ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಕುರಿತು ಎಂಟು ವಾರಗಳಲ್ಲಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ವಿಲ್ಸನ್ ಗಾರ್ಡನ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ನಡೆಸಿತು.
ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಲು ಪ್ರತ್ಯೇಕ ನಿಯಮಗಳಿವೆಯೇ ಅಥವಾ ಸಂಪೂರ್ಣ ನಿಷೇಧವಿದೆಯೇ? ಷರತ್ತುಬದ್ಧ ಅನುಮತಿ ನೀಡಲು ಅವಕಾಶವಿದೆಯೇ? ಒಂದು ವೇಳೆ ಷರತ್ತುಬದ್ಧ ಅನುಮತಿ ನೀಡಲು ಅವಕಾಶವಿದ್ದಲ್ಲಿ, ಯಾವೆಲ್ಲ ಷರತ್ತುಗಳನ್ನು ವಿಧಿಸಲಾಗುತ್ತದೆ. ಅಂತಹ ಷರತ್ತುಗಳನ್ನು ಉಲ್ಲಂಘಿಸಿದವರ ವಿರುದ್ಧ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗಿದೆಯೇ? ಎಂಬ ಬಗ್ಗೆ ಸಮಗ್ರ ವರದಿಯನ್ನು ಎಂಟು ವಾರಗಳಲ್ಲಿ ಸಲ್ಲಿಸಬೇಕು ಎಂದು ಪೀಠವು ಬಿಬಿಎಂಪಿಗೆ ನಿರ್ದೇಶನ ನೀಡಿತು.
ಇದೇ ವೇಳೆ ವಿಲ್ಸನ್‌ಗಾರ್ಡನ್‌ನ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವವರ ವಿರುದ್ದ ಅದರಲ್ಲೂ ಮುಖ್ಯವಾಗಿ ಹೂವಿನ ವ್ಯಾಪಾರಿಗಳ ಕುರಿತು ಪರಿಶೀಲನೆ ನಡೆಸಿ, ಬೆಂಗಳೂರು ದಕ್ಷಿಣದ ಮುಖ್ಯ ಎಂಜಿನಿಯರ್ ಅವರು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಆ ವರದಿ ಆಧರಿಸಿ ಏನು ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ಮೂರು ವಾರಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿತು.
ವಿಲ್ಸನ್ ಗಾರ್ಡನ್‌ನಲ್ಲಿ ಅಂದಾಜು 14 ಅಡ್ಡ ರಸ್ತೆಗಳಿವೆ. ನಾಲ್ಕು ವರ್ಷಗಳಿಂದೀಚೆಗೆ ಬಹುತೇಕ ಎಲ್ಲ ರಸ್ತೆಗಳಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಒಟ್ಟು 115 ಮಳಿಗೆಗಳಿದ್ದು, ಅವುಗಳಲ್ಲಿ ಎಂಟಕ್ಕೆ ಮಾತ್ರ ಬಿಬಿಎಂಪಿ ಅನುಮತಿ ನೀಡಿದೆ. ರಸ್ತೆಯ ಎರಡೂ ಬದಿಗಳಲ್ಲಿ ಅನಧಿಕೃತವಾಗಿ ಹೂವು ಹಾಗೂ ಹಣ್ಣಿನ ಅಂಗಡಿ, ಟ್ಯಾಕ್ಸಿ ಕಚೇರಿಗಳನ್ನು ತೆರೆಯಲಾಗಿದೆ. ಚಾಲಕರು ಟ್ಯಾಕ್ಸಿಗಳನ್ನು ಮನೆಗಳ ಮುಂದೆ ನಿಲ್ಲಿಸುತ್ತಿದ್ದಾರೆ. ಟ್ಯಾಕ್ಸಿ ಒಳಗೆ ಮದ್ಯಪಾನ, ಇಸ್ಪೀಟು ಆಡುತ್ತಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ರಸ್ತೆಯಲ್ಲಿ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತಿದೆ. ತಡರಾತ್ರಿಯಾದರೂ ವ್ಯಾಪಾರಸ್ಥರು ಹಾಗೂ ಗ್ರಾಹಕರು ಇರುತ್ತಾರೆ. ಇದರಿಂದ ಸ್ಥಳೀಯರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಮಹಿಳೆಯರು ಹಾಗೂ ಯುವತಿಯರಿಗೆ ಸುರಕ್ಷತೆ ಇಲ್ಲವಾಗಿದೆ. ಆದ್ದರಿಂದ, ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಲು ಮತ್ತು ಅವುಗಳ ತೆರವಿಗೆ ವಿಫಲರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಬೇಕು ಅರ್ಜಿಯಲ್ಲಿ ಕೋರಲಾಗಿದೆ.