ಕಾರ್ಯದರ್ಶಿಯಿಂದ ಅಗತ್ಯ ಅನುಮತಿ ಪಡೆದು ಜಂಟಿ ಕಾರ್ಯದರ್ಶಿ ಹಾಗೂ ಪೊಲೀಸ್‌ ಮಹಾ ನಿರ್ದೇಶಕರಿಂದ ಸೂಕ್ತ ಅನುಮತಿ ಪಡೆದು ಪೊಲೀಸ್‌ ವರಿಷ್ಠಾಧಿಕಾರಿ/ಉಪ ಪೊಲೀಸ್‌ ವರಿಷ್ಠಾಧಿಕಾರಿ, ಫೋಟೊಗ್ರಾಫರ್‌, ವಿಡಿಯೋಗ್ರಾಫರ್‌ ಮತ್ತು ಆರು ದೊಡ್ಡ ಟ್ರಂಕ್‌ಗಳು ಹಾಗೂ ಅಗತ್ಯ ಭದ್ರತೆಯೊಂದಿಗೆ ಜಯಲಲಿತಾ ಅವರ ಚಿನ್ನಾಭರಣ ಪಡೆಯಲು 2025ರ ಫೆಬ್ರವರಿ 14 ಮತ್ತು 15ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

“ಜಯಲಲಿತಾ ಅವರ ಚಿನ್ನಾಭರಣಗಳನ್ನು ತಮಿಳುನಾಡಿಗೆ ವರ್ಗಾಯಿಸುವ ದಿನಗಳಂದು ಅಗತ್ಯ ಭದ್ರತಾ ವ್ಯವಸ್ಥೆ ಮಾಡಲು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದ ರಿಜಿಸ್ಟ್ರಾರ್‌ಗೆ ನಿರ್ದೇಶಿಸಲಾಗಿದೆ. ಚಿನ್ನಾಭರಣ ಪಡೆದುಕೊಳ್ಳಲು ಸೂಕ್ತ ಅಧಿಕಾರಿಗಳನ್ನು ನಿಯೋಜಿಸಲು ಅನುಕೂಲವಾಗುವ ನಿಟ್ಟಿನಲ್ಲಿ ನ್ಯಾಯಾಲಯದ ಈ ಆದೇಶವನ್ನು ತಮಿಳುನಾಡಿನ ಗೃಹ ಕಾರ್ಯದರ್ಶಿ, ಐಜಿಪಿಗೆ ಕಚೇರಿಯು ಕಳುಹಿಸಬೇಕು” ಎಂದೂ ಆದೇಶಿಸಿದೆ.

“ಈ ನೆಲೆಯಲ್ಲಿ ಜಯಲಲಿತಾ ಅವರ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ವರ್ಗಾಯಿಸುವುದನ್ನು ಇನ್ನಷ್ಟು ಕಾಲ ಮುಂದೂಡಬೇಕು ಎಂದು ಕೋರಿದ ಜಯಲಲಿತಾ ಅವರ ಸಹೋದರ ಜಯಕುಮಾರ್‌ ಮಕ್ಕಳಾದ ಜೆ ದೀಪಕ್‌ ಮತ್ತು ಜೆ ದೀಪಾ ಅವರ ಮನವಿಯನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಇದಕ್ಕೂ ಮುನ್ನ, ರಾಜ್ಯ ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕ ಕಿರಣ್‌ ಜವಳಿ ಅವರು ಹೈಕೋರ್ಟ್‌ 2025ರ ಜನವರಿ 13ರಂದು ಮಾಡಿರುವ ಆದೇಶವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಲ್ಲಿ ಜಯಲಲಿತಾ ಅವರ ಸಹೋದರ ಜಯಕುಮಾರ್‌ ಮಕ್ಕಳಾದ ಜೆ ದೀಪಕ್‌ ಮತ್ತು ಜೆ ದೀಪಾ ಅವರು ನೂರಾರು ಕೋಟಿ ಮೌಲ್ಯದ ಚಿನ್ನಾಭರಣ ಸೇರಿ ಇತರೆ ವಸ್ತುಗಳನ್ನು ತಮಗೆ ಬಿಡುಗಡೆ ಮಾಡಬೇಕು ಎಂದು ಕೋರಿದ್ದ ಮೇಲ್ಮನವಿಗಳನ್ನು ವಜಾ ಮಾಡುವ ಮೂಲಕ 2023ರ ಜುಲೈ 12ರಂದು ವಿಶೇಷ ನ್ಯಾಯಾಲಯ ಮಾಡಿದ್ದ ಆದೇಶವನ್ನು ಹೈಕೋರ್ಟ ಎತ್ತಿ ಹಿಡಿದಿತ್ತು.

ಅಲ್ಲದೇ, ಕೆಲವು ಆಸ್ತಿಗಳಿಗೆ ಸಂಬಂಧಿಸಿದಂತೆ ದೀಪಕ್‌ ಮತ್ತು ದೀಪಾಗೆ ಹಾಗೂ ಸಂಬಂಧಿಗಳಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಕಲ್ಪಿಸಬೇಕು. ಇದನ್ನು ಕಾನೂನಿನ ಅನ್ವಯ ನಿರ್ಧರಿಸಬೇಕು. ಅಂತೆಯೇ ಜಯಲಲಿತಾ ಅವರಿಗೆ ಸೇರಿದ ಆಸ್ತಿಗಳನ್ನು ವಿಲೇವಾರಿ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ಹೈಕೋರ್ಟ್‌ ಆದೇಶಿಸಿತ್ತು. ಪರಿಶೀಲನಾ ಅವಧಿಯ ಆರಂಭದಲ್ಲಿ ಕೆಲವು ಆಸ್ತಿಗಳನ್ನು ಪರಿಗಣಿಸಿಲ್ಲ ಎಂಬುದನ್ನು ದೀಪಕ್‌ ಮತ್ತು ದೀಪಾ ಅವರು ಸಾಬೀತುಪಡಿಸಲು ಯಶಸ್ವಿಯಾದರೆ ಆ ಆಸ್ತಿಯ ಮೌಲ್ಯವನ್ನು ಅವರಿಗೆ ಪಾವತಿಸಬೇಕು ಎಂದೂ ಹೈಕೋರ್ಟ್‌ ಹೇಳಿದೆ” ಎಂದು ವಿಶೇಷ ನ್ಯಾಯಾಲಯದ ಆದೇಶದಲ್ಲಿ ವಿವರಿಸಲಾಗಿದೆ.

Also Read
ನಗದು, ವಜ್ರಾಭರಣ ಬಿಡುಗಡೆಗೆ ಕೋರಿಕೆ: ಮಾಜಿ ಸಿಎಂ ಜಯಲಲಿತಾ ಸೋದರ ಸಂಬಂಧಿಗಳ ಮೇಲ್ಮನವಿ ವಜಾ ಮಾಡಿದ ಹೈಕೋರ್ಟ್‌

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಲಲಿತಾ ಅವರಿಗೆ ನಾಲ್ಕು ವರ್ಷ ಜೈಲು ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿ 2014ರ ಸೆಪ್ಟೆಂಬರ್‌ 27ರಂದು ಆದೇಶಿಸಿತ್ತು. ಜೊತೆಗೆ ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು.

Also Read
ಜಯಲಲಿತಾ ಚಿನ್ನಾಭರಣ ಪಡೆಯಲು ಆರು ದೊಡ್ಡ ಟ್ರಂಕ್‌ ಜೊತೆ ಬರಲು ತಮಿಳುನಾಡು ಸರ್ಕಾರಕ್ಕೆ ವಿಶೇಷ ನ್ಯಾಯಾಲಯದ ಆದೇಶ

ಈ ಹಿನ್ನೆಲೆಯಲ್ಲಿ ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಅವರು ಜಯಲಲಿತಾ ಅವರ ವಸ್ತುಗಳ ವಿಲೇವಾರಿಗೆ ಕೈಗೊಂಡಿರುವ ಕ್ರಮದ ಮಾಹಿತಿ ನೀಡುವ ಸಂಬಂಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಏನೆಲ್ಲಾ ವಸ್ತುಗಳಿವೆ: 7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ ವಿ ಸೆಟ್ , 8 ವಿಸಿಆರ್, 1 ವಿಡಿಯೊ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್‌ ರೇಕಾರ್ಡರ್, 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.

Kannada Bar & Bench
kannada.barandbench.com