ಆಧಾರ್‌ ಇ-ಕೆವೈಸಿ ಮೂಲಕ ಮೃತ ವ್ಯಕ್ತಿಯ ಗುರುತು ಪರಿಶೀಲಿಸಲು ವ್ಯವಸ್ಥೆ ರೂಪಿಸಿ: ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ಆಸ್ಪತ್ರೆಯವರು ಮಾಹಿತಿ ದಾಖಲಿಸಿದ್ದು, ಇದನ್ನು ವ್ಯಾಪ್ತಿ ಹೊಂದಿರುವ ನ್ಯಾಯಾಲಯ ಆದೇಶ ಮಾಡದ ಹೊರತು ಸರಿಪಡಿಸಲಾಗದು ಎಂದು ಬಿಬಿಎಂಪಿ 23.1.2023ರಂದು ಅರ್ಜಿದಾರರಿಗೆ ಹಿಂಬರಹ ನೀಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
Karnataka HC and Justice Suraj Govindaraj
Karnataka HC and Justice Suraj Govindaraj
Published on

“ಮಾನವನ ಬದುಕಿನ ಪ್ರತಿಯೊಂದು ಅಂಶವನ್ನೂ ಡಿಜಿಟಲೀಕರಣಗೊಳಿಸಲಾಗಿದ್ದು, ಮಾನವನ ಅಸ್ತಿತ್ವವನ್ನು ಡಿಜಿಟಲ್‌ ಮತ್ತು ವಿದ್ಯುನ್ಮಾನ ದತ್ತಾಂಶ ಆಧರಿಸಿ ನಿರ್ಧರಿಸಲಾಗುತ್ತದೆ” ಎಂದಿರುವ ಕರ್ನಾಟಕ ಹೈಕೋರ್ಟ್‌ ಅರ್ಜಿದಾರರೊಬ್ಬರು ಪ್ರಶ್ನಿಸಿದ್ದ ಮರಣ ಪ್ರಮಾಣ ಪತ್ರದಲ್ಲಿ ಅಗತ್ಯ ತಿದ್ದುಪಡಿ ಮಾಡಿ ಹೊಸ ಮರಣ ಪ್ರಮಾಣ ಪತ್ರವನ್ನು 20 ದಿನಗಳಲ್ಲಿ ವಿತರಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿದೆ.

ಪತಿಯ ಮರಣ ಪ್ರಮಾಣ ಪತ್ರದಲ್ಲಿದ್ದ ದೋಷಗಳನ್ನು ಸರಿಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಸಾಯಿ ಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋಂವಿದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಸಾವನ್ನಪ್ಪಿದ ವ್ಯಕ್ತಿಯ ಗುರುತನ್ನು ಆಧಾರ್‌ ಇತ್ಯಾದಿ ಬಳಸಿ ಇ-ಕೆವೈಸಿಯ ಆಧಾರದಲ್ಲಿ ಪರಿಶೀಲಿಸಲು ಸಮರ್ಪಕ ವ್ಯವಸ್ಥೆಯನ್ನು ಬಿಬಿಎಂಪಿಯ ಮುಖ್ಯ ಆಯುಕ್ತರು ಮತ್ತು ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ರೂಪಿಸಬೇಕು. ಹೀಗಾದಲ್ಲಿ, ಮರಣ ಪ್ರಮಾಣ ಪತ್ರದಲ್ಲಿ ಆಸ್ಪತ್ರೆಯವರು ದಾಖಲಿಸುವ ವಿಚಾರಗಳು ಮತ್ತು ಆನಂತರ ನೀಡುವಾಗ ಯಾವುದೇ ದೋಷಗಳಿಗೆ ಆಸ್ಪದ ಇರುವುದಿಲ್ಲ. ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ರುಜುವಾತುಪಡಿಸುವ ಮತ್ತು ಡಿಜಟಲೀಕರಣಗೊಳಿಸುವುದರಿಂದ ಇ-ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಇದಕ್ಕೆ ಡಿಜಿಲಾಕರ್‌ ಅಪ್ಲಿಕೇಶನ್‌ ಬಳಕೆ ಮಾಡಲು ಅವಕಾಶ ಮಾಡಿಕೊಡುವುದರಿಂದ ಅದನ್ನು ಮೂರನೇ ವ್ಯಕ್ತಿಯ ಮುಂದೆ ಹಾಜರುಪಡಿಸಲು ಮತ್ತು ಅವುಗಳ ಅಸಲಿಯತ್ತನ್ನು ಖಾತರಿಪಡಿಸಲು ಅನುಕೂಲವಾಗಲಿದೆ” ಎಂದು ನ್ಯಾಯಾಲಯವು ಹೇಳಿದೆ.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ಪವನ್‌ ಕುಮಾರ್‌ ಅವರು ವ್ಯಕ್ತಿಯು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ ಆಸ್ಪತ್ರೆಯ ಸಿಬ್ಬಂದಿಯು www. ejanma.com ನಲ್ಲಿ ಮಾಹಿತಿ ದಾಖಲಿಸುತ್ತಾರೆ. ಆಸ್ಪತ್ರೆಯ ಸಿಬ್ಬಂದಿ ಹಾಕಿದ ದತ್ತಾಂಶದ ಆಧಾರದಲ್ಲಿ ವ್ಯಾಪ್ತಿ ಹೊಂದಿದ ಅಧಿಕಾರಿಯು ಮರಣ ಪ್ರಮಾಣ ಪತ್ರವನ್ನು ಸಕಾಲ ಪೋರ್ಟಲ್‌ ಮೂಲಕ ಏಳು ದಿನಗಳಲ್ಲಿ ವಿತರಿಸುತ್ತಾರೆ. ಆಸ್ಪತ್ರೆ ಸಿಬ್ಬಂದಿ ದಾಖಲಿಸಿದ ಮಾಹಿತಿಯನ್ನು ಬಿಬಿಎಂಪಿ ಪರಿಶೀಲಿಸುವುದಿಲ್ಲ. www. ejanma.com ನಲ್ಲಿ ಮರುಪರಿಶೀಲನೆಗೆ ಅವಕಾಶ ನೀಡಲಾಗಿಲ್ಲ. ಇದನ್ನು ಎನ್‌ಐಸಿ ರೂಪಿಸಿದೆ” ಎಂದು ತಿಳಿಸಿದ್ದರು.

ಪ್ರಕರಣದ ಹಿನ್ನೆಲೆ: ಸಾಯಿ ಲಕ್ಷ್ಮಿ ಅವರ ಪತಿ ಎಸ್ ಪಿ ಲಕ್ಷ್ಮಿಕಾಂತ ಅವರು ಬಾಗೇಪಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಹಾಯಕ ಶಿಕ್ಷರಾಗಿ ಕೆಲಸ ಮಾಡುತ್ತಿದ್ದು, 22.11.2022ರಂದು ಜಯದೇವ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿಯಲ್ಲಿ ನಿಧನರಾಗಿದ್ದರು. 30.11.2022 ರಂದು ಆಸ್ಪತ್ರೆಯು ಸಾವಿನ ವಿಚಾರ ದಾಖಲಿಸಿತ್ತು. ಆನಂತರ ಫಾರ್ಮ್‌ 4ರಲ್ಲಿ ವೈದ್ಯಕೀಯ ಸರ್ಟಿಫಿಕೇಟ್‌ ನೀಡಿತ್ತು. ಇದನ್ನು ಆಧರಿಸಿ ಬಿಬಿಎಂಪಿಯು 9.12.2022 ರಂದು ಮರಣ ಪ್ರಮಾಣ ಪತ್ರ ನೀಡಿತ್ತು.

ಇದನ್ನು ಪರಿಶೀಲಿಸಿದ್ದ ಅರ್ಜಿದಾರರು ಮರಣ ಪ್ರಮಾಣ ಪತ್ರದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯ ತಂದೆ, ತಾಯಿ ಮತ್ತು ಪತ್ನಿ ಹೆಸರಿನಲ್ಲಿ ಲೋಪದೋಷಗಳು ಇರುವುದನ್ನು ಪತ್ತೆ ಹಚ್ಚಿದ್ದರು. ಇದನ್ನು ಅಸಲಿ ವೈದ್ಯಕೀಯ ಸರ್ಟಿಫಿಕೇಟ್‌, ಆಧಾರ್‌, ಮತದಾರರ ಗುರುತಿನ ಚೀಟಿ, ಕೌಟುಂಬಿಕ ಸರ್ಟಿಫಿಕೇಟ್‌ ಅನ್ವಯ ಸರಿಪಡಿಸಿಕೊಡುವಂತೆ ಅರ್ಜಿದಾರರು 9.1.2023ರಂದು ಅರ್ಜಿ ಸಲ್ಲಿಸಿದ್ದರು.

ಆಸ್ಪತ್ರೆಯವರು ಮಾಹಿತಿ ದಾಖಲಿಸಿದ್ದು, ಇದನ್ನು ವ್ಯಾಪ್ತಿ ಹೊಂದಿರುವ ನ್ಯಾಯಾಲಯ ಆದೇಶ ಮಾಡದ ಹೊರತು ಬಿಬಿಎಂಪಿ ಸರಿಪಡಿಸಲಾಗದು ಎಂದು ಬಿಬಿಎಂಪಿ 23.1.2023ರಂದು ಅರ್ಜಿದಾರರಿಗೆ ಹಿಂಬರಹ ನೀಡಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Attachment
PDF
Sai Lakshmi Vs Chief Registrar Births and Deaths.pdf
Preview
Kannada Bar & Bench
kannada.barandbench.com