ಪತ್ನಿಯ ಅಡುಗೆ ಬಗೆಗಿನ ಟೀಕೆ ಐಪಿಸಿ ಸೆಕ್ಷನ್ 498 ಎ ಅಡಿ ಕ್ರೌರ್ಯವಲ್ಲ: ಬಾಂಬೆ ಹೈಕೋರ್ಟ್

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯದ ಆರೋಪ ಹೊರಿಸಿದ್ದ ಪತಿಯ ಸಂಬಂಧಿಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಬಾಂಬೆ ಹೈಕೋರ್ಟ್, ಸೆಕ್ಷನ್ 498 ಎ
ಬಾಂಬೆ ಹೈಕೋರ್ಟ್, ಸೆಕ್ಷನ್ 498 ಎ

ಪತ್ನಿಯ ಅಡುಗೆ ಕೌಶಲ್ಯದ ಬಗ್ಗೆ ಪತಿಯ ಸಂಬಂಧಿಕರು ನಕಾರಾತ್ಮಕ ಟೀಕೆ ಮಾಡುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 498 ಎ ಅಡಿ ಕ್ರೌರ್ಯವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ಇತ್ತೀಚೆಗೆ ತಿಳಿಸಿದೆ.

ತನಗೆ ಅಡುಗೆ ಮಾಡಲು ಬರುವುದಿಲ್ಲ ಹಾಗೂ ಪೋಷಕರು ತನಗೆ ಏನನ್ನೂ ಕಲಿಸಿಲ್ಲ ಎಂದು ಹೇಳುವ ಮೂಲಕ ತನ್ನ ಗಂಡನ ಸಹೋದರರು ನಿಂದಿಸಿ ಅಪಮಾನಿಸುತ್ತಿದ್ದರು ಎಂದು ಪತ್ನಿ ದೂರಿದ್ದರು.

ಆದರೆ, ಇಂತಹ ಹೇಳಿಕೆಗಳು ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯವಲ್ಲ ಎಂದು ನ್ಯಾಯಮೂರ್ತಿಗಳಾದ ಅನುಜಾ ಪ್ರಭುದೇಸಾಯಿ ಮತ್ತು ಎನ್ ಆರ್‌ ಬೋರ್ಕರ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಸೆಕ್ಷನ್‌ 498 ಎ ಪತಿ ಅಥವಾ ಪತಿಯ ಸಂಬಂಧಿಕರು ಪತ್ನಿಯ ಮೇಲೆ ಎಸಗುವ ಕ್ರೌರ್ಯ ಹಾಗೂ ಅದಕ್ಕೆ ವಿಧಿಸಲಾಗುವ ಶಿಕ್ಷೆಯನ್ನು ಒಳಗೊಳ್ಳುತ್ತದೆ.

ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಮತ್ತು ನ್ಯಾಯಮೂರ್ತಿ ಎನ್ ಆರ್ ಬೋರ್ಕರ್
ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಮತ್ತು ನ್ಯಾಯಮೂರ್ತಿ ಎನ್ ಆರ್ ಬೋರ್ಕರ್

ಜುಲೈ 13, 2020ರಲ್ಲಿ ಮದುವೆಯಾಗಿದ್ದ ತಮ್ಮನ್ನು ಅದೇ ವರ್ಷ ನವೆಂಬರ್‌ನಲ್ಲಿ ವೈವಾಹಿಕ ಗೃಹದಿಂದ ಹೊರಹಾಕಲಾಯಿತು. ಹೀಗಾಗಿ ಜನವರಿ 9, 2021ರಲ್ಲಿ ಎಫ್‌ಐಆರ್‌ ದಾಖಲಿಸಿದ್ದಾಗಿ ಮಹಿಳೆ ಹೇಳಿದ್ದರು. ಮದುವೆ ದಿನದಿಂದಲೂ ಪತಿ ತನ್ನೊಂದಿಗೆ ಸಂಸಾರ ನಡೆಸಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು. ಇತ್ತ ಎಫ್ಐಆರ್ ರದ್ದುಗೊಳಿಸುವಂತೆ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.

ಐಪಿಸಿಯ ಸೆಕ್ಷನ್ 498 ಎ ಅರ್ಥದಲ್ಲಿ ಸಣ್ಣ ಜಗಳಗಳು ಕ್ರೌರ್ಯವಾಗುವುದಿಲ್ಲ. ಸೆಕ್ಷನ್ 498 ಎ ಅಡಿಯಲ್ಲಿ ಅಪರಾಧವನ್ನು ಸಾಬೀತುಪಡಿಸಲು, ಮಹಿಳೆ ನಿರಂತರವಾಗಿ ಅಥವಾ ಸತತವಾಗಿ ಕ್ರೌರ್ಯಕ್ಕೆ ಒಳಗಾಗಿರುವುದು ಸಾಬೀತಾಗಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದುಗೊಳಿಸಲು ಸೂಕ್ತ ಎಂದ ನ್ಯಾಯಾಲಯ ಇಬ್ಬರು ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Sandesh Madhukar Salunkhe & Anr v. State of Maharashtra & Anr.pdf
Preview
Kannada Bar & Bench
kannada.barandbench.com