ಆಂಬ್ಯುಲೆನ್ಸ್‌ ನಿಯಂತ್ರಣ ಕೊಠಡಿ ಟೆಂಡರ್‌ ಪ್ರಕ್ರಿಯೆ ರದ್ದು: ಆದ್ಯತೆ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಹೈಕೋರ್ಟ್‌ ನಿಗಾವಣೆಯಲ್ಲಿರುವ ರೂ.1,800 ಕೋಟಿ ಮೊತ್ತದ ನಿಯಂತ್ರಣ ಕೊಠಡಿಯ ಟೆಂಡರ್‌ ಪ್ರಕ್ರಿಯೆಯನ್ನು ಸಚಿವ ಡಾ. ಕೆ ಸುಧಾಕರ್‌ ರದ್ದುಪಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಲಾಯಿತು.
ಆಂಬ್ಯುಲೆನ್ಸ್‌ ನಿಯಂತ್ರಣ ಕೊಠಡಿ ಟೆಂಡರ್‌ ಪ್ರಕ್ರಿಯೆ ರದ್ದು: ಆದ್ಯತೆ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಆಂಬ್ಯುಲೆನ್ಸ್‌ಗಳಿಗೆ ಸಂಬಂಧಿಸಿದಂತೆ ಕಮಾಂಡ್‌ ನಿಯಂತ್ರಣ ಕೊಠಡಿಯ ಟೆಂಡರ್‌ ಪ್ರಕ್ರಿಯೆ ಹಳಿ ತಪ್ಪಿರುವುದಕ್ಕೆ ಬುಧವಾರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್‌ ಪ್ರಕರಣಕ್ಕೆ ತುರ್ತು ಆದ್ಯತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಬೆಂಗಳೂರಿನ ಸಾಂಸ್ಕೃತಿಕ ಸಂಸ್ಥೆಯಾದ ಭಾರತ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಟೆಂಡರ್‌ ಅನ್ನು ಅಂತಿಮಗೊಳಿಸುವ ವಿಚಾರವನ್ನು ಸಚಿವ ಸಂಪುಟದ ಮುಂದೆ ಇಡಲಾಗಿಲ್ಲ ಎಂಬುದನ್ನು ಗಮನಿಸಿತು.

ರಾಜ್ಯದಲ್ಲಿ ಆಂಬ್ಯುಲೆನ್ಸ್‌ ನಿಯಂತ್ರಣ ಕೊಠಡಿ ಆರಂಭ ಮತ್ತು ಆಂಬ್ಯುಲೆನ್ಸ್‌ಗಳಲ್ಲಿ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ (ಸಿಸ್ಟಂ) ಅಳವಡಿಸುವಂತೆ ಮನವಿಯಲ್ಲಿ ಕೋರಲಾಗಿದೆ. “ಟೆಂಡರ್‌ ರದ್ದು ಮಾಡುವ ಸಾಧ್ಯತೆ ಇದೆ ಎಂಬ ಆತಂಕ ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಇತ್ತು” ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದರು.

ಅರ್ಜಿದಾರರ ಆತಂಕ ದಿಟವಾಗಿರುವುದು ಮತ್ತು ಹೊಸ ಟೆಂಡರ್‌ ಪ್ರಕ್ರಿಯೆ ಆರಂಭಿಸುವ ಸಂಬಂಧ ಸಂಪುಟ ಸಭೆಯಲ್ಲಿ ಯಾವುದೇ ತೆರನಾದ ಚರ್ಚೆ ನಡೆಸಲಾಗಿಲ್ಲ ಎಂಬುದನ್ನು ಪೀಠವು ದಾಖಲಿಸಿಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಸೂಚನೆ ಪಡೆಯಲು ಕಾಲಾವಕಾಶ ನೀಡುವಂತೆ ಸರ್ಕಾರಿ ವಕೀಲರು ಪೀಠಕ್ಕೆ ಕೋರಿದರು. ಈಗ ಇರುವ ಆಂಬುಲೆನ್ಸ್‌ಗಳಲ್ಲಿ ಏಕೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾಗುವುದಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತು.

Also Read
ಡಿಮ್ಹಾನ್ಸ್‌ಅನ್ನು ಉನ್ನತೀಕರಿಸಿದ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರವಾಗಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

“ಜಿಪಿಎಸ್‌ ವ್ಯವಸ್ಥೆ ಹೊಂದಿರುವ ತುರ್ತು ವೈದ್ಯಕೀಯ ಆಂಬುಲೆನ್ಸ್‌ ಹೊದಗಿಸುವುದು ಅತ್ಯಂತ ಅಗತ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದ್ದರೂ ಈ ವಿಚಾರದಲ್ಲಿ ರಾಜ್ಯ ಸರ್ಕಾರವು ನಡೆದುಕೊಳ್ಳುತ್ತಿರುವ ರೀತಿಯನ್ನು ನಾವು ಪ್ರಶಂಸಿಸಲು ಸಾಧ್ಯವಿಲ್ಲ. ಹಾಲಿ ಇರುವ 108 ಆಂಬುಲೆನ್ಸ್‌ಗಳಲ್ಲಿ ಏಕೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾಗುವುದಿಲ್ಲ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಆಂಬುಲೆನ್ಸ್‌ಗಳನ್ನು ನಿಯಂತ್ರಿಸಲು ನಿಯಂತ್ರಣ ಕೊಠಡಿಯನ್ನು ರಚಿಸಲಾಗಿದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇವೆಗಳನ್ನು ಒದಗಿಸಲಾಗುತ್ತದೆ ಮತ್ತು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಜನರನ್ನು ಸಂಬಂಧಿಸಿದ ಆಸ್ಪತ್ರೆಗಳಿಗೆ ಕಳುಹಿಸಲು ಸಾಧ್ಯವಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಹೈಕೋರ್ಟ್‌ ನಿಗಾವಣೆಯಲ್ಲಿರುವ 1,800 ಕೋಟಿ ರೂಪಾಯಿ ಮೊತ್ತದ ಕಮಾಂಡ್‌ ನಿಯಂತ್ರಣ ಕೊಠಡಿಯ ಟೆಂಡರ್‌ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವು ರದ್ದುಪಡಿಸಿದೆ. ಹಿಂದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರಾಗಿದ್ದ ಡಾ. ಕೆ ಸುಧಾಕರ್‌ ಅವರು ಟೆಂಡರ್‌ ಅನ್ನು ರದ್ದುಪಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಲಾಯಿತು.

Related Stories

No stories found.
Kannada Bar & Bench
kannada.barandbench.com